
ಸುರಪುರ: ‘ತಾಲ್ಲೂಕಿನಲ್ಲಿ ಮರಳು ಮಾಫಿಯಾ ಮೀತಿ ಮೀರಿದೆ. ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದೆ. ಗ್ರಾಮಗಳ ರಸ್ತೆಗಳು ಹದಗೆಟ್ಟು ಹೋಗಿವೆ. ಅಕ್ರಮ ಮರಳು ಸಾಗಣೆ ತಡೆಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ಹಣಮಂತ ನಾಯಕ (ಬಬ್ಲುಗೌಡ) ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇವಲ ಎರಡೇ ಡಕ್ಕಾಗಳು (ಅನುಮತಿ ನೀಡಿದ ಸ್ಥಳ) ಕಾನೂನು ರೀತಿಯಲ್ಲಿ ನಡೆಯುತ್ತಿದ್ದು ಅವು ಸಹ ಬಂದ್ ಆಗಿವೆ. ಕಾನೂನು ಬಾಹಿರವಾಗಿ ಸಾಕಷ್ಟು ಕಡೆ ಮರಳು ಸಾಗಣೆ ನಡೆಯುತ್ತಿವೆ. ಗಾಡಿಗಳ ಧೂಳಿನಿಂದ ಬೆಳೆಗಳು ಹಾಳಾಗಿವೆ. ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ’ ಎಂದರು.
‘ತಕ್ಷಣವೇ ಕಾನೂನು ಬಾಹಿರ ಮರಳು ಗಣಿಗಾರಿಕೆ ನಿಲ್ಲಿಸಬೇಕು ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡುತ್ತೇನೆ. ಒಂದು ವಾರದಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುವವರ ಮೇಲೆ ಎಫ್‍ಐಆರ್ ದಾಖಲಿಸಬೇಕು. ಇಲ್ಲವಾದಲ್ಲಿ ಆ ಭಾಗದ ಯುವಕರು, ರೈತರು, ಜನರೊಂದಿಗೆ ಹೋರಾಟ ಮಾಡಲು ಸಿದ್ಧವಿರುವುದಾಗಿ’ ಹೇಳಿದರು.
‘ಅನುಮತಿ ಪಡೆದ ಡಕ್ಕಾದವರು ನದಿಗೆ ಎರಡೇ ಹಿಟಾಚಿ ಇಳಿಸಿದರೆ, ಅಕ್ರಮ ಪಾಯಿಂಟ್‍ನಲ್ಲಿ 7-8 ಯಂತ್ರಗಳನ್ನು ಇಳಿಸುತ್ತಿದ್ದಾರೆ. ಇಷ್ಟಾದರೂ ಒಂದಕ್ಕೂ ಎಫ್‍ಐಆರ್ ಇಲ್ಲ. ಚೆಕ್ ಪೋಸ್ಟ್‌ಗಳಿಗೆ ನಾವು ಸ್ವಂತ ಸೋಲಾರ್ ಕ್ಯಾಮರಾ ಅಳವಡಿಸಿ ಐಜಿ ಮತ್ತು ಎಸ್‍ಪಿ ಅವರಿಗೆ ಲಿಂಕ್ ಕೊಡುವ ಕೆಲಸ ಮಾಡಬೇಕು’ ಎಂದರು.
‘ಈ ಹೋರಾಟ ನನ್ನ ರಾಜಕೀಯ ಲಾಭಕ್ಕಲ್ಲ. ಅಲ್ಲಿಯ ಜನರ ರಸ್ತೆ, ಬೆಳೆ, ಆರೋಗ್ಯ ಉಳಿಸಿ ಕೊಡುವುದಕ್ಕಾಗಿದೆ. ಪ್ರತಿ ಹಳ್ಳಿಯ ಮನೆ ಮನೆಗೂ ಹೋಗಿ ಈ ಕುರಿತು ಜಾಗೃತಿ ಮೂಡಿಸುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.