ಯಾದಗಿರಿ: ‘ಗುರುಮಠಕಲ್‌ನಲ್ಲಿನ ಪಡಿತರ ಅಕ್ಕಿಯ ಅಕ್ರಮ ದಾಸ್ತಾನು ಆರೋಪ ಪ್ರಕರಣದ ತನಿಖೆಯನ್ನು ಉನ್ನತ ಮಟ್ಟದ ಏಜೆನ್ಸಿಗೆ ವಹಿಸಿ, ಎಲ್ಲ ಆಯಾಮಗಳಿಂದ ತನಿಖೆ ಮಾಡಬೇಕು’ ಎಂದು ಸಾಮೂಹಿಕ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಂಜಾರ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಬಂಗಾರು ಜಿ.ಬಿ.ರಾಠೋಡ, ‘ಯಾದಗಿರಿ ಜಿಲ್ಲೆಯಲ್ಲಿ ಅಕ್ರಮ ಪಡಿತರ ಅಕ್ಕಿ ಪ್ರಕರಣಗಳು ಪದೇ ಪದೇ ನಡೆಯುತ್ತಿವೆ. ಇದರಿಂದ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ. ಜತೆಗೆ ಬಡವರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ ಆಗುತ್ತಿದೆ. ಇದೆಲ್ಲದ್ದಕ್ಕೂ ಕಡಿವಾಣ ಹಾಕಲು ಉನ್ನತ ಮಟ್ಟದ ತನಿಖೆಯ ಅಗತ್ಯವಿದೆ’ ಎಂದರು.
‘ಅಧಿಕಾರಿಗಳ ಕೈವಾಡ ಇಲ್ಲದೆ ಸಾವಿರಾರು ಕ್ವಿಂಟಲ್ ಪಡಿತರ ಅಕ್ಕಿ ಅಕ್ರಮ ನಡೆಯುವುದಿಲ್ಲ. ಇಂತಹ ಪ್ರಕರಣಗಳು ಬೆಳಕಿಗೆ ಬಂದಾಗ ಕೆಲವರನ್ನಷ್ಟೇ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಆಗುತ್ತಿಲ್ಲ’ ಎಂದು ಆರೋಪಿಸಿದರು.
ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ರಾಮಸಮುದ್ರ ಮಾತನಾಡಿ, ‘ನರೇಂದ್ರ ರಾಠೋಡ ಅವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ. ಇದರ ಹಿಂದೆ ಪ್ರಭಾವಿ ರಾಜಕಾರಣಿಯೊಬ್ಬರ ಕೈವಾಡ ಇರುವ ಶಂಕೆ ಇದೆ. ರಾಜ್ಯದಲ್ಲಿನ ಎಲ್ಲ ಮಿಲ್‌ಗಳ ಬಗ್ಗೆಯೂ ತನಿಖೆ ನಡೆಯಬೇಕು’ ಎಂದು ಹೇಳಿದರು.
‘ಅಕ್ಕಿ ಅಕ್ರಮ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸದೆ ಇದ್ದರೆ ಜಿಲ್ಲೆಯಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು’ ಎಂದು ಮುಖಂಡರು ಪ್ರತಿಕ್ರಿಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಮುಖಂಡ ವಿಜಯಕುಮಾರ ಮೊಗದಂಪುರ, ಕರವೇ ಸ್ವಾಭಿಮಾನ ಬಣದ ಜಿಲ್ಲಾಧ್ಯಕ್ಷ ಬೀರೇಶ ಚಿರತೆನೋರ್, ಸಂತ ಸೇವಲಾಲ್ ಮಹಾರಾಜ ಬಂಜಾರ ಟ್ರಸ್ಟ್ ಅಧ್ಯಕ್ಷ ಕಾಶಿನಾಥ ರಾಠೋಡ, ಸಂತ ಸೇವಾಲಾಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮೋಹನ ಯದ್ಲಾಪುರ, ಮುಖಂಡರಾದ ರಮೇಶ ಪವಾರ್, ಗೋಪಾಲ, ವಿಜಯ ಜಾಧವ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.