ADVERTISEMENT

ಶಹಾಪುರ | ಈಗ ನಳನಳಿಸುತ್ತಿದ್ದಾಳೆ ‘ಕೃಷ್ಣೆ’

ಮರಳು ಸಾಗಣೆ ಸಂಪೂರ್ಣ ನಿಷೇಧ

ಟಿ.ನಾಗೇಂದ್ರ
Published 24 ಏಪ್ರಿಲ್ 2020, 19:45 IST
Last Updated 24 ಏಪ್ರಿಲ್ 2020, 19:45 IST
ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿಯ ಕೃಷ್ಣಾ ನದಿ ಸ್ವಚ್ಛವಾಗಿದೆ
ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿಯ ಕೃಷ್ಣಾ ನದಿ ಸ್ವಚ್ಛವಾಗಿದೆ   

ಶಹಾಪುರ: ಲಾಕ್ ಡೌನ್ ಅವಧಿಯಲ್ಲಿ ರೈತರ ಜೀವನಾಡಿ ಕೃಷ್ಣಾ ನದಿ ಸ್ವಚ್ಛವಾಗಿದೆ. ನದಿಯ ನೀರು ಕನ್ನಡಿಯಂತೆ ನಮ್ಮ ಬಿಂಬವನ್ನು ಪ್ರತಿಬಿಂಬಿಸುತ್ತಲಿದೆ. ಜಲಚರಗಳು ನಿಸರ್ಗದ ಮಡಲಿನಲ್ಲಿ ಮಿಂದೇಳುತ್ತಿವೆ.

ಲಾಕ್ ಡೌನ್ ಅವಧಿಯಲ್ಲಿ ಮರಳು ಸಾಗಾಣಿಕೆಗೆ ಜಿಲ್ಲಾಡಳಿತ ಸಂಪೂರ್ಣವಾಗಿ ನಿರ್ಬಂಧ ಹೇರಿದ್ದರಿಂದ ಮತ್ತು ಅಕ್ರಮವಾಗಿ ಮರಳು ಸಾಗಣೆ ಮಾಡುವುದು ಸ್ಥಗಿತಗೊಂಡಿದ್ದರಿಂದ ಕೃಷ್ಣೆ ಶಾಂತವಾಗಿ ಹರಿಯುತ್ತಿದ್ದಾಳೆ.

ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿ ಚೆಕ್ ಪೋಸ್ಟ್ ಆರಂಭಿಸಿದ್ದರಿಂದ ಶಹಾಪುರ-ದೇವದುರ್ಗ ಹೆದ್ದಾರಿಯ ರಸ್ತೆ ಸಂಚಾರ ಸ್ಥಗಿತವಾಗಿದೆ. ನದಿಗೆ ಹೊಂದಿಕೊಂಡಂತೆ ಗಡ್ಡೆಗುಳಿ ಬಸವೇಶ್ವರ ದೇವಸ್ಥಾನದ ಮುಂದೆ ಮದುವೆ ಹಾಗೂ ಇನ್ನಿತರ ಕಾರ್ಯಗಳು ನಡೆಯುತ್ತಿದ್ದವು. ತ್ಯಾಜ್ಯ ವಸ್ತುಗಳನ್ನು ನದಿಯ ಪಕ್ಕದಲ್ಲಿಯೇ ಬಿಸಾಡುತ್ತಿದ್ದರು. ತಿಂಗಳಿನಿಂದ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ.

ADVERTISEMENT

‘ನದಿಯಲ್ಲಿಯೇ ಕೃತಕ ರಸ್ತೆ ಮಾಡಿ ಹಿಟಾಚಿ ಯಂತ್ರಗಳ ಮೂಲಕ ಟಿಪ್ಪರ್‌ಗಳಲ್ಲಿ ಮರಳು ತುಂಬಿ ಸಾಗಿಸಲಾಗುತ್ತಿತ್ತು. ಇದರಿಂದ ಕೋಟ್ಯಂತರ ಮೌಲ್ಯದ ಮರಳು ಸಾಗಣೆಯಾಗಿ ನದಿಯ ಒಡಲು ಬರಿದಾಗುತ್ತಿತ್ತು. ಸದ್ಯ ಲಾಕ್ ಡೌನ್‌ದಿಂದಾಗಿ ಮರಳು ನದಿಯಲ್ಲೇ ಉಳಿದುಕೊಂಡಿದೆ. ವಿಶೇಷ ಎಂದರೆ ಈ ಬಾರಿ ಪ್ರವಾಹದಿಂದ ಕೃಷ್ಣಾ ನದಿ ತಟದಲ್ಲಿ ಹೆಚ್ಚಿನ ಪ್ರಮಾಣದ ಮರಳು ಸಂಗ್ರಹವಾಗಿದೆ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಹಣಮಂತ ಭಂಗಿ.

‘ನದಿಯ ಎಡ ಮತ್ತು ಬಲ ಭಾಗದ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದಾಗ ರಸಗೊಬ್ಬರದ ವಿಷಯುಕ್ತ ನೀರನ್ನು ನದಿಗೆ ಹರಿಬಿಡಲಾಗುತ್ತಿತ್ತು. ಈಗ ಭತ್ತದ ಕಟಾವು ಮುಗಿದು ಹೋಗಿದೆ. ವಿಷಯುಕ್ತ ನೀರು ಬರುತ್ತಿಲ್ಲ. ನದಿಯಲ್ಲಿ ನೀರು ಹರಿಯುವಿಕೆಯ ಪ್ರಮಾಣವು ಪ್ರಸಕ್ತ ವರ್ಷ ಉತ್ತಮವಾಗಿದೆ’ ಎನ್ನುತ್ತಾರೆ ಕೊಳ್ಳೂರ ಗ್ರಾಮದ ರೈತ ಮುಖಂಡ ಲಕ್ಷ್ಮಿಕಾಂತ ನಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.