ADVERTISEMENT

ಸೇವಾಲಾಲ ಜಯಂತ್ಯುತ್ಸವ: ಬೆಳಕಿನ ದಾರಿ ತೋರಿದ ಸಂತನಿಗೆ ವೈಭವದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 4:36 IST
Last Updated 16 ಫೆಬ್ರುವರಿ 2026, 4:36 IST
ಯಾದಗಿರಿ ನಗರದಲ್ಲಿ ಭಾನುವಾರ ಸಂತ ಸೇವಾಲಾಲ ಮಹಾರಾಜರ ಜಯಂತ್ಯುತ್ಸವದ ಅಂಗವಾಗಿ ಸಂತ ಸೇವಾಲಾಲರ ಬೃಹತ್ ಭಾವಚಿತ್ರಕ್ಕೆ ಕ್ರೇನ್ ಮೂಲಕ ಹಾರ ಹಾಕಿದ ದೃಶ್ಯ  ಪ್ರಜಾವಾಣಿ ಚಿತ್ರ:ರಾಜಕುಮಾರ ನಳ್ಳಿಕರ
ಯಾದಗಿರಿ ನಗರದಲ್ಲಿ ಭಾನುವಾರ ಸಂತ ಸೇವಾಲಾಲ ಮಹಾರಾಜರ ಜಯಂತ್ಯುತ್ಸವದ ಅಂಗವಾಗಿ ಸಂತ ಸೇವಾಲಾಲರ ಬೃಹತ್ ಭಾವಚಿತ್ರಕ್ಕೆ ಕ್ರೇನ್ ಮೂಲಕ ಹಾರ ಹಾಕಿದ ದೃಶ್ಯ  ಪ್ರಜಾವಾಣಿ ಚಿತ್ರ:ರಾಜಕುಮಾರ ನಳ್ಳಿಕರ   

ಯಾದಗಿರಿ: ಭಕ್ತಿಪಂಥ ಕಾಲದಲ್ಲಿ ಸಮಾಜದಲ್ಲಿನ ವ್ಯವಸ್ಥೆ ತಿದ್ದಿ, ಅಜ್ಞಾನದ ಅಂಧಕಾರವನ್ನು ದೂರ ಮಾಡಿ ಬೆಳಕಿನ ದಾರಿ ತೋರಿದ ಬಂಜಾರ ಸಮುದಾಯದ ಮಹಾನ್‌ ದಾರ್ಶನಿಕ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತ್ಯುತ್ಸವ ಭಾನುವಾರ ಅದ್ದೂರಿಯಾಗಿ ಜರುಗಿತು.

ಬಂಜಾರ ಸಮುದಾಯವನ್ನು ಮುಖ್ಯವಾಹಿನಿಗೆ ತರುವಲ್ಲಿ ಅಪಾರವಾಗಿ ಶ್ರಮಿಸಿದ್ದ ಸೇವಾಲಾಲ ಮಹಾರಾಜ ಅವರನ್ನು ಅಸಂಖ್ಯಾತ ಜನರು ಗೌರವ ನಮನ ಸಲ್ಲಿಸಿದರು. ಲಂಬಾಣಿ ಮಹಿಳೆಯರು ತಮ್ಮ ಸಾಂಪ್ರದಾಯಿಕ ಪದ್ಧತಿಯ ಧಿರಿಸಿನಲ್ಲಿ ಬಂದಿದ್ದು ವಿಶೇಷವಾಗಿತ್ತು.

ಮುಂಜಾನೆಯಿಂದಲೇ ‘ಜೈ ಸೇವಾಲಾಲ, ಸೇವಾಲಾಲ ಮಹಾರಾಜ್‌ಕಿ ಜೈ’ ಎಂದು ಘೋಷಣೆ ಕೂಗುತ್ತಾ ಬಂಜಾರ ಸಮುದಾಯದ ಯುವಕರು, ಅಭಿಮಾನಿಗಳು ಬೈಕ್, ಆಟೊ ರ್‍ಯಾಲಿ ಮಾಡಿದರು. ತಮ್ಮ ವಾಹನಗಳಿಗೆ ಸೇವಾಲಾಲರ ಭಾವಚಿತ್ರ ಇರುವ ಬಾವುಟಗಳನ್ನು ಕಟ್ಟಿ ಗೌರವ ಪ್ರದರ್ಶಿಸಿದರು.

