ADVERTISEMENT

ಸುಗಮ ಸಂಚಾರಕ್ಕೆ ರಸ್ತೆ ದುರಸ್ತಿಗೊಳಿಸಿ

ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ, ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 20:00 IST
Last Updated 26 ಆಗಸ್ಟ್ 2019, 20:00 IST
ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್‌ ಮಾತನಾಡಿದರು
ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್‌ ಮಾತನಾಡಿದರು   

ಯಾದಗಿರಿ: ‘ಕಾರ್ಮಿಕ ಇಲಾಖೆ ಶಿಫಾರಸು ಮಾಡಿದ 14 ಮಾರ್ಗಗಳಲ್ಲಿ ರಸ್ತೆಗಳು ಹದಗೆಟ್ಟಿದ್ದು, ಈ ಮಾರ್ಗಗಳಲ್ಲಿ ಬಸ್‍ಗಳು ಸುಗಮವಾಗಿ ಸಂಚರಿಸಲು ಶೀಘ್ರ ರಸ್ತೆ ದುರಸ್ತಿ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯ ಕಾರ್ಖಾನೆ ಮತ್ತು ಉದ್ದಿಮೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಸುರಕ್ಷಿತವಲ್ಲದ ವಾಹನಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ವರದಿ ನೀಡಿದ್ದಾರೆ. ಕಾರ್ಮಿಕರ ಅನುಕೂಲಕ್ಕಾಗಿ ಹದಗೆಟ್ಟಿರುವ ರಸ್ತೆಗಳನ್ನು ತಕ್ಷಣ ದುರಸ್ತಿಗೊಳಿಸಬೇಕು’ ಎಂದು ಪಂಚಾಯತ್ ರಾಜ್ ಎಂಜಿನಿಯರ್‌ ವಿಭಾಗದ ಇಇ ಮಲ್ಲಿಕಾರ್ಜುನ ಎಚ್., ಅವರಿಗೆ ಸೂಚಿಸಿದರು.

ADVERTISEMENT

ಶಾಲೆಯಲ್ಲಿ ಜಾಗೃತಿ ಮೂಡಿಸಿ:‘ಜಿಲ್ಲೆಯಲ್ಲಿ ಆಟೋರಿಕ್ಷಾ, ಕ್ಯಾಬ್‍ಗಳಲ್ಲಿ ಆಸನ ಸಾಮರ್ಥ್ಯಕ್ಕಿಂತ ಹೆಚ್ಚಿನ ಶಾಲಾ ಮಕ್ಕಳ ಸಾಗಣೆ ಮಾಡಲಾಗುತ್ತಿದೆ. ಹೀಗಾಗಿ ಜಿಲ್ಲೆಯ ಸರ್ಕಾರಿ, ಹಾಗೂ ಖಾಸಗಿ ಶಾಲೆಗಳಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿ ವರದಿ ಸಲ್ಲಿಸುವಂತೆ’ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಅವರಿಗೆ ಸೂಚಿಸಿದರು.

‘ನಗರದ ಡಾನ್‍ಬಾಸ್ಕೊ ಶಾಲೆಯ ಮಕ್ಕಳು ರಾಷ್ಟ್ರೀಯ ಹೆದ್ದಾರಿ ಮೇಲೆ ಗುಂಪು ಗುಂಪಾಗಿ ನಿಲ್ಲುತ್ತಾರೆ. ಇದರಿಂದ ಅಪಘಾತ ಸಂಭವಿಸಬಹುದು. ಹಾಗಾಗಿ, ಶಾಲೆಯ ಆವರಣದಲ್ಲಿಯೇ ಆಟೋ ನಿಲುಗಡೆಗೆ ವ್ಯವಸ್ಥೆ ಮಾಡುವಂತೆ ಶಾಲೆಯ ಆಡಳಿತ ಮಂಡಳಿಗೆ ಸೂಚಿಸಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಶಾಲಾ ಮಕ್ಕಳು, ಕೂಲಿ ಕಾರ್ಮಿಕರನ್ನು ಹೊತ್ತೊಯ್ಯುವ ವಾಹನಗಳು ಮೋಟಾರ್ ವಾಹನ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸಬೇಕು. ನಗರದಲ್ಲಿ ಆಟೋ ನಿಲ್ದಾಣಗಳನ್ನು ಗುರುತಿಸಬೇಕು. ಗಾಂಧಿ ಚೌಕ್‍ನಲ್ಲಿ ಬಸ್ ನಿಲುಗಡೆಗೆ ಸ್ಥಳ ಗುರುತಿಸಬೇಕು. ಹಳೆ ಬಸ್ ನಿಲ್ದಾಣದ ರಸ್ತೆ ಬದಿ ವ್ಯಾಪಾರಸ್ಥರಿಗೆ ಸ್ಥಳಾವಕಾಶ ಕಲ್ಪಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ ಮಾತನಾಡಿ, ‘ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ₹ 1 ಸಾವಿರ ದಂಡ ವಿಧಿಸಲಾಗುವುದು’ ಎಂದರು.

‘ನಗರದ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನಗಳ ನಿಲುಗಡೆ ತಪ್ಪಿಸಲು ಒಂದು ದಿನ ರಸ್ತೆಯ ಬಲಬದಿ, ಮತ್ತೊಂದು ದಿನ ರಸ್ತೆಯ ಎಡಬದಿ ವಾಹನಗಳು ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಡಿವೈಎಸ್ಪಿ ಯು.ಶರಣಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಚವಾಣ, ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೋಗೇರಿ, ಪೌರಾಯುಕ್ತ ರಮೇಶ ಸುಣಗಾರ, ಬಸವರಾಜ ಶಿವಪೂಜೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉಪವಿಭಾಗದ ಎಇಇ ಸಿದ್ದಲಿಂಗಪ್ಪ ಐರೆಡ್ಡಿ, ಕಾರ್ಮಿಕ ಇಲಾಖೆ ವೃತ್ತ ನಿರೀಕ್ಷಕ ಶಿವಶಂಕರ ಬಿ.ತಳವಾರ, ಜಿಲ್ಲಾ ಬಾಲ ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.