ADVERTISEMENT

ಮಠ ಮಾನ್ಯಗಳಿಂದ ಸಮಾಜಕ್ಕೆ ಒಳಿತು: ಜಯಸಿದ್ದೇಶ್ವರ ಶಿವಾಚಾರ್ಯರು

ಹುಣಸಗಿ: ಶಿವಲಿಂಗ ಸ್ವಾಮಿಗಳ 66ನೇ ಪುಣ್ಯಾರಾಧನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 6:56 IST
Last Updated 15 ಡಿಸೆಂಬರ್ 2025, 6:56 IST
ಹುಣಸಗಿ ಪಟ್ಟಣದ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಶಿವಲಿಂಗಸ್ವಾಮಿಗಳ 66ನೇ ಆರಾಧನಾ ಮಹೋತ್ಸವಕ್ಕೆ ಸ್ವಾಮಿಜಿ ಗಳು ಹಾಗೂ ಗಣ್ಯರು ಚಾಲನೆ ನೀಡಿದರು
ಹುಣಸಗಿ ಪಟ್ಟಣದ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಶಿವಲಿಂಗಸ್ವಾಮಿಗಳ 66ನೇ ಆರಾಧನಾ ಮಹೋತ್ಸವಕ್ಕೆ ಸ್ವಾಮಿಜಿ ಗಳು ಹಾಗೂ ಗಣ್ಯರು ಚಾಲನೆ ನೀಡಿದರು   

ಹುಣಸಗಿ: ‘ಅನಾದಿ ಕಾಲದಿಂದಲೂ ಮಠ ಮಾನ್ಯಗಳು ಸಮಾಜದ ಒಳಿತಾಗಿ ಶ್ರಮಿಸುವ ಮೂಲಕ ತನ್ನದೇ ಆದ ವಿಶಿಷ್ಟ ಶಕ್ತಿಯನ್ನು ಹೊಂದಿವೆ’ ಎಂದು ಹಿರೂರು ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ ಜಯಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ಶಿವಲಿಂಗಸ್ವಾಮಿಗಳ 66ನೇ ಆರಾಧನಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಶರಣರ ಜೀವನ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶರಣರು, ಸಂತರು, ಮಹಾಂತರು ನಮ್ಮ ಸಮಾಜದ ಆಸ್ತಿಯಾಗಿದ್ದಾರೆ. ಶಿವಲಿಂಗೇಶ್ವರರರು ಅಗಾಧವಾದ ಮಹಿಮಾ ಪುರಷರಾಗಿದ್ದರು. ಇದರಿಂದಾಗಿಯೇ ಇಲ್ಲಿ ಪುಣ್ಯಾರಾಧನೆ ನಿಮಿತ್ತ  ಪ್ರತಿವರ್ಷವೂ ಅನೇಕ ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಭಕ್ತರ ಕಷ್ಟಗಳನ್ನು ದೂರ ಮಾಡುವ ಶಕ್ತಿ ಇದೆ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಜೇರಟಗಿಯ ವಿರಕ್ತಮಠದ ಮಹಾಂತ ಸ್ವಾಮೀಜಿ ಮಾತನಾಡಿ, ಶರಣರ ಜೀವನ ಎನ್ನುವದು ತೆರೆದಿಟ್ಟ ಪುಸ್ತಕದಂತೆ, ಅವರಲ್ಲಿ ಯಾವುದೇ ಅಳುಕು ಇರುವದಿಲ್ಲ. ಆದ್ದರಿಂದಲೇ ಅವರ ಮಾತುಗಳಲ್ಲಿ ಅಷ್ಟು ತೂಕ ಹಾಗೂ ಶಕ್ತಿ ಇರುತ್ತಿತ್ತು ಎಂದರು.

ಭಾನುವಾರ ಬೆಳಿಗ್ಗೆ ಕತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪಟ್ಟಣ ಸೇರಿದಂತೆ ಮಠದ ಭಕ್ತರು ಆಗಮಿಸಿ ದರ್ಶನ ಪಡೆದರು. ಬಳಿಕ ಎಲ್ಲ ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಮಠದ ಶಿವಲಿಂಗಸ್ವಾಮಿ ವಿರಕ್ತಮಠ , ಪಟ್ಟಣ ಪಂಚಾಯಿತಿ ಸದಸ್ಯರಾದ ಸಿದ್ದು ಮುದಗಲ್ಲ, ಸೋಮಶೇಖರ ಸ್ಥಾವರಮಠ, ಕಿಡಿಗಣ್ಣಯ್ಯ ಮುತ್ಯಾ, ಗುರುಲಿಂಗಪ್ಪ ಸಜ್ಜನ, ಬಸಣ್ಣ ದೇಸಾಯಿ, ನಾಗಯ್ಯಸ್ವಾಮಿ ದೇಸಾಯಿಗುರು, ಹೊನ್ನಕೇಶವ ದೇಸಾಯಿ, ಶಾಂತಗೌಡ ಪಾಟೀಲ, ಕಾಶಿನಾಥ ಹೊಸಮಠ, ಚಂದ್ರಶೇಖರ ದೇಸಾಯಿ, ಬಾಪುಗೌಡ ಪಾಟೀಲ, ಮೇಲಪ್ಪ ಗುಳಗಿ, ಪ್ರಕಾಶ ಚಂದಾ, ಶರಣು ಪಡಶೆಟ್ಟಿ ಸೇರಿದಂತೆ ಇತರರು ಇದ್ದರು.

ಶರಣಬಸವ ವಿರಕ್ತಮಠ ಸ್ವಾಗತಿಸಿದರು. ಆನಂದ ಬಾರಿಗಿಡದ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.