
ವಂಚನೆ
ಯಾದಗಿರಿ: ಸರ್ಕಾರದ ಎಸ್‌ಸಿ, ಎಸ್‌ಟಿ ಯೋಜನೆಯಡಿ ಮನೆ ಹಾಗೂ ನಿವೇಶನಗಳನ್ನು ಕೊಡಿಸುವುದಾಗಿ 13 ಮಂದಿಗೆ ಆಮಿಷವೊಡ್ಡಿ, ₹31.45 ಲಕ್ಷ ಪಡೆದು ವಂಚಿಸಿದ್ದಕ್ಕೆ ಹಣ ವಾಪಸ್ ಕೇಳಲು ಹೋದಾದ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದಡಿ ಒಂದೇ ಕುಟುಂಬದ ಏಳು ಮಂದಿ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೂಪಾ ಬಡಿಗೇರಿ ಅವರು ನೀಡಿದ ದೂರಿನ ಅನ್ವಯ ಶಹಾಪುರದ ವಿಜಯಲಕ್ಷ್ಮಿ ಹಾಲಸ್ವಾಮಿ, ಹಾಲಸ್ವಾಮಿ, ನರಸಣ್ಣಗೌಡ, ಉರಕುಂದಯ್ಯ, ರಂಗಣ್ಣ ಸೇರಿ 7 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ವಿಜಯಲಕ್ಷ್ಮಿ ಅವರು ತನಗೆ ಬೆಂಗಳೂರಿನಲ್ಲಿ ಎಸ್‌ಸಿ, ಎಸ್‌ಟಿ ಪ್ರಧಾನ ಕಚೇರಿಯಲ್ಲಿ ಅಧಿಕಾರಿಗಳ ಪರಿಚಯವಿದೆ. ಸರ್ಕಾರದ ಎಸ್‌ಸಿ, ಎಸ್‌ಟಿ ಯೋಜನೆಯಡಿ ಮನೆ, ನಿವೇಶನಗಳನ್ನು ಕೊಡಿಸುವುದಾಗಿ ರೂಪಾ ಅವರನ್ನು ನಂಬಿಸಿದ್ದರು. ರೂಪಾ ಸೇರಿ 13 ಮಹಿಳೆಯರು ವಿಜಯಲಕ್ಷ್ಮಿ ಅವರ ಮಾತು ನಂಬಿ ಹಂತ–ಹಂತವಾಗಿ ₹31.45 ಲಕ್ಷ ನೀಡಿದ್ದರು. ವರ್ಷಗಳು ಕಳೆದರೂ ಮನೆ, ನಿವೇಶನ ಕೊಡಿಸಲಿಲ್ಲ. ಕೊಟ್ಟ ಹಣವನ್ನು ವಾಪಸ್ ಕೇಳಿದಾಗ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿ ವಿಜಯಲಕ್ಷ್ಮಿ ಅವರು ಬೆಂಗಳೂರಿನಲ್ಲಿ ಇರುವ ಅಧಿಕಾರಿಗಳಿಗೆ ಅಡ್ವಾನ್ಸ್ ಕೊಡಬೇಕಿದೆ ಎಂದು ಮುಂಗಡವಾಗಿ ₹ 19,600, ₹ 45 ಸಾವಿರದಂತೆ 13 ಮಹಿಳೆಯರಿಂದ ಹಣ ಪಡೆದಿದ್ದಾರೆ. ಆಕಾಂಕ್ಷಿತ ಮಹಿಳೆಯರು ಫೋನ್ ಪೇ ಮೂಲಕ ₹ 16.45 ಲಕ್ಷ ಹಾಗೂ ಖುದ್ದಾಗಿ ಭೇಟಿ ಮಾಡಿ ₹ 15 ಲಕ್ಷ ಸೇರಿ ಒಟ್ಟು ₹ 31.45 ಲಕ್ಷ ಕೊಟ್ಟಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಲಾರಿ ಡಿಕ್ಕಿ: ಬೈಕ್ ಸವಾರ ಸಾವು
ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾರಿ ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟದ್ದಾರೆ.
ಶಹಾಪುರ– ಸುರಪುರ ರಸ್ತೆಯಲ್ಲಿ ಲಾರಿ ಡಿಕ್ಕಿಯಿಂದ ಮದರಕಲ್ ಗ್ರಾಮದ ಸೋಪಿಲಾಲ ಪೀರಸಾಬ್ (37) ಮೃತಪಟ್ಟವರು. ಲಾರಿ ಚಾಲಕ ಬಲವಂತ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಪಿಲಾಲ ಅವರು ಶಹಾಪುರ ಕಡೆಯಿಂದ ಬೈಕ್ ಮೇಲೆ ತೆರಳುತ್ತಿದ್ದರು. ಎದುರಿನಿಂದ ವೇಗವಾಗಿ ಮತ್ತು ಅಲಕ್ಷತನದಿಂದ ಲಾರಿ ಚಲಾಯಿಸಿಕೊಂಡು ಬಂದ ಬಲವಂತ ಸಿಂಗ್ ಅವರು ಸೋಪಿಲಾಲ ಓಡಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದರು.
ಬೈಕ್ ಸಮೇತ ಕೆಳಗೆ ಬಿದ್ದ ಸೋಪಿಲಾಲ ಅವರ ಹಣೆ, ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿದ್ದವು. ಬಲಗಾಲಿನ ಮೊಳಕಾಲಿನ ಕೆಳ ಭಾಗ ಮುರಿದಂತಾಗಿ ತರುಚಿದ ಗಾಯವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.