
ಶಹಾಪುರ: ತಾಲ್ಲೂಕಿನ ಭೀಮರಾಯನಗುಡಿಯ ಕೃಷ್ಣಾ ಕಾಡಾ ಆಡಳಿತ ಕಚೇರಿಯ ಮುಂದುಗಡೆ ಇರುವ ವಿಶಾಲ ಜಾಗದಲ್ಲಿ ಪ್ರಜಾಸೌಧ ನಿರ್ಮಾಣದ ಚಿಂತನೆ ಸಾಗಿದೆ. ಸದ್ದುಗದ್ದಲವಿಲ್ಲದೆ ಕಂದಾಯ ಇಲಾಖೆ ಸಿಬ್ಬಂದಿ ಜಮೀನು ಅಳತೆ, ಚೆಕ್‌ಬಂದಿ, ಸ್ಕೇಚ್ ಮ್ಯಾಪ್ ದಾಖಲೆಗಳನ್ನು ಸಂಗ್ರಹಿಸುವ ಕೆಲಸ ಸಾಗಿದೆ.
ಈಗಾಗಲೇ ಪ್ರಜಾಸೌಧ ನಿರ್ಮಾಣಕ್ಕೆ ₹ 17ಕೋಟಿ ಮಂಜೂರಾಗಿದೆ. ನಗರದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಾಲ್ಕು ಎಕರೆ ಜಮೀನು ಶಿಕ್ಷಣ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾವಣೆಗೊಂಡಿತ್ತು. ಇನ್ನೇನು ಅಡಿಗಲ್ಲು ಹಾಕಬೇಕು ಎನ್ನುವಷ್ಟರಲ್ಲಿ ಕೆಲ ಸಂಘಟನೆಗಳ ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರಜಾಸೌಧ ನಿರ್ಮಾಣದ ಕೆಲಸವನ್ನು ಹಿಂಪಡೆದಿರುವುದು ಈಗ ಹಳೆ ವಿಷಯವಾಗಿದೆ.
‘ಪ್ರಜಾಸೌಧ ನಿರ್ಮಾಣಕ್ಕಾಗಿ ಕಂದಾಯ ಇಲಾಖೆಯ ಹೆಸರಿನಲ್ಲಿ ಪಹಣಿ ಪತ್ರಿಕೆ ನಾಲ್ಕು ಎಕರೆ ಜಮೀನು ಇನ್ನು ಇದೆ. ಹೊಸ ಪ್ರಸ್ತಾವನೆಯನ್ನು ಸಲ್ಲಿಸಿ ಮರಳಿ ಜಿಲ್ಲಾಧಿಕಾರಿ ಆದೇಶದಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಹಶೀಲ್ದಾರ್ ಸಿದ್ಧಾರೂಢ ಬನ್ನಿಕೊಪ್ಪ ಮಾಹಿತಿ ನೀಡಿದರು.
‘ಲಭ್ಯ ಇರುವ ಜಮೀನು ಕೆಬಿಜೆಎಲ್‌ಎಲ್ ನಿಗಮದ ಆಸ್ತಿಯಾಗಿದೆ. ನಿಗಮದಿಂದ ಕಂದಾಯ ಇಲಾಖೆಗೆ ವರ್ಗಾವಣೆ ಮಾಡಿಕೊಂಡು ಭೀಮರಾಯನಗುಡಿ ಬಳಿ ಪ್ರಜಾಸೌಧ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಅನುಕೂಲ. ಅಲ್ಲದೆ ಹೆದ್ದಾರಿಗೆ ಹೊಂದಿಕೊಂಡು ವಿಶಾಲವಾದ ಜಾಗವಿದೆ. ವಾಹನ ಸಂಚಾರಕ್ಕೂ ಸಮಸ್ಯೆ ಇಲ್ಲ. ಯಾವುದೇ ಅಭಿವೃದ್ಧಿ ಜನಪರ ಯೋಜನೆಯು ಅನುಷ್ಠಾನಗೊಳ್ಳುವಾಗ ಸಾರ್ವಜನಿಕ ಹಿತಾಸಕ್ತಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಬರುತ್ತಿರುವಾಗ ಅನವಶ್ಯಕವಾಗಿ ತೊಂದರೆ ನೀಡಿ ರಾಜಕೀಯ ವಾಸನೆ ಬೆರೆಸುವುದು ಬೇಡ ಎನ್ನುತ್ತಾರೆ’ ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ.
