ADVERTISEMENT

ಬಳಿಚಕ್ರ : ಇನ್ನೂ ಬೋನಿಗೆ ಬೀಳದ ಚಿರತೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 15:26 IST
Last Updated 28 ಆಗಸ್ಟ್ 2021, 15:26 IST
ಸೈದಾಪುರ ಸಮೀಪದ ಬಳಿಚಕ್ರ ಗ್ರಾಮದ ಮಶೆಮ್ಮ ಬೆಟ್ಟದಲ್ಲಿ ಚಿರತೆ ಸೆರೆ ಹಿಡಿಯಲು ಇರಿಸಿದ್ದ ಬೋನ್
ಸೈದಾಪುರ ಸಮೀಪದ ಬಳಿಚಕ್ರ ಗ್ರಾಮದ ಮಶೆಮ್ಮ ಬೆಟ್ಟದಲ್ಲಿ ಚಿರತೆ ಸೆರೆ ಹಿಡಿಯಲು ಇರಿಸಿದ್ದ ಬೋನ್   

ಬಳಿಚಕ್ರ(ಸೈದಾಪುರ): ಬಳಿಚಕ್ರ ಗ್ರಾಮದ ಮಶೆಮ್ಮ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷವಾಗಿ ಹತ್ತು ದಿನಗಳು ಕಳೆದರೂ ಇದುವರೆಗೂ ಬೋನಿಗೆ ಬಿದ್ದಿಲ್ಲ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಸಮೀಪದ ಬಳಿಚಕ್ರ ಗ್ರಾಮದಲ್ಲಿ ಆಗಸ್ಟ್ 21ರ ಸಂಜೆ 6ರ ವೇಳೆಗೆ ಮಶೆಮ್ಮ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಅದನ್ನು ಸೆರೆ ಹಿಡಿಯಲು ಅರಣ್ಯ ಅಧಿಕಾರಿ, ಸಿಬ್ಬಂದಿ, ಪೊಲೀಸರು ಗಸ್ತು ಕಾರ್ಯಾರಂಭಿಸಿದ್ದರು.

ಆ.22ರ ರಾತ್ರಿಯೇ ಚಿರತೆ ಸೆರೆಗೆ ಗುರುಮಠಕಲ್‍ನಿಂದ ಬೋನ್ ತಂದು ನಿರ್ದಿಷ್ಟ ಸ್ಥಳದಲ್ಲಿ ಇರಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಚಿರತೆ ಬೋನಿಗೆ ಬಿದ್ದಿಲ್ಲ. ಅಧಿಕಾರಿಗಳು ಕೂಡ ಚಿರತೆ ಹಿಡಿಯುವ ಸಾಹಸ ಮಾಡುತ್ತಿಲ್ಲ. ಕಳೆದ 2–3 ದಿನಗಳ ಹಿಂದೆ ಜೀರಿಗೆ ಬೆಟ್ಟ ಮತ್ತು ಕಿಲ್ಲನಕೇರಾ ಸೀಮೆ ವ್ಯಾಪ್ತಿಯಲ್ಲಿ ಚಿರತೆ ಓಡಾಡಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ADVERTISEMENT

2–3 ದಿನಗಳಿಂದ ಯಾವುದೇ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳದಲ್ಲಿ ಇಲ್ಲ. ಇದರಿಂದ ಗ್ರಾಮಸ್ಥರಲ್ಲಿ ಭಯ ಹೆಚ್ಚಾಗಿದೆ. ಹಗಲಿನಲ್ಲಿ ಕೃಷಿ ಚಟುವಟಿಕೆಗಳಿಗೆ ಗ್ರಾಮಸ್ಥರು ಗುಂಪು ಗುಂಪಾಗಿ ತೆರಳುತ್ತಿದ್ದಾರೆ. ರಾತ್ರಿ ವೇಳೆ ಹೊಲ ಗದ್ದೆಗಳಿಗೆ ಹೋಗುವುದು ನಿಲ್ಲಿಸಿದ್ದಾರೆ. ಜನ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕಾಟಾಚಾರಕ್ಕೆ ಬೋನ್ ತಂದು ಬೆಟ್ಟದಲ್ಲಿ ಇಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.