
ಯಾದಗಿರಿ: ಮದುವೆ ಆಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಯ ಮೇಲೆ ಲೈಗಿಂಕ ದೌರ್ಜನ್ಯ ಎಸಗಿದ ಆರೋಪದಡಿ ಕೃಷ್ಣ ಭಾಗ್ಯ ಜಲ ನಿಗಮದ (ಕೆಬಿಜೆಎನ್‌ಎಲ್) ಅಟೆಂಡರ್ ಒಬ್ಬರು ವಿರುದ್ಧ ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಣಸಗಿ ಪಟ್ಟಣದ 35 ವರ್ಷದ ಸಂತ್ರಸ್ತೆ ನೀಡಿದ ದೂರಿನ ಅನ್ವಯ ಯುಕೆಪಿ ಕ್ಯಾಂಪ್ ನಿವಾಸಿ, ಕೆಬಿಜೆಎನ್‌ಎಲ್‌ನ ಅಟೆಂಡರ್ ಮಹಮದ್ ರಫೀಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 10 ವರ್ಷಗಳ ಹಿಂದೆ ವಿಚ್ಛೇದಿತ ಮಹಿಳೆಗೆ ರಫೀಕ್ ಅವರು ಪರಿಚಯ ಆಗಿದ್ದರು. ಮದುವೆ ಆಗುವುದಾಗಿ ನಂಬಿಸಿ ಆಕೆಯ ಮೇಲೆ ಆಗಾಗ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಹೇಳಿದ್ದಾರೆ.
2022ರಲ್ಲಿ ಕೆಬಿಜೆಎನ್‌ಎಲ್‌ನಲ್ಲಿ ಅಟೆಂಡರ್ ನೌಕರಿಗೆ ಸೇರ್ಪಡೆಯಾದ ರಫೀಕ್, ಮಹಿಳೆಯ ಫೋನ್ ಕರೆಗಳನ್ನು ಸ್ವೀಕರಿಸಲಿಲ್ಲ. ಬೇರೆ ಯುವತಿಯೊಂದಿಗೆ ಮದುವೆ ಮಾಡಿಕೊಳ್ಳಲು ಸಿದ್ಧವಾಗಿದ್ದರು. ತನಗೆ ವಂಚನೆ ಮಾಡಿ ಬೇರೊಬ್ಬರ ಜೊತೆಗೆ ಮದುವೆ ಸಜ್ಜಾಗಿರುವುದಾಗಿ ಆರೋಪಿಸಿ ಸಂತ್ರಸ್ತೆಯು ದೂರು ನೀಡಿದ್ದಾರೆ ಎಂದಿದ್ದಾರೆ.
ಟ್ರ್ಯಾಕ್ಟರ್ ಎಂಜಿನ್ ಡಿಕ್ಕಿ: ಬೈಕ್ ಸವಾರ ಸಾವು
ಶಹಾಪುರ ತಾಲ್ಲೂಕಿನ ಸಾವೂರ ಕ್ರಾಸ್ ಸಮೀಪದ ರಸ್ತೆಯಲ್ಲಿ ಟ್ರ್ಯಾಕ್ಟರ್ ಎಂಜಿನ್ ಡಿಕ್ಕಿಯಿಂದ ಬೈಕ್ ಸವಾರೊಬ್ಬರು ಮೃತಪಟ್ಟಿದ್ದಾರೆ.
ಕಾಟಮನಹಳ್ಳಿ ಗ್ರಾಮದ ನಿವಾಸಿ ಮಾನಪ್ಪ ಹೊಸಮನಿ (25) ಮೃತರು. ಚಾಲಕ ಗಡ್ಡ ಸತ್ಯಬಾಬು ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನಪ್ಪ ಅವರು ಕೆಲಸದ ನಿಮಿತ್ತ ಬೈಕ್‌ನಲ್ಲಿ ಹೊರಗೆ ಹೋದರು. ಸಾವೂರ ಕ್ರಾಸ್ ಸಮೀಪದ ರಸ್ತೆಯಲ್ಲಿ ತೆರಳುತ್ತಿದ್ದಾಗ ಎದುರಿನಿಂದ ವೇಗವಾಗಿ ಟ್ರ್ಯಾಕ್ಟರ್ ಎಂಜಿನ್ ಚಲಾಯಿಸಿಕೊಂಡು ಬಂದ ಗಡ್ಡ ಸತ್ಯಬಾಬು ಅವರು ಮಾನಪ್ಪ ಅವರ ಬೈಕ್‌ಗೆ ಡಿಕ್ಕಿ ಹೊಡೆದರು. ಹಣೆಗೆ ಗಂಭೀರ ಗಾಯವಾಗಿ, ಬಲಗಾಲಿನ ಮೊಣಕಾಲು ಮುರಿದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.