ADVERTISEMENT

ಯಾದಗಿರಿ: ರೋಹಿತ್‌ ಚಕ್ರತೀರ್ಥ ಪಠ್ಯ ಪರಿಷ್ಕರಣೆ ವಿರುದ್ಧ ಜೂನ್‌ 27ರಂದು ಧರಣಿ

ಬಸವಣ್ಣ, ಅಂಬೇಡ್ಕರ್‌ ಸೇರಿದಂತೆ ಮಹನೀಯರಿಗೆ ಅಪಮಾನ: ಖಾಸಶ್ರೀ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 16:38 IST
Last Updated 23 ಜೂನ್ 2022, 16:38 IST
ಮುರುಘರಾಜೇಂದ್ರ ಸ್ವಾಮೀಜಿ
ಮುರುಘರಾಜೇಂದ್ರ ಸ್ವಾಮೀಜಿ   

ಯಾದಗಿರಿ: ‘ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣ ಸಮಿತಿಯ ಪುಸ್ತಕಗಳನ್ನು ರದ್ದುಮಾಡಬೇಕು ಎಂದು ಆಗ್ರಹಿಸಿ 27ರಂದು ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಲಾಗುವುದು’ ಎಂದು ಗುರುಮಠಕಲ್ ಖಾಸಾ ಮಠದ ಪೀಠಾಧಿಪತಿ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.

ಮಠ್ಯ ಪರಿಷ್ಕರಣೆಯ ಹೆಸರಿನಲ್ಲಿ ನಮ್ಮ ನಾಡಿನ ಅಸ್ಮಿತೆಯಾದ ವಿಶ್ವಗುರು ಬಸವಣ್ಣನವರ ಇತಿಹಾಸವನ್ನು ಸರಿಯಾಗಿ ಕಟ್ಟಿಕೊಡುವಲ್ಲಿ ರೋಹಿತ್‌ ಚಕ್ರತೀರ್ಥ ಸೋತಿದ್ದಾರೆ. ಇದನ್ನು ಖಂಡಿಸಿ 27ರಂದು ಬೆಳಿಗ್ಗೆ 10.30ಕ್ಕೆ ಮೈಲಾಪುರ ಆಗಸಿಯಿಂದ ಗಾಂಧಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿ ಧರಣಿ ನಡೆಸಲಾಗುವುದು ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿವಿಧ ಮಠಾಧೀಶರು, ಪ್ರಗತಿಪರರು, ರೈತ ಮುಖಂಡರು, ಕನ್ನಡ ಹಾಗೂ ದಲಿತ ಪರ ಸಂಘಟನೆಗಳು, ಸೂಫಿ ಪರಂಪರೆ ಅನುಸರಿಸುವರು ಸೇರಿದಂತೆ ಅನೇಕರು ಬೆಂಬಲ ನೀಡಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾದ್ದಾರೆ. ಈಗಾಗಲೇ ನಗರದಲ್ಲಿ ಪ್ರತಿಭಟನೆ ಪೂರ್ವಭಾವಿಯಾಗಿ ಸಭೆ ಮಾಡಲಾಗಿದ್ದು, ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ADVERTISEMENT

ಬ್ರಾಹ್ಮಣಿಕೆಯ ಸಂಕೇತವಾದ ಉಪನಯನವನ್ನು ಧಿಕ್ಕರಿಸಿ ಬಂದ ಬಸವಣ್ಣನವರಿಗೆ ಉಪನಯನವಾಗಿತ್ತು ಎಂದು ಹೇಳಿ ಇತಿಹಾಸಕ್ಕೆ ಅಪಚಾರವೆಸಿಗಿದ್ದಾರೆ. ಡಾ.ಬಿ.ಆರ್‌.ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ವಿಶ್ವವೇ ಕೊಂಡಾಡುತ್ತಿದೆ. ಇದನ್ನು ಪರಿಷ್ಕರಣ ಸಮಿತಿ ತೆಗೆದು ಹಾಕಿದ್ದು ಐತಿಹಾಸಿಕ ಸತ್ಯವನ್ನು ಮರೆಮಾಚುವ ಯತ್ನವಲ್ಲವೇ ಎಂದು ಪ್ರಶ್ನಿಸಿದರು.

ಕನ್ನಡನಾಡಿನ ಅಸ್ಮಿತೆಯನ್ನು ಹೇಳುವ ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ತುಂಬುವ 12ನೇ ಶತಮಾನದ ಶರಣೆ ಅಕ್ಕಮಹಾದೇವಿ, ಶರಣ ಅಂಬಿಗರ ಚೌಡಯ್ಯ ವಚನಗಳು ತೆಗೆದುಹಾಕುವುದು ನಮ್ಮ ನಾಡಿನ ಸಂಸ್ಕೃತಿ ಕಡೆಗಣಿಸಿದಂತೆ ಆಗಿದೆ. ಕೇರಳದ ನಾರಾಯಣ ಗುರು ಮತ್ತು ಪೆರಿಯಾರ್‌ ಕಂದಾಚಾರಗಳು ಧಿಕ್ಕರಿಸಿ ಹೊಸ ಮನ್ವಂತರ ಬರೆದವರು. ಪರಂಪರೆಯ ನೆಪದಲ್ಲಿ ಭಾರತೀಯ ಮೌಲ್ಯಗಳನ್ನು ಮೂಲೆಗುಂಪು ಮಾಡುವ ಶಕ್ತಿಗಳ ವಿರುದ್ಧ ಹೋರಾಟ ಮಾಡಿದವರು. ಈ ಮಹನೀಯರ ಬದುಕು ಆದರ್ಶವಲ್ಲವೇ. ಇದನ್ನು ಚಕ್ರತಿರ್ಥ ಸಮಿತಿ ತೆಗೆದುಹಾಕಿದ್ದಾರೆ ಎಂದರು.

ಪಠ್ಯ ಪರಿಷ್ಕರಣೆ ನೆಪದಲ್ಲಿ ಹಲವಾರು ಐತಿಹಾಸಿಕ ತಪ್ಪುಗಳನ್ನು ಮಾಡಿದ ಚಕ್ರತೀರ್ಥ ಸಮಿತಿಯ ಅಧ್ವಾನಗಳನ್ನು ಸರಿಪಡಿಸಬೇಕು. ಇಲ್ಲವೇ ಹಿಂದೆ ಡಾ. ಬರಗೂರು ರಾಮಚಂದ್ರಪ್ಪನವರ ನೇತೃತ್ವದಲ್ಲಿ ಮಾಡಿದ ಪಠ್ಯ ಪರಿಷ್ಕರಣೆ ಪಟ್ಟವನ್ನು ಮುಂದುವರಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಿಶ್ವನಾಥ್ ಗೊಂದಡಿಗಿ, ಚನ್ನಪ್ಪ ಅನೆಗುಂದಿ, ಮಲ್ಲಿಕಾರ್ಜುನ ಸತ್ಯಂಪೇಟೆ, ಚಂದ್ರಕಲಾ ವಡಗೇರಾ, ದಾವಲ್‌ ಸಾಬ್‌ ನದಾಫ್‌, ಎ.ಸಿ.ಕಾಡ್ಲೂರು, ಚೆನ್ನಮಲ್ಲಿಕಾರ್ಜುನ, ಮಲ್ಲಣ್ಣ ನೀಲಹಳ್ಳಿ, ಗುಂಡಪ್ಪ ಕಲ್ಬುರ್ಗಿಸೇರಿದಂತೆ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.