ADVERTISEMENT

ಶಾಲೆಯಲ್ಲಿ ವಿದ್ಯಾರ್ಥಿನಿಗೆ ಪ್ರಸವ ಪ್ರಕರಣ: ನಿರ್ಲಕ್ಷ್ಯತನದ ಪರಮಾವಧಿ; ಕಾಂತರಾಜು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 6:31 IST
Last Updated 31 ಆಗಸ್ಟ್ 2025, 6:31 IST
ಶಹಾಪುರ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಶನಿವಾರ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಪಿ.ಎಸ್ ಭೇಟಿ ನೀಡಿದರು. ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು 
ಶಹಾಪುರ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಶನಿವಾರ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಪಿ.ಎಸ್ ಭೇಟಿ ನೀಡಿದರು. ಶಿಕ್ಷಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು    

ಶಹಾಪುರ: ‘ಇದೊಂದು ನಿರ್ಲಕ್ಷ್ಯತನದ ಪರಮಾವಧಿ ಪ್ರಕರಣವಾಗಿದೆ. ವಸತಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಾಚಾರ್ಯರು, ವಸತಿ ನಿಲಯ ಮೇಲ್ವಿಚಾರಕಿ, ತರಗತಿ ಶಿಕ್ಷಕ, ದೈಹಿಕ ಶಿಕ್ಷಣ ಶಿಕ್ಷಕರ ಕರ್ತವ್ಯ ಲೋಪವೇ ಪ್ರಕರಣದ ಭೀಕರತೆಗೆ ಸಾಕ್ಷಿಯಾಗಿದೆ’ ಎಂದು ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಪಿ.ಎಸ್ ಕೆಂಡಾಮಂಡಲವಾಗಿ ಹೇಳಿದರು

ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಪ್ರಕರಣವನ್ನು ಹಗುರವಾಗಿ ಪರಿಗಣಿಸಿಲ್ಲ. ಇಡೀ ಪ್ರಕರಣವನ್ನು ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುವುದು. ಇನ್ನು ಮುಂದೆ ಇಂತಹ ಘಟನೆಗಳನ್ನು ನಡೆಯದಂತೆ ಸೂಕ್ತ ಎಚ್ಚರಿಕೆ ವಹಿಸಲು ಕ್ರೈಸ್ ವಸತಿ ನಿಲಯಗಳ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

‘ಅಲ್ಲದೇ ಹಲವಾರು ವರ್ಷಗಳಿಂದ ಬಾಲಕಿಯರ ವಸತಿ ನಿಲಯಗಳು ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿರುವುದು ಭದ್ರತಾ ದೃಷ್ಟಿಯಿಂದ ಅಷ್ಟೊಂದು ಸೂಕ್ತವಲ್ಲ. ಆದಷ್ಟು ಬೇಗನೇ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿರುವ ಅಡೆತಡೆಗಳನ್ನು ನಿವಾರಿಸಲು ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ADVERTISEMENT

ನಂತರ ಅವರು, ವಸತಿನಿಲಯ ಒಂದಕ್ಕೆ ಭೇಟಿ ನೀಡಿ ಅಲ್ಲಿನ ಮೂಲಸೌಲಭ್ಯಗಳನ್ನು ಪರಿಶೀಲಿಸಿದರು. ತಕ್ಷಣವೇ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ, ಗೀಜರ್ ರಿಪೇರಿ ಹಾಗೂ ಸ್ಟಾಫ್‌ ನರ್ಸ್‌ ನೇಮಿಸಿಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳಲು ಸ್ಥಳದಲ್ಲಿಯೇ ಉಪಸ್ಥಿತರಿದ್ದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಉಪವಿಭಾಗಾಧಿಕಾರಿ ಶ್ರೀಧರ್ ಗೋಟೂರು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚೆನ್ನಬಸಪ್ಪ, ತಹಶೀಲ್ದಾರ್ ಸಿದ್ಧಾರೂಢ ಬನ್ನಿಕೊಪ್ಪ, ಪ್ರಬಾರಿ ಪ್ರಾಚಾರ್ಯ ಸುರಯ್ಯ ಬೇಗಂ, ಕಂದಾಯ ನಿರೀಕ್ಷಕ ಬಸವರಾಜ ವಟಾರ್, ಗ್ರಾಮ ಲೆಕ್ಕಾಧಿಕಾರಿ ರಮೇಶ ಉಪಸ್ಥಿತರಿದ್ದರು.

ಇದನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಇಂತಹ ಘಟನೆ ಮರುಕಳಿಸದಂತೆ ವಸತಿನಿಲಯದ ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ
ಕಾಂತರಾಜು ಪಿ.ಎಸ್ ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕ

ಆತಂಕಗೊಂಡ ಪಾಲಕರು...!:

ನಗರದ ವಸತಿನಿಲಯ ಒಂದರಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯು ಗಂಡು ಮಗುವಿಗೆ ಜನ್ಮ ನೀಡಿದ ಪ್ರಕರಣದಿಂದ ಪಾಲಕರು ಆತಂಕಗೊಂಡಿದ್ದಾರೆ. ತಮ್ಮ ಮಕ್ಕಳನ್ನು ಮಾತನಾಡಿಸಲು ಹಾಗೂ ಸಿಬ್ಬಂದಿ ಜತೆ ಭೀತಿಯಿಂದಲೇ ಅಲವತ್ತುಕೊಳ್ಳುತ್ತಿದ್ದಾರೆ. ಇದು ಅಧಿಕಾರಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ‘ನಮ್ಮ ಮಕ್ಕಳು ಶಾಲೆ ಕಲಿಯುವುದೇ ಬೇಡಪ್ಪ ಸಾಕು ಮನೆಗೆ ಕರೆದುಕೊಂಡು ಹೋಗುತ್ತೇವೆ. ಕರುಳ ಕುಡಿಗೆ ಏನಾಗುತ್ತದೆ ಎಂಬ ದುಗುಡ ಆವರಿಸಿದೆ. ಇಷ್ಟೊಂದು ನಿಷ್ಕಾಳಜಿ ಇರಬಾರದಪ್ಪ’ ಎಂದು ವಸತಿನಿಲಯಕ್ಕೆ ಭೇಟಿ ನೀಡಿದ ಪಾಲಕರೊಬ್ಬರು ಅಲವತ್ತುಕೊಂಡರು.

ಬಿರುಸುಗೊಂಡ ತನಿಖೆ:

ಪ್ರಮುಖ ಆರೋಪಿಯನ್ನು ಬಂಧಿಸುವುದರ ಜತೆಗೆ ಇನ್ನುಳಿದ ವಿಚಾರಣೆಗಾಗಿ ಸುರಪುರ ಡಿವೈಎಸ್ಪಿ ಜಾವೇದ ಇನಾಂದಾರ ನಗರದ ವಸತಿನಿಲಯ ಒಂದಕ್ಕೆ ಶನಿವಾರ ಭೇಟಿ ನೀಡಿ ಮಾಹಿತಿ ಕಲೆಹಾಕಿದರು. ಸಿಬ್ಬಂದಿ ಜತೆ ವಿಚಾರಣೆ ನಡೆಸಿದರು. ಆದರೆ ನಗರದಲ್ಲಿ ಪ್ರಕರಣವು ಇನ್ನು ಹಚ್ಚಹಸಿರಾಗಿಯೇ ಉಳಿದುಕೊಂಡಿದ್ದು ಎಲ್ಲೆಡೆ ಚರ್ಚೆ ನಡೆಯುತ್ತಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.