ADVERTISEMENT

ಗುರುಮಠಕಲ್: ದುರಸ್ತಿಯಾಗದ ರಸ್ತೆ, ತಪ್ಪದ ಕಿರಿ–ಕಿರಿ

ಚಪೆಟ್ಲಾ: ಡಿ.ಸಿ ಗ್ರಾಮ ವಾಸ್ತವ್ಯ ಇಂದು; ಪರಿಹಾರದ ನಿರೀಕ್ಷೆಯಲ್ಲಿ ಜನ

ಎಂ.ಪಿ.ಚಪೆಟ್ಲಾ
Published 16 ಏಪ್ರಿಲ್ 2022, 4:19 IST
Last Updated 16 ಏಪ್ರಿಲ್ 2022, 4:19 IST
ಗುರುಮಠಕಲ್ ತಾಲ್ಲೂಕಿನ ಚಪೆಟ್ಲಾ ಗ್ರಾಮದ ಮುಖ್ಯರಸ್ತೆ ಹದಗೆಟ್ಟಿರುವುದು
ಗುರುಮಠಕಲ್ ತಾಲ್ಲೂಕಿನ ಚಪೆಟ್ಲಾ ಗ್ರಾಮದ ಮುಖ್ಯರಸ್ತೆ ಹದಗೆಟ್ಟಿರುವುದು   

ಗುರುಮಠಕಲ್: ಇಲ್ಲಿ ಅಲ್ಪಮಳೆಯಾದರೂ ಮುಖ್ಯರಸ್ತೆಯು ಕೆಸರು ಗದ್ದೆಯಾಗುತ್ತದೆ. ಇದರಿಂದ ಪಾದಚಾರಿಗಳು, ವಾಹನ ಸವಾರರು ಪಡುವ ಪಡಿಪಾಟಲು ಒಂದೆರಡಲ್ಲ. ಕೆಸರುಗದ್ದೆ ಮತ್ತು ಗುಂಡಿಯಲ್ಲಿ ಮಣ್ಣು ಸುರಿದಷ್ಟು ಇನ್ನಷ್ಟು ಸಮಸ್ಯೆಯಾಗುತ್ತಿದೆ ಹೊರತು ಪರಿಹಾರ ಆಗುತ್ತಿಲ್ಲ. ಜಿಲ್ಲಾಧಿಕಾರಿಯವರು ಗ್ರಾಮವಾಸ್ತವ್ಯ ಮಾಡಿದ ನಂತರವಾದರೂ ನಮ್ಮ ಗ್ರಾಮದ ಸಮಸ್ಯೆ ಬಗೆಹರಿಯುವುದೇ?

–ಚಪೆಟ್ಲಾ ಗ್ರಾಮಸ್ಥರಲ್ಲಿ ಕಾಡುತ್ತಿರುವ ಪ್ರಶ್ನೆ ಇದು.

ಶನಿವಾರ (ಏಪ್ರಿಲ್ 16) ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದ್ದು, ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆಯಲ್ಲಿ ಅವರು ಇದ್ದಾರೆ.

ADVERTISEMENT

‘ರಸ್ತೆ ದುರಸ್ತಿ ಮಾಡಲಾಗುವುದು ಎಂಬ ಭರವಸೆ ಐದು ವರ್ಷಗಳಿಂದ ನೀಡಲಾಗುತ್ತಿದೆ. ಆದರೆ, ಪೂರ್ಣಪ್ರಮಾಣದಲ್ಲಿ ಈಡೇರುತ್ತಿಲ್ಲ. ಒಂದು ಹಂತದ ಕಾಮಗಾರಿ ನಡೆದಿದ್ದು, ಇನ್ನೊಂದು ಹಂತದ ಡಾಂಬರೀಕರಣ ಕಾರ್ಯ ಶೀಘ್ರವೇ ನಡೆಸಲಾಗುವುದು ಎಂದು ಹೇಳಲಾಗುತ್ತಿದೆ ಹೊರತು ಕಾರ್ಯರೂಪಕ್ಕೆ ಬರುತ್ತಿಲ್ಲ. ಗುರುಮಠಕಲ್‌ನಿಂದ ಗಾಜರಕೋಟ ಗ್ರಾಮದವರೆಗೆ 50ಕ್ಕೂ ಹೆಚ್ಚು ಗುಂಡಿಗಳಿವೆ’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

‘ಕಲಬುರಗಿ ಜಿಲ್ಲೆ ಚಿತ್ತಾಪುರದಿಂದ ಪಕ್ಕದ ತೆಲಂಗಾಣ ಗಡಿಯಲ್ಲಿನ ತಾಲ್ಲೂಕಿನ ಪುಟಪಾಕ ಗ್ರಾಮದವರೆಗಿನ ರಸ್ತೆಯು ರಾಜ್ಯ ಹೆದ್ಧಾರಿಯಾಗಲಿದೆ ಎಂಬ ಗ್ರಾಮಸ್ಥರ ಕನಸು, ನಿರೀಕ್ಷೆ ಹುಸಿಯಾಗಿದೆ. ಕೆಸರುಗದ್ದೆಯಲ್ಲಿ ನಡೆಯುವುದೇ ಗತಿ. ಸಮಸ್ಯೆಗಳು ಬಗೆಹರಿಯುತ್ತಿಲ್ಲ’ ಎಂದು ಬಸ್ವಂತರೆಡ್ಡಿ ಪೆದ್ನಾಗಮ್ಮೋಳ, ಶರಣಪ್ಪ ಕೊಂಕಲ್ ಹಾಗೂ ಸಾಬಪ್ಪ ಅವರು ಹೇಳುತ್ತಾರೆ.

‘ದ್ವಿಚಕ್ರ ವಾಹನ ಸವಾರರು ಈಗಾಗಲೇ ಆಯ ತಪ್ಪಿ ಕೆಳಗಡೆ ಬಿದ್ದು, ಗಾಯಗೊಂಡಿದ್ದಾರೆ’ ಎಂದು ಗ್ರಾಮಸ್ಥರು ಹೇಳಿದರು.

ಪಾದಚಾರಿಗಳೂ ನಿತ್ಯ ಸಂಕಷ್ಟ ಒಳಗಾಗುತ್ತಾರೆ. ರಸ್ತೆ ದುರಸ್ತಿಗೆ ಕೋರಿ ಹಲವು ಬಾರಿ ಮನವಿಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.