ADVERTISEMENT

ಶಹಾಪುರ | ರಸ್ತೆ ಸಂಚಾರ: ಒಂದಡೆ ಬೆಣ್ಣೆ, ಇನ್ನೊಂದಡೆ ಸುಣ್ಣ

ಟಿ.ನಾಗೇಂದ್ರ
Published 20 ಅಕ್ಟೋಬರ್ 2025, 5:25 IST
Last Updated 20 ಅಕ್ಟೋಬರ್ 2025, 5:25 IST
ಶಹಾಪುರ-ಶಿರವಾಳ ರಸ್ತೆ ಹದಗೆಟ್ಟಿರುವುದು
ಶಹಾಪುರ-ಶಿರವಾಳ ರಸ್ತೆ ಹದಗೆಟ್ಟಿರುವುದು   

ಶಹಾಪುರ: ತಾಲ್ಲೂಕಿನ ಕೆಲ ಹಳ್ಳಿಗಳಲ್ಲಿ ಉತ್ತಮ ರಸ್ತೆ ಸಂಚಾರದ ಭಾಗ್ಯ ಪಡೆದರೆ ಅದೇ ತಾಲ್ಲೂಕಿನ ಹಲವು ಹಳ್ಳಿಗಳು ರಸ್ತೆ ಸಂಚಾರದ ದುಸ್ಥಿತಿ ಎದುರಿಸುತ್ತಲಿವೆ. ಕ್ಷೇತ್ರದಲ್ಲಿ ಒಂದಡೆ ಬೆಣ್ಣೆ ಇನ್ನೊಂದಡೆ ಸುಣ್ಣ ಎನ್ನುವ ಮಾತುಗಳು ಜನತೆಯಿಂದ ಕೇಳಿ ಬರುತ್ತಲಿವೆ.

ತಾಲ್ಲೂಕಿನ ಹೊಸಕೇರಾ, ವನದುರ್ಗ, ಚಾಮನಾಳ, ಕಕ್ಕಸಗೇರಾ, ಶೆಟ್ಟಿಕೇರಾ ಹೀಗೆ ಹಲವಾರು ಗ್ರಾಮೀಣ ಪ್ರದೇಶದ ರಸ್ತೆಗಳ ದುರಸ್ತಿಯ ಜತೆಯಲ್ಲಿ ಎಡ ಮತ್ತು ಬಲ ಭಾಗದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಿ ರಾಜ್ಯ ಹೆದ್ದಾರಿಯನ್ನು ನಾಚಿಸುವಂತೆ ನಿರ್ಮಾಣಗೊಂಡಿವೆ.

ಆದರೆ ಅದೇ ಕ್ಷೇತ್ರದ ಶಿರವಾಳ, ಅಣಬಿ, ರೋಜಾ, ಹೊಸೂರ, ಇಟಗಾ ಮುಂತಾದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಅಲ್ಲಿನ ಪ್ರದೇಶದ ಜನತೆ ಜೀವ ಕೈಯಲ್ಲಿ ಹಿಡಿದುಕೊಂಡು ಅಲೆಯುವಂತಾಗಿದೆ ಎನ್ನುತ್ತಾರೆ ಮುಡಬೂಳ ಗ್ರಾಮದ ನಿವಾಸಿ ಅಶೋಕರಾವ ಮಲ್ಲಾಬಾದಿ.

ADVERTISEMENT

ಸೆಪ್ಟೆಂಬರ್‌–ಅಕ್ಟೋಬರ್‌ ತಿಂಗಳಲ್ಲಿ ಸುರಿದ ವ್ಯಾಪಕ ಮಳೆಯಿಂದ ರಸ್ತೆಗಳ ದುಸ್ಥಿತಿಯ ಭೀಕರತೆ ಹೆಚ್ಚಾಗಿದೆ. ಅಲ್ಲದೆ ಗ್ರಾಮೀಣ ಪ್ರದೇಶದ ಒಳ ರಸ್ತೆ ಹಾಗೂ ಬಡಾವಣೆಯ ರಸ್ತೆಗಳೂ ಹದಗೆಟ್ಟಿವೆ. ಕೆಲ ಕಡೆಗಳಲ್ಲಿ ಕಳಪೆ ಕಾಮಗಾರಿಯಿಂದ ಡಾಂಬರ್‌ ಕಿತ್ತಿದೆ ಎನ್ನುತ್ತಾರೆ ಗ್ರಾಮೀಣ ಜನರು.

ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಕೆಲಸ ಎರಡು ವರ್ಷದಿಂದ ಸಾಗಿದ್ದರಿಂದ ಅಧಿಕ ಭಾರದ ವಾಹನಗಳ ಓಡಾಟದಿಂದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಕೊನೆ ಪಕ್ಷ ರಸ್ತೆ ಮೇಲೆ ಗುಂಡಿ ಬಿದ್ದ ಜಾಗಕ್ಕೆ ಹಿಡಿ ಮಣ್ಣು ಹಾಕಿ ಪುಣ್ಯ ಕಟ್ಟಿಕೊಳ್ಳಲಿಲ್ಲ ಅಧಿಕಾರಿಗಳು. ನಾವು ನಮ್ಮ ವಾಹನಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವಂತಾಗಿದೆ. ಅದರಲ್ಲಿ ಆರೋಗ್ಯದಂತಹ ತುರ್ತು ಸೇವೆ ಒದಗಿಸಲು ಪರದಾಡುವಂತೆ ಆಗಿದೆ ಎಂದು ರಸ್ತೆಯ ಸಂಕಟವನ್ನು ಅನುಭವಿಸುತ್ತಿರುವ ಜನತೆ ಬೇಸರ ವ್ಯಕ್ತಪಡಿಸಿದರು.

ಶಹಾಪುರ ತಾಲ್ಲೂಕಿನ ಇಟಗಾ-ಮುಡಬೂಳ ರಸ್ತೆ ಮೇಲೆ ಗುಂಡಿ ಬಿದ್ದಿವೆ
ಶಿರವಾಳ-ಅಣಬಿ ರಸ್ತೆ ಹಾಳಾಗಿರುವುದು
ರೈಲ್ವೆ ಹಾಗೂ ಭಾರತ ಮಾಲಾ ರಾಷ್ಟ್ರೀಯ ಹೆದ್ದಾರಿ ಕೆಲಸ ನಡೆದಿದ್ದರಿಂದ ರಸ್ತೆಗಳು ಹಾಳಾಗಿವೆ. ಸುಮಾರು ₹50 ಕೋಟಿ ವೆಚ್ಚದಲ್ಲಿ ಶಿರವಾಳ ವ್ಯಾಪ್ತಿಯ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ
ಶರಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ

ರಸ್ತೆ ಅಭಿವೃದ್ಧಿಗೆ ₹50 ಕೋಟಿ ಅನುದಾನ

ಶಿರವಾಳ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಾದ ಶಹಾಪುರ-ಶಿರವಾಳ ಶಿರವಾಳ-ಹೊಸೂರ ಅಣಬಿ-ಮುಡಬೂಳ ಮಡ್ನಾಳ-ಇಂಗಳಗಿ ಗ್ರಾಮಗಳಿಗೆ ಸೇರುವ ಕೂಡು ರಸ್ತೆ ಹಾಗೂ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ₹50 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣ ಕೆಲಸ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು. ಹೆದ್ದಾರಿ ಮತ್ತು ರೈಲ್ವೆ ಕೆಲಸ ನಡೆದಿದ್ದರಿಂದ ರಸ್ತೆ ಕೆಲಸ ಕೈಗೆತ್ತಿಕೊಂಡಿರಲಿಲ್ಲ. ಈ ಭಾಗದ ಜನತೆಯ ಅನುಕೂಲಕ್ಕಾಗಿ ವಿಶೇಷ ಪ್ಯಾಕೇಜ್ ಮಾಡಿ ಕೆಲಸ ಆರಂಭಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.