ADVERTISEMENT

ಯಾದಗಿರಿ | ಕುಡಿಯುವ ನೀರಿನ ಅಕ್ರಮ ಮಾರಾಟ ದಂಧೆ: ಸಾರ್ವಜನಿಕರ ಆರೋಪ

​ಪ್ರಜಾವಾಣಿ ವಾರ್ತೆ
ಟಿ.ನಾಗೇಂದ್ರ
Published 21 ಏಪ್ರಿಲ್ 2025, 7:04 IST
Last Updated 21 ಏಪ್ರಿಲ್ 2025, 7:04 IST
ಶಹಾಪುರ ನಗರದ ವಾರ್ಡ್ ನಂ.30ರಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಯಂತ್ರ
ಶಹಾಪುರ ನಗರದ ವಾರ್ಡ್ ನಂ.30ರಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಯಂತ್ರ   

ಶಹಾಪುರ: ಸರ್ಕಾರ ಕಡಿಮೆ ದರದಲ್ಲಿ ಜನತೆಗೆ ಗುಣಮಟ್ಟದ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದು ಅದರಂತೆ ಆರ್‌ಒ ಪ್ಲಾಂಟ್ ಸ್ಥಾಪಿಸಲು ಖಾಸಗಿ ವ್ಯಕ್ತಿಗಳಿಗೆ ಅವಕಾಶ ನೀಡಿತು. ಅದನ್ನೇ ಬಂಡವಾಳ ಮಾಡಿಕೊಂಡ ಕೆಲವರು  ಈಗ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಮಾರಾಟ ದಂಧೆಗೆ ಇಳಿದಿದ್ದಾರೆ. ಕಡಿವಾಣ ಹಾಕಬೇಕಾದ ಅಧಿಕಾರಿಗಳು ಕೈಕಟ್ಟಿ ಕುಳಿತರೆ ಜನತೆಯ ಪಾಡೇನು ಎಂಬ ಪ್ರಶ್ನೆ ಮೂಡಿದೆ.

ನಗರಸಭೆ ಅಧೀನದಲ್ಲಿ 6 ಹಾಗೂ ಖಾಸಗಿ ವ್ಯಕ್ತಿಗಳು ಸ್ಥಾಪಿಸಿರುವ 20 ಆರ್‌ಒ ಪ್ಲಾಂಟ್ ಇವೆ. ಕೆಲ ಖಾಸಗಿ ಆರ್‌ಒ ಪ್ಲಾಂಟ್ ಕಂಪನಿ ಅವರು ಸ್ವಂತ ‍ಪ್ಲಾಸ್ಟಿಕ್ ಬಾಟಲಿ ಸಿದ್ಧಪಡಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೆಸರಿಗಷ್ಟೇ ಐಎಸ್‌ಐ ಅಂತ ಲೇಬಲ್ ಅಂಟಿಸಿರುತ್ತಾರೆ. ಅದರ ಗುಣಮಟ್ಟದ ನೀರು ಇರುವುದಿಲ್ಲ ಎಂದು ಜನರು ಆರೋಪಿಸುತ್ತಾರೆ

‘ಬೇಸಿಗೆ ಕಾಲದಲ್ಲಿ ಮೊದಲು ಗುಟುಕು ನೀರು ಸಿಕ್ಕರೆ ಸಾಕು ನಂತರ ವಿಚಾರಿಸೋಣ ಎನ್ನುವ ಮನಸ್ಥಿತಿಯಲ್ಲಿ ಗ್ರಾಹಕರು ಇರುವಾಗ ಅದನ್ನೇ ಬಂಡವಾಳ ಮಾಡಿಕೊಂಡಿರುವ ಆರ್‌ಒ ಪ್ಲಾಂಟ್ ಮಾಲೀಕರು ಬೇಕಾಬಿಟ್ಟಿಯಾಗಿ ಜನತೆಯಿಂದ ಹಣ ವಸೂಲಿಯ ಜತೆಗೆ ದೋಷಪೂರಿತ ನೀರು ಸರಬರಾಜು ಮಾಡಿ ಜೀವ ಕಂಟಕವನ್ನು ತರುತ್ತಿದ್ದಾರೆ. ಇದರ ಬಗ್ಗೆ ದೂರು ಯಾರಿಗೆ ಸಲ್ಲಿಸಬೇಕು ಎಂಬ ಮಾಹಿತಿ ಕೊರತೆಯು ಮಾರಾಟಗಾರರಿಗೆ ವರವಾಗಿ ಪರಿಣಮಿಸಿದೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ.

