ಶಹಾಪುರ: ರಮೇಶ ಕತ್ತಿ ವಾಲ್ಮೀಕಿ ಸಮುದಾಯಕ್ಕೆ ಅಶ್ಲೀಲ ಪದ ಬಳಸಿ ಅವಹೇಳನ ಮಾಡಿದ್ದು, ಅವರ ವಿರುದ್ಧ ದಲಿತ ದೌರ್ಜನ್ಯ ಕಾನೂನು ಅಡಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಸೋಮವಾರ ವಾಲ್ಮೀಕಿ ನಾಯಕ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಯಿಸಿ ನಂತರ ಉಪ ತಹಶೀಲ್ದಾರ್ ಹಾಗೂ ಶಹಾಪುರ ಠಾಣೆಯ ಪಿ.ಐ ಅವರಿಗೆ ಮನವಿ ಪತ್ರ ಸಲ್ಲಿಸಿದರು.
‘ಸೋಲು ಗೆಲುವು ಸಾಮಾನ್ಯ. ಸೋಲಿನಿಂದ ಕಂಗೆಟ್ಟು ವಾಲ್ಮೀಕಿ ಸಮುದಾಯವನ್ನು ಅತ್ಯಂತ ಹೀನಾಯವಾಗಿ ಮತನಾಡಿರುವುದು ಸಮುದಾಯಕ್ಕೆ ನೋವುಂಟು ಮಾಡಿದೆ. ತಳ ಸಮುದಾಯದ ಮೇಲೆ ಅನವಶ್ಯಕ ಜಾತಿ ನಿಂದನೆ ಮಾಡಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಸಮಾಜದಲ್ಲಿ ಶಾಂತಿ ಕದಡುವ ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಬೇಕಾದರೆ ಸರ್ಕಾರದ ದಿಟ್ಟ ಕ್ರಮ ಕೈಗೊಂಡು ಗಡಿಪಾರು ಮಾಡಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ತಾಲ್ಲೂಕು ಘಟಕದ ಅಧ್ಯಕ್ಷ ಮರೆಪ್ಪ ಪ್ಯಾಟಿ, ಕಾರ್ಯದರ್ಶಿ ಹಣಮಂತರಾಯ ಟೋಕಾಪುರ, ಮುಖಂಡರಾದ ದೇವೇಂದ್ರಪ್ಪಗೌಡ ಗೌಡಗೇರಿ, ಯಲ್ಲಯ್ಯ ನಾಯಕ ವನದುರ್ಗ, ಹನುಮೇಗೌಡ ಮರಕಲ್, ಶೇಖರ ದೊರೆ, ನಾಗಪ್ಪ ಕಾಶಿರಾಜ,ಮಲ್ಲಪ್ಪ ಗಂಗನಾಳ, ಗೋಪಾಲ ಬೊಮ್ಮನಹಳ್ಳಿ, ಅಶೋಕ ಹಳಿಸಗರ, ಹಣಮಂತ ವನದುರ್ಗ, ಮಾನಸಪ್ಪ ನಾಗನಟಗಿ, ಶರಣಪ್ಪ ಪ್ಯಾಟಿ, ಶಿವರಾಜ , ಶ್ರೀನಿವಾಸ ನಾಯಕ, ಸೈದಪ್ಪ ಬಾಣತಿಹಾಳ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.