
ಶಹಾಪುರ: ಗ್ರಾಮೀಣ ಜನತೆಯ ರೈತರ ಪಾಲಿಗೆ ಸಂಜೀವಿನಿಯಂತೆ ಆಗಿರುವ ಪ್ರಗತಿ ಗ್ರಾಮೀಣ ಬ್ಯಾಂಕ್(ಪಿಕೆಜಿ) ಗ್ರಾಹಕರಿಗೆ ಸಮರ್ಪಕವಾಗಿ ನಗದು ಹಣ ನೀಡುವಲ್ಲಿ ವಿಳಂಬ ಮಾಡುತ್ತಿದೆ. ಹೀಗಾಗಿ ಗ್ರಾಮೀಣ ಭಾಗದ ಜನರಿಗೆ ತೊಂದರೆಯಾಗುತ್ತಿದೆ.
‘ಬ್ಯಾಂಕಿನ ವ್ಯವಹಾರದ ವ್ಯವಸ್ಥೆ ಭರವಸೆಯು ತುಸು ಮಾಸುತ್ತಲಿದೆ. ಬ್ಯಾಂಕ್ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ನಿವಾರಿಸಬೇಕು’ ಎಂದು ಗ್ರಾಮೀಣ ಪ್ರದೇಶದ ರೈತರ ಆಗ್ರಹದ ಬೇಡಿಕೆಯಾಗಿದೆ.
‘ಹತ್ತಿ ಬೆಲೆ ಕುಸಿತವಾಗಿದ್ದರಿಂದ ರೈತರು ಹತ್ತಿ ಖರೀದಿ ಕೇಂದ್ರದ ಮೂಲಕ ಮಾರಾಟ ಮಾಡಿದ್ದರು. ಖರೀದಿ ಕೇಂದ್ರವು ನೇರವಾಗಿ ರೈತರ ಖಾತೆಗೆ ಹಣ ಜಮಾ ಮಾಡುತ್ತಾ ಬಂದಿದೆ. ರೈತರು ಆಯಾ ಪ್ರದೇಶದ ವ್ಯಾಪ್ತಿಯ ಬ್ಯಾಂಕಿಗೆ ತೆರಳಿ ಹಣ ಡ್ರಾ ಮಾಡಿಕೊಳ್ಳಬೇಕು ಎಂದರೆ ಬ್ಯಾಂಕ್ ಮ್ಯಾನೇಜರ್ ಅವರು ನಮ್ಮಲ್ಲಿ ಸದ್ಯಕ್ಕೆ ಅಷ್ಟು ನಗದು ಹಣ ಇಲ್ಲ ಎಂದು ಕೈಚೆಲ್ಲಿ ವಾಪಸ್ಸು ಕಳಹಿಸುತ್ತಾರೆ. ಕೈಸಾಲ ನೀಡಿದವರು ತೊಂದರೆ ಕೊಡುತ್ತಿದ್ದಾರೆ. ಯಾರ ಮುಂದೆ ಹೇಳಬೇಕು ನಮ್ಮ ಗೋಳು ಎನ್ನುತ್ತಾರೆ’ ರೈತ ಹಣಮಂತ.
‘ಗ್ರಾಮೀಣ ಪ್ರದೇಶದ ಬ್ಯಾಂಕಿನಲ್ಲಿ ಸಮಸ್ಯೆ ಬಿಗಡಾಯಿಸಿದೆ. ಎಲ್ಲಾ ಕೆಲಸವನ್ನು ಬಿಟ್ಟು ನಮ್ಮ ಹಣ ಡ್ರಾ ಮಾಡಿಕೊಳ್ಳಲು ವಾರಗಟ್ಟಲೆ ಅಲೆಯುವಂತೆ ಆಗಿದೆ. ಯಾವುದೆ ಮದುವೆ ಹಾಗೂ ಇನ್ನಿತರ ಅಗತ್ಯ ಕೆಲಸಕ್ಕೆ ತುರ್ತಾಗಿ ಬ್ಯಾಂಕಿಗೆ ಹೋಗಿ ನಮ್ಮ ಖಾತೆಯ ಹಣ ಡ್ರಾ ಮಾಡಿಕೊಳ್ಳಲು ಆಗದ ದುಸ್ಥಿತಿ ಎದುರಿಸುತ್ತಿದ್ದೇವೆ. ಈಗಾಗಲೇ ಗ್ರಾಮೀಣ ಪ್ರದೇಶದ ವ್ಯವಸಾಯ ಸಹಕಾರ ಸಂಘಗಳು ರಾಜಕೀಯ ವ್ಯಕ್ತಿಗಳ ಕಪಿಮುಷ್ಠಿಯಲ್ಲಿ ನಲುಗಿ ಹೋಗಿವೆ. ಉಳಿದಿರುವುದು ಈಗ ಗ್ರಾಮೀಣ ಪ್ರದೇಶದ ಬ್ಯಾಂಕ್ ಮಾತ್ರ. ಹಳಿ ತಪ್ಪಿ ಹೋಗುತ್ತಿರುವ ವ್ಯವಸ್ಥೆಯನ್ನು ಸರಿದಾರಿಗೆ ತರವು ಕೆಲಸ ತುರ್ತಾಗಿ ನಡೆಯಲಿ’ ಎನ್ನುತ್ತಾರೆ ರೈತ ಮುಖಂಡ ಯಲ್ಲಯ್ಯ ನಾಯಕ.