ADVERTISEMENT

25 ಲೀಟರ್ ಕ್ಯಾನ್‌ಗೆ ₹ 5 ರೂ. ತೆಗೆದುಕೊಳ್ಳಬೇಕು ಎಂಬ ಷರತ್ತು ಹಾಕಿ ಆರ್‌ಒ ಪ್ಲಾಂಟ್ ಮಾಲೀಕರಿಗೆ ನೀರು ಮಾರಾಟಕ್ಕೆ ಅನುಮತಿಯನ್ನು ನಗರಸಭೆ ಪರವಾನಗಿ ನೀಡಿದೆ. ಆದರೆ ದುಪ್ಪಟ್ಟು ಬೆಲೆ ಹಾಗೂ ಬೇಸಿಗೆ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚಳ ಮಾಡುತ್ತಾರೆ. ಇದನ್ನು ಪ್ರಶ್ನಿಸಿದರೆ ನೀರು ಇಲ್ಲ ಎಂದು ವಾಪಸ್ಸು ಕಳುಹಿಸುತ್ತಾರೆ.

ಈಗಾಗಲೇ ನಗರದಲ್ಲಿ ಸ್ಥಾಪಿಸಿರುವ ಆರ್‌ಒ ಪ್ಲಾಂಟ್ ಖಾಸಗಿ ಕಂಪನಿಯ ವಿಷಕಾರಕ ನೀರು ಸರಬರಾಜು ಮಾಡುತ್ತಿದೆ. ಅದನ್ನು ರದ್ದುಗೊಳಿಸುವಂತೆ ಸರ್ಕಾರ ಆರೋಗ್ಯ ಸುರಕ್ಷಾ ಅಧಿಕಾರಿಗೆ ಸೂಚನೆ ನೀಡಿದ್ದರೂ ಇನ್ನೂ ಮೀನವೇಷ ಎಣಿಸುತ್ತಿದ್ದಾರೆ ಎಂಬ ಆರೋಪ ಜನರಿಂದ ಕೇಳಿಬರುತ್ತಿದೆ.

ಹೊರೆಯಾದ ವಿಲೇವಾರಿ: ಕುಡಿಯುವ ನೀರಿಗಾಗಿ ಸಿದ್ಧಪಡಿಸಿದ ವಿವಿಧ ಅಳತೆಯ ಬಾಟಲಿಗಳನ್ನು ಹಾಗೂ ಪ್ಲಾಸ್ಟಿಕ್ ಚೀಲವನ್ನು ಬೇಕಾಬಿಟ್ಟಿಯಾಗಿ ಎಸೆಯುತ್ತಾರೆ. ಈಗ ಬೇಸಿಗೆ ಕಾಲವಾಗಿದ್ದರಿಂದ ಚಹಾ ಅಂಗಡಿ, ರಸ್ತೆ, ನಿಲ್ದಾಣ ಮುಂತಾದ ಜನವಸತಿ ಪ್ರದೇಶದಲ್ಲಿ ನೀರು ಕುಡಿದು ಬಾಟಲಿ ಎಸೆಯುತ್ತಾರೆ. ಅದನ್ನು ವಿಲೇವಾರಿ ಮಾಡುವುದು ಸವಾಲಿನ ಕೆಲಸವಾಗಿದೆ ಎನ್ನುತ್ತಾರೆ ಪರಿಸರ ಇಲಾಖೆಯ ಎಂಜಿನಿಯರ್ ಹರೀಶ ಸಜ್ಜನಶೆಟ್ಟಿ.

ಖಾಲಿ ಬಾಟಲಿಗಳನ್ನು ಚರಂಡಿಯಲ್ಲಿ ಎಸೆಯುತ್ತಾರೆ ಹಾಗೂ ಮಳೆ ನೀರಿನಲ್ಲಿ ಬಾಟಲಿ ಚರಂಡಿಗೆ ಹರಿದು ಬರುತ್ತವೆ. ಆಗ ಚರಂಡಿಗೆ ಅಳವಡಿಸಿದ ಪೈಪ್‌ಲೈನ್‌ ಬಾಯಿಗೆ ಬಂದು ನಿಲ್ಲುತ್ತವೆ. ಇದರಿಂದ ನೀರು ಸರಾಗವಾಗಿ ಸಾಗುವುದಿಲ್ಲ. ಇದು ಮತ್ತಷ್ಟು ತೊಂದರೆ ನೀಡುತ್ತಲಿದೆ ಎನ್ನುತ್ತಾರೆ ಅವರು.

