ADVERTISEMENT

ಯಾದಗಿರಿ: ಅತ್ತ ಕೆರೆ, ಇತ್ತ ಕೊಚ್ಚೆ‌, ಭಯದಲ್ಲಿ ಮಕ್ಕಳು !

ಅಪಾಯ ಎದುರೇ ಪಾಠ ಕೇಳುವ ಅನಿವಾರ್ಯ, ಆಟವಾಡುವ ಭಾಗ್ಯವೂ ಇಲ್ಲ

ಮಲ್ಲಿಕಾರ್ಜುನ ನಾಲವಾರ
Published 1 ಜನವರಿ 2026, 18:30 IST
Last Updated 1 ಜನವರಿ 2026, 18:30 IST
ಯಾದಗಿರಿಯ ದುರ್ಗಾ ನಗರದಲ್ಲಿನ ದೊಡ್ಡ ಕೆರೆ ದಡದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ಯಾದಗಿರಿಯ ದುರ್ಗಾ ನಗರದಲ್ಲಿನ ದೊಡ್ಡ ಕೆರೆ ದಡದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ   

ಯಾದಗಿರಿ: ಇಲ್ಲಿನ ದುರ್ಗಾ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಅಂಗಳವನ್ನು ದೊಡ್ಡ ಕೆರೆಯ ನೀರು ಹಾಗೂ ಕೊಳಚೆ ನೀರು ಆವರಿಸಿಕೊಂಡಿದ್ದು, ಮಕ್ಕಳು ಜೀವ ಭಯದಲ್ಲಿ ಪಾಠ ಕಲಿಯುವಂತಾಗಿದೆ. ಮಕ್ಕಳಿಗೆ ಖುಷಿಯಿಂದ ಆಟವಾಡುವ ಭಾಗ್ಯವೂ ಇಲ್ಲ.

1ರಿಂದ 5ನೇ ತರಗತಿವರೆಗಿನ ಈ ಶಾಲೆಯಲ್ಲಿ 29 ಮಕ್ಕಳು ದಾಖಲಾಗಿದ್ದಾರೆ. ಒಂದು ಕೋಣೆಯಲ್ಲಿ 1ರಿಂದ 3ನೇ ತರಗತಿ, ಮತ್ತೊಂದು ಕೋಣೆಯಲ್ಲಿ 4ರಿಂದ 5ನೇ ತರಗತಿಗಳು ನಡೆಯುತ್ತಿವೆ. ಮಕ್ಕಳಲ್ಲಿನ ಕಲಿಕಾ ಆಸಕ್ತಿಗೆ ಡಿಡಿಪಿಐ ಮಾರು ಹೋಗಿದ್ದಾರೆ. ಆದರೆ ಕೆರೆ ನೀರಿನ ಭಯದಿಂದ ಮಕ್ಕಳನ್ನು ಮುಕ್ತಗೊಳಿಸಲು ಆಗಿಲ್ಲ.

ಶಾಲೆಯ ಒಂದು ಬದಿಯಲ್ಲಿ ಕೆರೆ ನೀರಿದೆ. ಎದುರಿನಲ್ಲಿ ಗಟಾರ ನೀರು ಹರಿದು ಗಬ್ಬು ನಾರುತ್ತಿದೆ. ನೀರಿನೊಂದಿಗೆ ಕೊಚ್ಚಿಕೊಂಡ ಬಂದ ಹಳೇ ಬಟ್ಟೆಗಳು, ಪ್ಲಾಸ್ಟಿಕ್, ಕಸ–ಕಡ್ಡಿಗಳು ಶಾಲೆಯ ಸುತ್ತಲೂ ಆವರಿಸಿಕೊಂಡಿವೆ. ಈ ಕಸದ ರಾಶಿಯ ನಡುವೆ ಆಗಾಗ ವಿಷ ಜಂತುಗಳು ಶಾಲೆಗೆ ನುಗ್ಗುತ್ತವೆ. ಇಂಥ ಅಪಾಯದ ಪರಿಸರದ ನಡುವೆಯೂ ಅಕ್ಷರ ಕಲಿಯುವುದನ್ನು ಮಕ್ಕಳು ರೂಢಿಸಿಕೊಂಡಿದ್ದಾರೆ.

ADVERTISEMENT

‘ಮೂರು ವರ್ಷಗಳಿಂದ ಕೆರೆ ನೀರಿನ ಅಪಾಯದ ಎದುರು ಕುಳಿತು ಮಕ್ಕಳಿಗೆ ಪಾಠ ಮಾಡುತ್ತಿದ್ದೇವೆ. ಮಕ್ಕಳಿಗಿಂತ ಮುಂಚಿತವಾಗಿ ಶಾಲೆಗೆ ಬಂದು ನೀರಿನ ಬದಿಯಲ್ಲಿ ನಿಂತು ಕಾವಲು ಕಾಯುತ್ತೇವೆ. ಒಮ್ಮೆ ಪ್ರಾರ್ಥನೆ ಮಾಡಿಸಿ ತರಗತಿಯಲ್ಲಿ ಕೂರಿಸಿದರೆ ಮಕ್ಕಳನ್ನು ಆಟಕ್ಕೂ ಬಿಡುವಂತಿಲ್ಲ’ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ಅನುರಾಧಾ.

‘ತಡೆಗೋಡೆ ನಿರ್ಮಾಣ ಮಾಡಿ ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವಂತೆ ಹಲವು ಬಾರಿ ಬಿಇಒ, ಡಿಡಿಪಿಒಗೆ ಪತ್ರ ಬರೆದರೂ ಸ್ಪಂದನೆ ಸಿಕ್ಕಿಲ್ಲ. ನಗರಸಭೆಯ ಅಧ್ಯಕ್ಷರು, ಅಧಿಕಾರಿಗ‌ಳೂ ಸಮಸ್ಯೆ ಪಹರಿಹರಿಸುವ ಭರವಸೆ ಕೊಟ್ಟಿದ್ದರು. ಅದು ಇನ್ನೂ ಈಡೇರಿಲ್ಲ. ಮಳೆಗಾಲದಲ್ಲಿ ಎರಡು ತಿಂಗಳು ಕೆರೆ ನೀರು ಶಾಲೆ ಸುತ್ತಲೂ ಆವರಿಸಿಕೊಂಡಾಗ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ತೆರಳಿ ಕಲಿಸುವುದು ತಪ್ಪಿಲ್ಲ’ ಎಂದು ಅವರು ಬೇಸರದಿಂದ ನುಡಿದರು.

ಶಾಲಾ ತಡೆಗೋಡೆಗಾಗಿ ₹ 8 ಲಕ್ಷ ಅನುದಾನ ಬಿಡುಗಡೆಯಾಗಿದ್ದು ನೀರು ನಿಂತಿದ್ದರಿಂದ ಗೋಡೆ ನಿರ್ಮಾಣಕ್ಕೆ ಅಡ್ಡಿಯಾಗಿದೆ. ನೀರು ತಗ್ಗಿದ ಬಳಿಕ ಕಾಮಗಾರಿ ಶುರುವಾಗಲಿದೆ
   ಚನ್ನಬಸಪ್ಪ ಮುಧೋಳ ಡಿಡಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.