ADVERTISEMENT

ಶಹಾಪುರ: ಪ್ರಜಾಸೌಧ ನಿರ್ಮಾಣ ವಿರೋಧಿಸಿ ಮುಂದುವರೆದ ಧರಣಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 4:46 IST
Last Updated 18 ಡಿಸೆಂಬರ್ 2025, 4:46 IST
ಶಹಾಪುರ ನಗರದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಪ್ರಜಾಸೌಧ ನಿರ್ಮಾಣ ಮಾಡದಂತೆ ಮಂಗಳವಾರ ವಿವಿಧ ಸಾಮೂಹಿಕ ಸಂಘಟನೆಯ ಮುಖಂಡರು ಧರಣಿ ನಡೆಸಿದರು
ಶಹಾಪುರ ನಗರದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಪ್ರಜಾಸೌಧ ನಿರ್ಮಾಣ ಮಾಡದಂತೆ ಮಂಗಳವಾರ ವಿವಿಧ ಸಾಮೂಹಿಕ ಸಂಘಟನೆಯ ಮುಖಂಡರು ಧರಣಿ ನಡೆಸಿದರು   

ಶಹಾಪುರ: ಶೈಕ್ಷಣಿಕ ಉದ್ದೇಶಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಪ್ರಜಾಸೌಧ ನಿರ್ಮಾಣ ಮಾಡುವುದು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ಮಂಗಳವಾರದಿಂದ ಎಬಿವಿಪಿ, ಸಾಮೂಹಿಕ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ ಹಸಿರು ಸೇನೆ ಮುಖಂಡರು ನಗರದ ಪ್ರಥಮ ದರ್ಜೆ ಕಾಲೇಜಿನ ಎದುರುಡೆ ಅನಿರ್ದಿಷ್ಟಾವಧಿ ಧರಣಿ ಮುಂದುವರೆಸಿದ್ದಾರೆ.

ಇಲ್ಲಿನ ಕಾಲೇಜಿಗೆ ವಿದ್ಯಾಭ್ಯಾಸ ಮಾಡಲು ವಿವಿಧ ತಾಲ್ಲೂಕಿನಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಈಗಾಲೇ ಕಾಲೇಜು ಜಾಗವನ್ನು ನಗರಸಭೆ 1 ಎಕರೆ ಷರತ್ತಿನ ಮೇರೆಗೆ ತೆಗೆದುಕೊಂಡು ಟೌನ ಹಾಲ್ ನಿರ್ಮಿಸಿದ್ದಾರೆ, ಮುಂದಿನ ಶೈಕ್ಷಣಿಕ ಅಭ್ಯುದ್ಯಯಕ್ಕೆ ಶಿಕ್ಷಣದ ಜಮೀನು ಅಗತ್ಯವಿದೆ, ಕೂಡಲೇ ಪ್ರಜಾಸೌಧ ಹಳೆ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ನಿರ್ಮಾಣ ಮಾಡಬೇಕು’ ಎಂದು ಧರಣಿ ನಿರತರು ಆಗ್ರಹಿಸಿದರು.

ರೈತ ಮುಖಂಡ ಮಲ್ಲಣಗೌಡ ಪರಿವಾಣ, ಮಹೇಶಗೌಡ ಸುಬೇದಾರ, ಶಾಂತಪ್ಪ ಸಾಲಿಮನಿ, ಮರೆಪ್ಪ ಜಾಲಿಬೆಂಚಿ, ಅನೀಲ ಸಾಕರೆ, ಮಹಾಂತಗೌಡ ಪಾಟೀಲ, ಆಂಜನೆಯ್ಯ ಗಾಂಜಿ, ಶಿವಲಿಂಗ ಮದ್ರಿಕಿ, ಸಂತೋಷ ಸಾಹುಕಾರ, ಶಿವುಕುಮಾರ ಮಲ್ಲೇದ, ಶಂಕರ ಪಡಶೆಟ್ಟಿ, ರಮೇಶ ಗಾಂಜಿ, ಮಹಮ್ಮದ ಇಸ್ಮಾಯಿಲ್ ಧರಣಿಯಲ್ಲಿ ಭಾಗವಹಿಸಿದ್ದರು.

ADVERTISEMENT

ರಾಜಕೀಯ ಕಾವು: ಪ್ರಜಾಸೌಧ ನಿರ್ಮಾಣಕ್ಕೆ ಮಾಗಿಯ ಚಳಿಯ ನಡುವೆ ತಣ್ಣಗೆ ರಾಜಕೀಯ ಕಾವು ಸೇರಿಕೊಳ್ಳುತ್ತಲಿದೆ. ಬಿಜೆಪಿ ಹಾಗೂ ಜೆಡಿಎಸ್ ಕೆಲ ಮುಖಂಡರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೆ ಕಾಂಗ್ರೆಸ್ ಹಾಗೂ ಇನ್ನಿತರ ಸಂಘಟನೆಯ ಮುಖಂಡರು ಪ್ರಜಾಸೌಧ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸುವ ಮೂಲಕ ರಾಜಕೀಯ ಜಟಾಪಟಿಗೆ ಕಾರಣವಾಗುತ್ತಲಿದೆ.

ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಬೇಡ

ಶಹಾಪುರ: ‘ಹೋರಾಟ ಮಾಡುವುದಕ್ಕೆ ಎಲ್ಲರಿಗೂ ಹಕ್ಕು ಇದೆ. ಆದರೆ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ ಇದನ್ನು ನಾವು ಖಂಡಿಸುತ್ತೇವೆ’ ಎಂದು ದರ್ಶನಾಪುರ ಅಭಿಮಾನಿಗಳ ಬಳಗದ ಮುಖಂಡ ಮಲ್ಲಿಕಾರ್ಜುನ ಪೂಜಾರಿ ತಿಳಿಸಿದರು. ಈ ಕುರಿತು ಇಲ್ಲಿನ ಅತಿಥಿಗೃಹದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿಯಿಸಿದ ಅವರು ‘ಶಿಕ್ಷಣ ಇಲಾಖೆಗೆ ಇನ್ನೂ 50ಕ್ಕೂ ಹೆಚ್ಚು ಎಕರೆ ಜಮೀನು ಇದೆ. ಈಗಾಗಲೇ ಗುಲ್ಬರ್ಗ ವಿಶ್ವವಿದ್ಯಾಲಯದ ಜಾಗದಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಿಸಿದ್ದಾರೆ. ಅನವಶ್ಯಕವಾಗಿ ಗೊಂದಲ ಉಂಟು ಮಾಡುವುದ ಪ್ರವೃತ್ತಿ ನಿಲ್ಲಿಸಿ’ ಎಂದರು. ಇದೇ ಸಂದರ್ಭದಲ್ಲಿ ಮುಖಂಡರಾದ ಶ್ರೀಶೈಲ್ ಹೊಸಮನಿ ಹೊನ್ನಪ್ಪ ಗಂಗನಾಳ ಭೀಮರಾಯ ಹೊಸಮನಿ ಶಿವಕುಮಾರ ತಳವಾರ ಭೀಮಣ್ಣ ಮಾಸ್ತರ ಬುದನೂರ ರಾಜ ಪಟೇಲ್ ಉಪಸ್ಥಿತರಿದ್ದರು. ರಾಜಕೀಯ ಬಣ್ಣ ಏಕೆ? ಶಹಾಪುರ: ಪ್ರಜಾಸೌಧ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ. ಸರ್ಕಾರಿ ಕಚೇರಿಗಳು ಒಂದೇ ಸೂರಿನಡಿಯಲ್ಲಿ ಕೆಲಸವಾಗುವುದು ಎಂಬ ಕಾರಣಕ್ಕೆ ಶ್ರಮವಹಿಸಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ₹ 17ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಮುಂದಾಗುತ್ತಿದ್ದಂತೆ ರಾಜಕೀಯ ಬಣ್ಣ ಯಾಕೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಪ್ಪ ಆನೇಗುಂದಿ ಹಾಗೂ ಎಸ್.ಎಂ.ಸಾಗರ ತಿಳಿಸಿದ್ದಾರೆ.

ಬೇಡಿಕೆಯ ಮನವಿ ಸಲ್ಲಿಸಿ

ಧರಣಿ ನಿರತ ಸ್ಥಳವು ಶೈಕ್ಷಣಿಕ ಸ್ಥಳವಾಗಿದೆ. ರಾಷ್ಟ್ರೀಯ ಹೆದ್ದಾರಿ ರಸ್ತೆ ಮೇಲೆ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರದಿಂದ ಕೂಡಿರುತ್ತದೆ. ಇದರಿಂದ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗುವ ಸಂಭವ ಹೆಚ್ಚಾಗಿದ್ದು ಅದಕ್ಕಾಗಿ ತಹಶೀಲ್ದಾರ್‌ ಕಚೇರಿಗೆ ಬಂದು ನಿಮ್ಮ ಬೇಡಿಕೆಯ ಮನವಿ ಸಲ್ಲಿಸಬೇಕು ಎಂದು ತಹಶೀಲ್ದಾರ್ ಸಿದ್ಧಾರೂಢ ಬನ್ನಿಕೊಪ್ಪ ಧರಣಿ ನಿರತರ ಮುಖಂಡರಿಗೆ ಹಿಂಬರಹ ನೀಡಿದ್ದಾರೆ. ಸಂಘಟಕರು ಧರಣಿಗೆ ಅನುಮತಿ ಕೋರಿ ಸಲ್ಲಿಸಿದ ಅರ್ಜಿಗೆ ತಹಶೀಲ್ದಾರ್‌ ಅವರು ಪೊಲೀಸ್ ಅಧಿಕಾರಿಗಳ ವರದಿ ಆಧಾರದ ಮೇಲೆ ಧರಣಿಗೆ ಅವಕಾಶ ನೀಡದೆ ಹಿಂಬರಹ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.