ADVERTISEMENT

ಶಹಾಪುರ: ಅಕ್ರಮ ಕಲ್ಲು ಗಣಿಗಾರಿಕೆಗೆ ತಡೆ

ಶಿರವಾಳ 180ಕ್ಕೂ ಪ್ರದೇಶದಲ್ಲಿ ಗಣಿಗಾರಿಕೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 15:46 IST
Last Updated 28 ಆಗಸ್ಟ್ 2021, 15:46 IST
ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಕಂದಾಯ ಇಲಾಖೆ ಸಿಬ್ಬಂದಿ ನೀಡಿದ ನೋಟಿಸ್ ಪ್ರತಿ
ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಕಂದಾಯ ಇಲಾಖೆ ಸಿಬ್ಬಂದಿ ನೀಡಿದ ನೋಟಿಸ್ ಪ್ರತಿ   

ಶಿರವಾಳ(ಶಹಾಪುರ): ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿದಶಕಗಳಿಂದ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಜಮೀನು ಮಾಲೀಕರಿಗೆ ಕಂದಾಯ ಇಲಾಖೆ ನೋಟಿಸ್ ನೀಡಿದೆ.

ನೂರಾರು ಅಕ್ರಮ ಕಲ್ಲು ಗಣಿಗಾರಿಕೆಗಳು ನಡೆದಿದ್ದು, ಬಹುತೇಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರವಾನಗಿಪಡೆದುಕೊಂಡಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ನಷ್ಟ ಆಗಿದೆ ಎಂಬ ಆರೋಪವಿದೆ.

ಗ್ರಾಮದ ಪಟ್ಟಾ ಜಮೀನಿನಲ್ಲಿ ಸುಮಾರು 180 ಕಲ್ಲು ಗಣಿಗಾರಿಕೆ ನಡೆದಿವೆ. ಇಲ್ಲಿನ ಫರ್ಸಿ (ಹಾಸು ಕಲ್ಲು) ತೆಗೆದುಕೊಂಡು ಯಾದಗಿರಿ, ಸುರಪುರ, ಶಹಾಪುರ ಸೇರಿದಂತೆ ಇತರೆ ಪ್ರದೇಶಗಳ ಮನೆಗಳ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿ ಒಬ್ಬರು ತಿಳಿಸಿದರು.

ADVERTISEMENT

ಪಟ್ಟಾ ಜಮೀನಿನ ಮಾಲೀಕರು ಬೇಸಿಗೆಯಲ್ಲಿ ಕಲ್ಲುಗಳನ್ನು ಹೊರ ತೆಗೆಯುವ ಕಾರ್ಯ ಚುರುಕುಗೊಳಿಸುತ್ತಾರೆ. ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ಕೆಲ ತಿಂಗಳು ಸ್ಥಗಿತಗೊಳಿಸುತ್ತಾರೆ. ಒಂದು ಕಲ್ಲು ಗಣಿಗಾರಿಕೆಯಲ್ಲಿ ಸುಮಾರು 80ರಿಂದ 100 ಅಡಿ ಆಳ ಕೊರೆಯುತ್ತಾರೆ. ಇದು ಅತ್ಯಂತ ಅಪಾಯಕಾರಿ. ಶಿರವಾಳ ಮಾತ್ರವಲ್ಲದೆ ಅಣಬಿ, ಹೊಸೂರು, ದೋರನಹಳ್ಳಿಯಲ್ಲೂ ಇಂತಹದ್ದೆ ಚಟುವಟಿಕೆಗಳು ನಡೆಯುತ್ತಿವೆ ಎಂದರು.

ಶಿರವಾಳ- ಅಣಬಿ ರಸ್ತೆಯ ಕೆಲ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ಮಾಡಲಾಗುತ್ತಿದೆ. ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ. ರಸ್ತೆಯ ಪಕ್ಕದಲ್ಲೇ 80 ಅಡಿಗೂ ಹೆಚ್ಚು ಆಳವಾಗಿ ಕೊರೆದಿದ್ದಾರೆ. ಸ್ವಲ್ಪವೇ ಎಚ್ಚರ ತಪ್ಪಿದರೆ ವಾಹನ ಹಾಗೂ ಪ್ರಯಾಣಿಕರು ಆಪತಿಗೆ ಸಿಲುಕುವರು. ಇಲ್ಲಿನ ಒತ್ತುವರಿ ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ಧ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನುತ್ತಾರೆ ರೈತ ಮುಖಂಡ ಸಿದ್ದಪ್ಪ.

ಕಲ್ಲು ಗಣಿಗಾರಿಕೆ ನಡೆಸುವುದು ತಪ್ಪಲ್ಲ. ಸಂಬಂಧಪಟ್ಟ ಇಲಾಖೆಯಿಂದ ಪರವಾನಿಗೆ ಪಡೆದುಕೊಂಡು ನಿಯಮಬದ್ಧವಾಗಿ ಗಣಿಗಾರಿಕೆ ನಡೆಸಲಿ. ಶಹಾಬಾದ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಪರವಾನಿಗೆ ಪಡೆದು ಕೆಲಸ ಆರಂಭಿಸಿದ್ದಾರೆ. ಈ ಭಾಗದಲ್ಲಿ ಮಾತ್ರ ಕಾನೂನುಗಳನ್ನು ಗಾಳಿಗೆ ತೂರಿ ಮನ ಬಂದಂತೆ ಭೂಮಿಯ ಸಂಪತ್ತು ಕೊಳ್ಳೆ ಹೊಡೆಯುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಿಸಿ, ಅಕ್ರಮ ಕಲ್ಲು ಗಣಿಗಾರಿಕೆಯನ್ನು ತಡೆಯಬೇಕು ಎಂದು ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಮನವಿ ಮಾಡಿದ್ದಾರೆ.

***

ಶಿರವಾಳ ಗ್ರಾಮದಲ್ಲಿನ ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲಿಸುವಂತೆ ಜಮೀನು ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಇದರಿಂದ 10 ಗಣಿಗಾರಿಕೆ ಸ್ಥಗಿತವಾಗಿವೆ
ಗೋವಿಂದ ರಾಠೋಡ, ಗ್ರಾಮ ಲೆಕ್ಕಿಗ, ಶಿರವಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.