ADVERTISEMENT

ರೈಲು ನಿಲ್ದಾಣ ಸಮೀಪದಲ್ಲಿ ಸೇವಾಲಾಲರ ಭಾವಚಿತ್ರಗಳನ್ನು ಅಲಂಕೃತ ವಾಹನಗಳಲ್ಲಿ ಇರಿಸಲಾಯಿತು. ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ‘ಯುಡಾ’ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಸೇರಿದಂತೆ ಸಮುದಾಯದ ಮುಖಂಡರು ಸೇವಾಲಾಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಗೆ ಚಾಲನೆ ಸಿಗುತ್ತಿದ್ದಂತೆ ಸಾವಿರಾರು ಯುವಕರು– ಯುವತಿಯರು ಡಿ.ಜೆ. ಹಾಡುಗಳಿಗೆ ಸಂಭ್ರಮದಿಂದ ಕುಣಿಯಲು ಆರಂಭಿಸಿದರು. ಮೆರವಣಿಗೆಯ ನಡುವೆ ಸೇವಾಲಾಲರ ಚಿತ್ರಗಳನ್ನು ಹಿಡಿದು ಭಕ್ತಿ ಮೆರೆದರು. ಕೆಲವರು ದೊಡ್ಡ ಬಾವುಟಗಳನ್ನು ಹಿಡಿದು ಸುತ್ತಲೂ ತಿರುಗಿಸುತ್ತಾ ಹೆಜ್ಜೆ ಹಾಕಿದರು.

ಸಮುದಾಯದ ಸಾಂಪ್ರದಾಯಿಕ ಉಡುಪಿನಲ್ಲಿ ಒಗ್ಗೂಡಿ ಮೆರವಣಿಗೆಯಲ್ಲಿ ಸಾಗಿದ ಯುವತಿಯರು ಜೈಕಾರ ಹಾಕುತ್ತಾ ಬಂಜಾರ ಹಾಡುಗಳ ಸಾಹಿತ್ಯವನ್ನು ಗುನುಗುತ್ತಾ ಕುಣಿದರು. ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗ, ಕಟ್ಟಡಗಳ ಮೇಲೆ ನಿಂತ ಸಾವಿರಾರು ಜನರು ಮೆರವಣಿಗೆಯ ಸಂಭ್ರಮವನ್ನು ಕಣ್ತುಂಬಿಕೊಂಡರು. ಕೆಲವರು ಕುಣಿತದ ದೃಶ್ಯಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದರು.

ಮೆರವಣಿಗೆಯು ನೇತಾಜಿ ಸುಭಾಷಚಂದ್ರ ಬೋಸ್ ವೃತ್ತ ತಲುಪುತ್ತಿದ್ದಂತೆ ಜನಸ್ತೋಮ ಮತ್ತಷ್ಟು ಹೆಚ್ಚಾಯಿತು. ಇಡೀ ವೃತ್ತ ಸೇವಾಲಾಲರ ಅನುಯಾಯಿಗಳಿಂದ ತುಂಬಿತು. ಸೇವಾಲಾಲರ ಬೃಹತ್ ಭಾವಚಿತ್ರಕ್ಕೆ ಕ್ರೇನ್ ಮೂಲಕ ಹೂವಿನ ಹಾರ ಹಾಕಿ, ಪುಷ್ಪದಳಗಳನ್ನು ಎಸೆಯಲಾಯಿತು. ನೆರೆದಿದ್ದವರು ಸೇವಾಲಾಲರ ಘೋಷಣೆ ಹಾಕಿದರು. ಸರ್ಕಾರಿ ಪದವಿ ಮಹಾವಿದ್ಯಾಲಯ ಬಳಿ ಮೆರವಣಿಗೆ ಸಂಪನ್ನವಾಯಿತು.

