ADVERTISEMENT

ರಾಯಣ್ಣ, ಕನಕದಾಸರ ಮೂರ್ತಿ ಲೋಕಾರ್ಪಣೆ

ಎಲ್ಲ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಲಿ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಮೇ 2022, 4:59 IST
Last Updated 27 ಮೇ 2022, 4:59 IST
ನಾರಾಯಣಪುರ ಸಮೀಪದ ಜೋಗುಂಡಭಾವಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ, ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ರಾಜೂಗೌಡ ಚಾಲನೆ ನೀಡಿದರು
ನಾರಾಯಣಪುರ ಸಮೀಪದ ಜೋಗುಂಡಭಾವಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ, ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ರಾಜೂಗೌಡ ಚಾಲನೆ ನೀಡಿದರು   

ಜೀಗುಂಡಬಾವಿ (ನಾರಾಯಣಪುರ): ಹಾಲುಮತ ಸಮಾಜದವರು ತಮ್ಮ ಎಲ್ಲ ಮಕ್ಕಳಿಗೆ ಉನ್ನತ ಹಾಗೂ ಗುಣಮಟ್ಟದ ಶಿಕ್ಷಣವನ್ನು ಕೊಡಿಸಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದರು.

ಸಮೀಪದ ಜೋಗುಂಡಬಾವಿ ಗ್ರಾಮದ ಹೊರವಲಯದಲ್ಲಿ ಗುರುವಾರ ಸಂಗೊಳ್ಳಿ ರಾಯಣ್ಣ ಹಾಗೂ ಕನಕದಾಸರ ಮೂರ್ತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಿನ ಮಠಗಳು, ಸಂತರು ಜನರಲ್ಲಿ ಭಕ್ತಿ, ನಂಬಿಕೆ ಹಾಗೂ ರಾಷ್ಟ್ರಾಭಿಮಾನವನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಕುಲ ಕುಲವೆಂದು ಬಡಿದಾಡದಿರಿ ಎಂದು ಸಾರಿದ ಮಹಾ ಚಿಂತಕ ಕನಕದಾಸರು ಹಾಗೂ ದೇಶದ ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ರಕ್ಷಣೆಗಾಗಿ ಜೀವವನ್ನು ಅರ್ಪಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರು. ಅವರ ಪುತ್ಥಳಿಯನ್ನು ಸ್ಥಾಪಿಸಿದ್ದು ಸಂತಸದ ಸಂಗತಿ ಜೊತೆಗೆ ಅವರ ಆದರ್ಶಗಳನ್ನೂ ನಾವು ಪಾಲಿಸೋಣ ಎಂದು ಕರೆ ನೀಡಿದರು.

ADVERTISEMENT

ಸುರಪುರದ ಶಾಸಕ ರಾಜೂಗೌಡ ಮಾತನಾಡಿ, ಹಾಲುಮತಸ್ಥರೆಂದರೆ ಹಾಲಿನಂತೆ ಶುದ್ಧವಾದ ಮನಸ್ಸಿನವರು. ಹಾಲುಮತದ ಮಠಗಳು, ಸಂಘ-ಸಂಸ್ಥೆಗಳು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ನೀಡಿದ ಸೇವೆ ಮರೆಯಲಾಗದು. ಸಮಾಜದ ಹಿತ ಹಾಗೂ ಅಭಿವೃದ್ಧಿಯನ್ನು ಬಯಸಿ ಹಲವಾರು ಚಟುವಟಿಕೆಗಳಿಗೆ ತಮ್ಮನ್ನು ತೊಡಗಿಸಿಕೊಳ್ಳುವ ಮತ್ತು ಸಹಭಾಗಿಯಾಗುವ ಮನೋಭಾವವನ್ನು ಹೊಂದಿದ್ದಾರೆ. ಆದ್ದರಿಂದ ಸಮುದಾಯದ ಮನವಿಯಂತೆ ಮಠಗಳಿಗೆ ಅನುಧಾನ ನೀಡಲಾಗುತ್ತಿದೆ ಮತ್ತು ಯಾತ್ರಿ ನಿವಾಸಕ್ಕೆ ಕೆ.ಕೆ.ಆರ್.ಡಿ.ಬಿ.ಯಿಂದ ₹2 ಕೋಟಿ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಪೂರ್ಣಕುಂಭ, ಕಳಸ, ಡೊಳ್ಳು ಕುಣಿತ, ಬೈಕ್ ರ‍್ಯಾಲಿ ಮೂಲಕ ವೇದಿಕೆಯವರೆಗೆ ಮೆರವಣಿಗೆ ನಡೆಸಲಾಯಿತು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಅವರ ಮೂರ್ತಿ ಹಾಗೂ ಶಾಸಕ ರಾಜೂಗೌಡ ಅವರು ಕನಕದಾಸರ ಮೂರ್ತಿಗಳನ್ನು ಲೋಕಾರ್ಪಣೆ ಮಾಡಿದರು.

ಸರೂರು ಹಾಲುಮತ ಗುರುಪೀಠದ ರೇವಣಸಿದ್ದೇಶ್ವರ ಶಾಂತಮಯ ಶ್ರೀ, ಹುಲಿಜಂತಿ ಮಾಳಿಂಗರಾಯ ಮಹಾರಾಜ ಅವರು ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ಸಣ್ಣಕೆಪ್ಪ ಮುತ್ಯಾ, ಅರವಿಂದ ಮಹಾರಾಜ, ಕೆಂಚಪ್ಪ ಪೂಜಾರಿ, ಸಿದ್ದಪ್ಪ ಪೂಜಾರಿ, ಶಂಕರಲಿಂಗ ಮಹಾರಾಜ, ವಿಠ್ಠಲ್ ಮಹಾರಾಜ, ಗಿರಿಯಪ್ಪ ಪೂಜಾರಿ, ಮುಖಂಡರಾದ ಯಲ್ಲಪ್ಪ ಕುರುಕುಂದಿ, ಗದ್ದೆಪ್ಪ ಪೂಜಾರಿ, ಅಮರಣ್ಣ ಹುಡೇದ, ಸೋಮಣ್ಣ ಮಾಮನಿ, ಎಚ್.ಸಿ ಪಾಟೀಲ, ಬಸವರಾಜಸ್ವಾಮಿ ಸ್ಥಾವರಮಠ, ಪರಮಣ್ಣ ಪೂಜಾರಿ, ಎನ್.ಡಿ.ನಾಯಕ, ಮಲ್ಲೇಶಿ ಪಾಟೀಲ, ಬಾಲಚಂದ್ರ ಪವಾರ, ಹಣಮಂತ ಗುರಿಕಾರ ಸೇರಿದಂತೆ ಸಮಾಜದ ಮುಖಂಡರು ಇದ್ದರು.

ಶಿಕ್ಷಕ ಸಿದ್ದು ಬಡಗೇರ ಸ್ವಾಗತಿಸಿ, ಅಮರಯ್ಯಸ್ವಾಮಿ ಜಾಲಿಬೆಂಚಿ ನಿರ್ವಹಿಸಿ, ಬಸವರಾಜ ಮಾಮನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.