‘ತುಸು ಸಮಸ್ಯೆ ಆಗ್ತಾ ಇದೆ’
ಶಹಾಪುರ: ನಮ್ಮ ಆರ್‌ಒ ವ್ಯಾಪ್ತಿಯಲ್ಲಿ ₹ 250ಕೋಟಿ ಬಂದಿದೆ. ಮೇಲಧಿಕಾರಿಗೆ ಮನವಿ ಮಾಡಿದ್ದೇನೆ. ವಾರದಲ್ಲಿ ₹ 10ಕೋಟಿ ಹಣ ನೀಡಿದರೆ ಎಲ್ಲಾ ಶಾಖೆಗಳಿಗೆ ವಿತರಿಸಲು ಅನುಕೂಲವಾಗುತ್ತದೆ. ನಮಗೆ ಬೇರೆ ಜಿಲ್ಲೆಯಿಂದ ಹಣ ಬರಬೇಕು. ಯಾದಗಿರಿಯಿಂದಲೇ ಸರಬರಾಜು ಮಾಡುವ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದೆ’ ಎಂದು ಪಿಕೆಜಿ ಬ್ಯಾಂಕಿನ ಆರ್‌ಒ ಜೆ.ಎಸ್. ಕೋಡ್ಲಾ ತಿಳಿಸಿದ್ದಾರೆ.
‘ಹತ್ತಿ ಮಾರಾಟದ ಹಣ ನಮ್ಮ ಜಿಲ್ಲೆಗೆ ಬಂದಿದೆ. ಎಂದೂ ನಾವು ಇಷ್ಟೊಂದು ಹಣ ನಿರೀಕ್ಷೆ ಮಾಡಿದಿಲ್ಲ. ಒಂದು ತಿಂಗಳಲ್ಲಿ ಬಂದಿರುವುದರಿಂದ ಸಮಸ್ಯೆಯಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು.
ನಮ್ಮ ಆರ್‌ಒ ವ್ಯಾಪ್ತಿಯಲ್ಲಿ 61 ಶಾಖೆಗಳು ಬರುತ್ತವೆ. ಹತ್ತಿ ಮಾರಾಟದಿಂದ ₹ 250ಕೋಟಿ ನಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ನಗದು ಹಣ ವಿತರಿಸಲು ತುಸು ಸಮಸ್ಯೆಯಾಗಿದೆ. ಮೇಲಧಿಕಾರಿಗಳ ಮಾಹಿತಿ ನೀಡಲಾಗಿದೆ–ಜೆ.ಎಸ್.ಕೋಡ್ಲಾ, ಆರ್‌ಒ ಪಿಕೆಜಿ ಬ್ಯಾಂಕ್ ಯಾದಗಿರಿ
ನಂಬಿಕೆ ಹಾಗೂ ವಿಶ್ವಾಸದ ಊರುಗೋಲಿನ ಮೇಲೆ ಗ್ರಾಮೀಣ ಪ್ರದೇಶದ ಬ್ಯಾಂಕ್ ನಿಂತಿವೆ. ನಮ್ಮ ಹಣ ಪಡೆದುಕೊಳ್ಳಲು ಬ್ಯಾಂಕಿಗೆ ವಾರಗಟ್ಟಲೆ ಕೆಲಸ ಬಿಟ್ಟು ಅಲೆಯುವಂತೆ ಆಗಿದೆ. ಹದಗೆಟ್ಟ ಬ್ಯಾಂಕ್ ವ್ಯವಸ್ಥೆ ಸರಿಪಡಿಸಿ–ಯಲ್ಲಯ್ಯ ನಾಯಕ, ರೈತ ಮುಖಂಡ ಶಹಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.