ಶಹಾಪುರ ನಗರದಲ್ಲಿ ವಾರ್ಡ್ ನಂ.27ರಲ್ಲಿ ಹಾಳು ಬಿದ್ದಿರುವ ಘಟಕ

ಪ್ಲಾಂಟ್ ಬಳಿ ಬಂದು ನೀರು ತೆಗೆದುಕೊಂಡು ಹೋಗಬೇಕು. ಬಾಟಲಿಯಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುವಂತೆ ಇಲ್ಲ. ಶಹಾಪುರದಲ್ಲಿ ಮೂರು ಘಟಕ ಮಾತ್ರ ಐಎಸ್‌ಐ ಟ್ರೇಡ್ ಮಾರ್ಕ್ ಹೊಂದಿವೆ. ಉಳಿದ ಕಂಪನಿಗಳ ವಿರುದ್ಧ ಅಗತ್ಯ ಕ್ರಮಕ್ಕೆ ನೋಟಿಸ್‌ ನೀಡಲಾಗುವುದು.

– ನಾಗಣ್ಣ ವೆಂಕಟಾಪುರ ಜಿಲ್ಲಾ ಆಹಾರ ಸುರಕ್ಷಾ ಅಧಿಕಾರಿ

_______

ನಗರದ ಬಸವೇಶ್ವರ ವೃತ್ತದಲ್ಲಿ ಒಂದು ಟ್ರ್ಯಾಕ್ಟರ್ ಖಾಲಿ ಬಾಟಲಿ ವಿಲೇವಾರಿ ಮಾಡುತ್ತೇವೆ. ಸಾರ್ವಜನಿಕರು ಜಾಗೃತರಾಗಬೇಕು. ದಂಡ ವಿಧಿಸಲು ಮುಂದಾದರೆ ಒತ್ತಡ ಹಾಕುತ್ತಾರೆ. ಪ್ಲಾಸ್ಟಿಕ್ ನಿಷೇಧಿಸುವಂತೆ ಸಾರ್ವಜನಿಕರಲ್ಲಿ ಅರಿವು ಜಾಗೃತಿ ಮೂಡಿಸಲಾಗುತ್ತಿದೆ.

– ಹರೀಶ ಸಜ್ಜನಶೆಟ್ಟಿ ಪರಿಸರ ಇಲಾಖೆ ಎಂಜಿನಿಯರ್

_______

ನಗರದಲ್ಲಿ ನೀರಿನ ಮಾರಾಟ ಜಾಲವಿದೆ. ಬಾಟಲಿಯಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ನಮಗೆ ಗದರಿಸುತ್ತಾರೆ. ಜಿಲ್ಲಾ ಆಹಾರ ಸುರಕ್ಷಾ ಅಧಿಕಾರಿಗಳು ಹಾಗೂ ನಗರ ನೈರ್ಮಲ್ಯ ಅಧಿಕಾರಿ ಗಮನಹರಿಸಬೇಕು.

– ಮಾನಪ್ಪ ಹಡಪದ ಸಾಮಾಜಿಕ ಕಾರ್ಯಕರ್ತ ಶಹಾಪುರ

‘₹ 1.60 ಲಕ್ಷ ಬಾಡಿಗೆ ಹಣ ಪಾವತಿಸಿಲ್ಲ’

ಶಹಾಪುರ: ನಗರಸಭೆಯ ಅಧೀನದಲ್ಲಿ ಆರು ಆರ್‌ಒ ಪ್ಲಾಂಟ್ ಇವೆ. ಬಾಡಿಗೆ ರೂಪದಲ್ಲಿ ನೀರು ಮಾರಾಟಕ್ಕೆ ನೀಡಿದ್ದಾರೆ. ಪ್ರತಿ ತಿಂಗಳು ಅವುಗಳಿಂದ ₹ 27 ಸಾವಿರ ಹಣ ಬರುತ್ತದೆ. ಆದರೆ ಸರಿಯಾಗಿ ಹಣ ಪಾವತಿಸುತ್ತಿಲ್ಲ. ಇನ್ನೂ ₹ 1.60 ಲಕ್ಷ ಬಾಡಿಗೆ ಹಣ ಪಾವತಿಸಬೇಕು. ಇವೆಲ್ಲದರ ನಡುವೆ ಅವಧಿ ಮುಗಿದಿದೆ ಎಂದು ನಗರಸಭೆ ಆರು ಪ್ಲಾಂಟ್‌ಗೆ ಟೆಂಡರ್ ಕರೆದಿದೆ. ಯಾರದೋ ದುಡ್ಡು ಯಾರದೊ ಜಾತ್ರೆ ಎನ್ನುವಂತಿದೆ ಶಹಾಪುರ ನಗರಸಭೆ ಆಡಳಿತ ವೈಖರಿ ಎನ್ನುತ್ತಾರೆ ಜನತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.