ADVERTISEMENT

ಶಹಾಪುರ: ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನವೇ ಧ್ವಜಾರೋಹಣ!

ಬ್ಯಾಂಕ್‌ ಕಚೇರಿ ಮೇಲೆ ಹಾರಾಡಿದ ತ್ರಿವರ್ಣ ಧ್ವಜ: ಫೋಟೊ ತೆಗೆದುಕೊಂಡು ತೆರಳಿದ ವ್ಯವಸ್ಥಾಪಕ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 6:29 IST
Last Updated 15 ಆಗಸ್ಟ್ 2025, 6:29 IST
ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದ ಕೆನರಾ ಬ್ಯಾಂಕ್‌ ಶಾಖೆಯ ಕಚೇರಿ ಮೇಲೆ ಗುರುವಾರ ರಾಷ್ಟ್ರಧ್ವಜರೋಹಣ ಮಾಡಿರುವುದು 
ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದ ಕೆನರಾ ಬ್ಯಾಂಕ್‌ ಶಾಖೆಯ ಕಚೇರಿ ಮೇಲೆ ಗುರುವಾರ ರಾಷ್ಟ್ರಧ್ವಜರೋಹಣ ಮಾಡಿರುವುದು    

ಪ್ರಜಾವಾಣಿ ವಾರ್ತೆ

ಶಹಾಪುರ: ತಾಲ್ಲೂಕಿನ ಗೋಗಿ ಗ್ರಾಮದ ಕೆನರಾ ಬ್ಯಾಂಕ್‌ ಶಾಖೆಯ ಕಚೇರಿಯ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನವಾದ ಗುರುವಾರವೇ ಧ್ವಜಾರೋಹಣ ಮಾಡಲಾಗಿದೆ.

ಸಂಜೆ 6ರ ಸುಮಾರಿಗೆ ಬ್ಯಾಂಕ್ ಮೇಲೆ ತ್ರಿವರ್ಣ ಧ್ವಜ ಹಾರಾಡುವುದನ್ನು ನೋಡಿದ ಗ್ರಾಮಸ್ಥರು ಅಚ್ಚರಿ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ‘ಬ್ಯಾಂಕ್ ಅಧಿಕಾರಿಗಳಿಗೆ ರಾಷ್ಟ್ರಧ್ವಜ, ಸ್ವಾತಂತ್ರ್ಯ ದಿನಾಚರಣೆಯ ಬೆಲೆ ಗೊತ್ತಿಲ್ಲವೆ’ ಎಂದು ಕಿಡಿಕಾರಿದರು. ತಕ್ಷಣವೇ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರು. 

ADVERTISEMENT

‌‘ಬ್ಯಾಂಕಿನ ವ್ಯವಸ್ಥಾಪಕರಾಗಿ ಮಹಿಬೂಬು ಬಾಷಾ ಅವರು‌ ಹೊಸದಾಗಿ ಬಂದಿದ್ದಾರೆ. ಆಗಸ್ಟ್ 15ರಂದು ತಮ್ಮ ಕೆಲಸದ ನಿಮಿತ್ತ ಬ್ಯಾಂಕ್‌ಗೆ ಬರಲು ಆಗುವುದಿಲ್ಲವೆಂದು ಗುರುವಾರ ಸಂಜೆಯೇ ಧ್ವಜಾರೋಹಣ ಮಾಡಿಸಿದ್ದಾರೆ. ಧ್ವಜಾರೋಹಣದ ಫೋಟೊವನ್ನು ತೆಗೆದುಕೊಂಡು ರಾಯಚೂರಿಗೆ ತೆರಳಿದರು’ ಎಂದು ಬ್ಯಾಂಕ್ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಷ್ಟ್ರಧ್ವಜಾರೋಹಣ ಬಹು ಸೂಕ್ಷ್ಮವಾದ ವಿಚಾರ. ಇವತ್ತು ಧ್ವಜಾರೋಹಣ ಮಾಡುವುದು ಬೇಡ ಎಂದು ಮನವಿ ಮಾಡಿದರೂ ಅವರು ಕಿವಿಗೊಡಲಿಲ್ಲ. ಈ ರೀತಿ ಆಗಬಾರದಿತ್ತು ಆಗಿದೆ. ನಾಳೆ ಏನಾಗುತ್ತದೆ ಎಂದು ನಮಗೂ ಭಯ ಆಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಿಬೂಬು ಬಾಷಾ, ‘ನನಗೆ ಧ್ವಜದ ಬಗ್ಗೆ ಗೊತ್ತಾಗಿಲ್ಲ. ನಮ್ಮ ಬ್ಯಾಂಕಿನಲ್ಲಿ ಸಿಬ್ಬಂದಿ ಧ್ವಜಾರೋಹಣ ಮಾಡುವರು ಯಾರು ಇಲ್ಲದ ಕಾರಣ ಗುರುವಾರ ಸಂಜೆ 6ರ ಹಾರಿಸಿ, ಮತ್ತೆ 7ಕ್ಕೆ ಇಳಿಸಲಾಗಿದೆ.  ನನ್ನಿಂದ ತಪ್ಪಾಗಿದೆ’ ಎಂದು ಅಲವತ್ತುಕೊಂಡರು.

ತಹಶೀಲ್ದಾರ್ ಸಿದ್ದಾರೂಢ ಬನ್ನಿಕೊಪ್ಪ ಅವರನ್ನು ಸಂಪರ್ಕಿಸಿದಾಗ, ‘ನನಗೂ ದೂರವಾಣಿ ಮೂಲಕ ಮಾಹಿತಿ ಬಂದಿದೆ. ಒಂದಿಷ್ಟೂ ಜವಾಬ್ದಾರಿ ಇಲ್ಲದ ಅಧಿಕಾರಿಯಿಂದ ಹೀಗಾಗಿದೆ. ಈ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇವೆ’ ಎಂದು ಬೇಸರದಿಂದ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.