ಬಿಗಿ ಬಂದೋಬಸ್ತ್‌:

ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳನ್ನು ಬೇರೊಂದು ಮಾರ್ಗದಲ್ಲಿ ಸಂಚರಿಸುವಂತೆ ಮಾಡಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರಣೇಶ, ಸಿಪಿಐ ಸುನಿಲ್ ವಿ.ಮೂಲಿಮನಿ, ಪಿಎಸ್‌ಐಗಳಾದ ಮಂಜನಗೌಡ, ಹನುಮಂತ ಬಂಕಲಿಗಿ ಸೇರಿ ಹಲವರು ಉಪಸ್ಥಿತರಿದ್ದರು.

ಯಾದಗಿರಿಯಲ್ಲಿ ಭಾನುವಾರ ಸಂತ ಸೇವಾಲಾಲರ ಭಾವಚಿತ್ರದ ಮೆರವಣಿಗೆಗೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ‘ಯುಡಾ’ ಅಧ್ಯಕ್ಷ ಬಾಬುರಾವ್ ಕಾಡ್ಲೂರ್ ಎಡಿಸಿ ರಮೇಶ ಕೋಲಾರ ಚಾಲನೆ ನೀಡಿದರು
ಯಾದಗಿರಿಯಲ್ಲಿ ಭಾನುವಾರ ಸಂತ ಸೇವಾಲಾಲ ಜಯಂತಿ ಅಂಗವಾಗಿ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು

‘ಸತ್ಯದ ಮಾರ್ಗ ಬೆಳಕು ತೋರಿದ ಸಂತ’

‘ಕರ್ನಾಟಕದ ದಾವಣಗೆರೆಯಲ್ಲಿ ಜನಿಸಿದ್ದ ಸಂತ ಸೇವಾಲಾಲರು ಉತ್ತರ ಭಾರತ ಪಾಕ್‌ನ ಲಾಹೋರ್‌ವರೆಗೆ ಸಂಚಾರ ಮಾಡಿ ಬಂಜಾರ ಸಮುದಾಯಕ್ಕೆ ಸತ್ಯ ಮತ್ತು ಬೆಳಕಿನ ದಾರಿ ತೋರಿದ್ದರು’ ಎಂದು ಉಪನ್ಯಾಸಕ ಪಾಂಡು ರಾಠೋಡ್ ಹೇಳಿದರು. ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ ಆಯೋಜಿಸಿದ್ದ ವೇದಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಅಪಾರ ದೈವ ಭಕ್ತರಾದ ಸೇವಾಲಾಲರು ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದರು. ಪ್ರಕೃತಿಯ ಆರಾಧಕರಾಗಿರುವ ಬಂಜಾರ ಸಮುದಾಯದ ಬೆಳಕಾದವರು’ ಎಂದರು. ಕಲ್ಪನಾ ಪವಾರ್ ಸುರೇಖಾ ರಾಠೋಡ ಬಂಜಾರ ಹಾಡುಗಳಿಗೆ ನೃತ್ಯ ಪ್ರದರ್ಶನ ನೀಡಿದರು. ಕ್ರೀಡಾಪಟು ಕುಮಾರ್ ರಾಠೋಡ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಆನಂದ ಚವ್ಹಾಣ್ ಸಮಾಜದ ಮುಖಂಡರಾದ ದೇವರಾಜ ನಾಯಕ್ ಉಳ್ಳೆಸೂಗೂರು ಬಿ.ಎನ್. ನಾಯ್ಕ್ ಬಂಗಾರು ಜೆ.ಬಿ. ರಾಠೋಡ್ ವಿಠ್ಠಲ ರಾಠೋಡ್ ಜನಾರ್ಧನ ರಾಠೋಡ್ ನಾನು ರಾಠೋಡ್ ನರೇಂದ್ರ ರಾಠೋಡ್ ತೇಜರಾಜ್ ರಾಠೋಡ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.