ADVERTISEMENT

ವಡಗೇರಾ: ಅಕಾಲಿಕ ಮಳೆ, ನೆಲಕ್ಕೆ ಉರುಳಿದ ಭತ್ತದ ಬೆಳೆ

ದೇವಿಂದ್ರಪ್ಪ ಬಿ.ಕ್ಯಾತನಾಳ
Published 9 ಏಪ್ರಿಲ್ 2020, 19:30 IST
Last Updated 9 ಏಪ್ರಿಲ್ 2020, 19:30 IST
ವಡಗೇರಾ ತಾಲ್ಲೂಕಿನ ಕೊಂಕಲ್ ಗ್ರಾಮದಲ್ಲಿ ಆಲಿಕಲ್ಲು ಮಳೆಯಿಂದ ಭತ್ತದ ಬೆಳೆ ನೆಲಕಚ್ಚಿದೆ
ವಡಗೇರಾ ತಾಲ್ಲೂಕಿನ ಕೊಂಕಲ್ ಗ್ರಾಮದಲ್ಲಿ ಆಲಿಕಲ್ಲು ಮಳೆಯಿಂದ ಭತ್ತದ ಬೆಳೆ ನೆಲಕಚ್ಚಿದೆ   

ವಡಗೇರಾ: ‘ಈ ಹಾಳಾದ ಕೊರೊನಾ ವೈರಸ್ ನಮ್ಮ ಜೀವನವನ್ನೇ ಹಾಳು ಮಾಡಿದೆ. ಲಾಕ್‌ಡೌನ್ ಇರುವುದರಿಂದ ನಮ್ಮ ಹೊಲಗಳಿಗೆ ಭತ್ತದ ರಾಶಿ ಮಾಡುವ ಯಂತ್ರಗಳು ಬರುತ್ತಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ನಮ್ಮ ಸ್ಥಿತಿ’

– ಇದು ತಾಲ್ಲೂಕಿನ ಕೊಂಕಲ್, ಕುರಿಹಾಳ, ಐಕೂರು, ಮಾಚನೂರು, ಅನಸಗುರು ಸೇರಿದಂತೆ ಹಲವು ಗ್ರಾಮಗಳ ರೈತರ ಅಳಲು.

ಮಂಗಳವಾರ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಸುಮಾರು ಎರಡು ಸಾವಿರ ಎಕರೆ ಭತ್ತ, ಸಜ್ಜೆ, ತರಕಾರಿ ಸೇರಿದಂತೆ ವಿವಿಧ ಬೆಳೆಗಳು ನೆಲಕ್ಕಚ್ಚಿವೆ. ಕೈಗೆ ಬಂದ ಫಸಲು ಭೂಮಿ ಪಾಲಾಗಿದ್ದನ್ನು ಕಂಡು ರೈತರು ಕಣ್ಣೀರಿಡುತ್ತಿದ್ದಾರೆ.

ADVERTISEMENT

ಕೃಷ್ಣಾ ನದಿ ತೀರದ ಭತ್ತ ಬೆಳೆಗಾರರು ನೀರು, ವಿದ್ಯುತ್ ಪೂರೈಕೆ ಸಮಸ್ಯೆಯ ನಡುವೆಯೂ ಕಷ್ಟಪಟ್ಟು ಸಾಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಭತ್ತ ಬೆಳೆದಿದ್ದರು. ಆದರೆ ಈ ಮಳೆಯಿಂದ ಫಸಲು ನೆಲಕ್ಕೆ ಬಿದ್ದು ರೈತರನ್ನು ಸಂಕಷ್ಟಕ್ಕೆ ಈಡುಮಾಡಿದೆ.

‘ನಮ್ಮ ರಾಜ್ಯದಲ್ಲಿ ಭತ್ತದ ಕಟಾವು ಯಂತ್ರಗಳ ಕೊರತೆ ಇರುವುದರಿಂದ ರೈತರು ಆಂಧ್ರಪ್ರದೇಶದಿಂದ ಯಂತ್ರಗಳನ್ನು ತರಿಸಿಕೊಳ್ಳುತ್ತಿದ್ದರು. ಲಾಕ್‌ಡೌನ್ ಇರುವುದರಿಂದ ಯಂತ್ರದ ಮಾಲೀಕರು ಬರಲು ಒಪ್ಪಲಿಲ್ಲ. ಇದರಿಂದ ಈ ಬೆಳೆ ಕಟಾವು ಮಾಡಲು ತಡವಾಗುತ್ತಿದೆ. ಬಂದ ಎರಡು ಮೂರು ಯಂತ್ರಗಳ ಮೂಲಕ ಸಾವಿರಾರು ಎಕರೆ ಭತ್ತದ ಕಟಾವು ಮಾಡಲು ಆಗುತ್ತಿಲ್ಲ’ ಎಂದು ರೈತರು ಗೋಳು ತೋಡಿಕೊಂಡರು.

ಲಾಕ್‌ಡೌನ್ ಕಾರಣ ಮಾರುಕಟ್ಟೆ ಸಮಸ್ಯೆ ಉಂಟಾಗಿದೆ. ನಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಸರಿಯಾದ ಪರಿಹಾರ ನೀಡಬೇಕು. ಮಾರುಕಟ್ಟೆಗೆ ತೆರಳಿ ಬೆಳೆಗಳನ್ನು ಮಾರಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

‘ಐಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 38 ಮಿ.ಮೀ ಮಳೆ ಆಗಿದೆ. ಗಾಳಿ ಮತ್ತು ಆಲಿಕಲ್ಲು ರಭಸಕ್ಕೆ ಭತ್ತದ ತೆನೆಗಳು ನೆಲೆಕ್ಕೆ ಬಿದ್ದಿವೆ. ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆ ಮಾಡಿ ವರದಿ ಸಲ್ಲಿಸಲಾಗುತ್ತದೆ. ನಂತರ ಪರಿಹಾರ ನೀಡಲಾಗುತ್ತದೆ’ ಎಂದು ಹೈಯಾಳ (ಬಿ) ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅತೀಕ್ ಉಲ್ಲಾ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.