ಜನಹಿತ ದೃಷ್ಟಿಯಿಂದ ಪ್ರಜಾಸೌಧ ನಿರ್ಮಾಣದ ಜಾಗವನ್ನು ಮೊದಲು ಅಂತಿಮಗೊಳಿಸಿ. ಈಗಾಗಲೇ ಬಿಡಗಡೆಯಾಗಿರುವ ಅನುದಾನ ವಾಪಸ್ಸು ಹೋಗದಂತೆ ನೋಡಿಕೊಳ್ಳಬೇಕು ಎಂದು ಜನತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ.
- ಶಖಾಪುರ ಗ್ರಾಮದ ವ್ಯಾಪ್ತಿಯಲ್ಲಿ ಜಮೀನು ಬರುತ್ತದೆ. ಪ್ರಜಾಸೌಧ ನಿರ್ಮಾಣಕ್ಕೆ ಇನ್ನೂ ಪ್ರಸ್ತಾವನೆ ಸಲ್ಲಿಸಿಲ್ಲ. ಆದರೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು.ಸಿದ್ದಾರೂಢ ಬನ್ನಿಕೊಪ್ಪ ತಹಶೀಲ್ದಾರ್ ಶಹಾಪುರ
ಅಂಬೇಡ್ಕರ ಚೌಡಯ್ಯ ಭವನ ನಿರ್ಮಿಸಿ
ಶಹಾಪುರ: ‘ಇಲ್ಲಿನ ಪ್ರಥಮ ದರ್ಜೆ ಕಾಲೇಜಿನ ಆವರಣದ ಜಾಗದಲ್ಲಿ ಪ್ರಜಾಸೌಧ ನಿರ್ಮಾಣಕ್ಕಾಗಿ ನಾಲ್ಕು ಎಕರೆ ಜಮೀನು ಕಂದಾಯ ಇಲಾಖೆಗೆ ಹಸ್ತಾಂತರಗೊಂಡಿದೆ. ಪ್ರಜಾಸೌಧ ನಿರ್ಮಾಣವನ್ನು ಹಿಂಪಡೆಯಲಾಗಿದೆ. ಆದರೆ ನಾಲ್ಕು ಎಕರೆ ಜಾಗದಲ್ಲಿ ಡಾ. ಅಂಬೇಡ್ಕರ್ ಭವನ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಭವನ ನಿರ್ಮಾಣಕ್ಕೆ ತಲಾ ಎರಡು ಎಕರೆ ಹಸ್ತಾಂತರಿಸಬೇಕು’ ಎಂದು ರೈತ ಮುಖಂಡ ಸಿದ್ದಯ್ಯ ಸ್ವಾಮಿ ಹಿರೇಮಠ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ. ‘ಈಗಾಗಲೇ ಕಾಲೇಜಿನ ಜಾಗದಲ್ಲಿ ಟೌನ್‌ಹಾಲ್ ನಿರ್ಮಿಸಿದ್ದಾರೆ. ಯಾವುದೇ ತೊಂದರೆ ಆಗಿಲ್ಲ. ಅದರಂತೆ ಮಹಾಪುರಷರ ಹೆಸರಿನಲ್ಲಿ ಭವನ ನಿರ್ಮಿಸಿದರೆ ಆಯಾ ಸಮುದಾಯಕ್ಕೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.