ADVERTISEMENT

ಶಹಾಪುರ: ಮನ ಸೆಳೆಯುವ ತಿಮ್ಮಕ್ಕ ವೃಕ್ಷೋದ್ಯಾನ

ಟಿ.ನಾಗೇಂದ್ರ
Published 3 ಸೆಪ್ಟೆಂಬರ್ 2025, 6:59 IST
Last Updated 3 ಸೆಪ್ಟೆಂಬರ್ 2025, 6:59 IST
ಶಹಾಪುರ ನಗರದ ಆದರ್ಶ ವಿದ್ಯಾಲಯದ ಹಿಂದುಗಡೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಸಾಲು ಮರದ ತಿಮ್ಮಕ್ಕ ವೃಕ್ಷೊದ್ಯಾನ
ಶಹಾಪುರ ನಗರದ ಆದರ್ಶ ವಿದ್ಯಾಲಯದ ಹಿಂದುಗಡೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಸಾಲು ಮರದ ತಿಮ್ಮಕ್ಕ ವೃಕ್ಷೊದ್ಯಾನ   

ಶಹಾಪುರ: ನಗರದ ಆದರ್ಶ ವಿದ್ಯಾಲಯದ ಹಿಂದುಗಡೆ ಎಂಟು ಎಕರೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯು ನಿರ್ಮಿಸುತ್ತಿರುವ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ (ಟ್ರೀ ಪಾರ್ಕ್) ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಲಿದೆ.

ಬೀದರ್‌-ಶ್ರೀರಂಗಪಟ್ಟಣದ ಹೆದ್ದಾರಿಗೆ ಹೊಂದಿಕೊಂಡಿರುವ ಪ್ರಥಮ ದರ್ಜೆ ಕಾಲೇಜಿನ ಅಧೀನದಲ್ಲಿ 82 ಎಕರೆ ಜಮೀನು ಇದೆ. ಕಾಲೇಜಿನ ಜಾಗದಲ್ಲಿಯೇ ಅನತಿ ದೂರದಲ್ಲಿ ಆದರ್ಶ ವಿದ್ಯಾಲಯವಿದೆ. ವಿದ್ಯಾಲಯದ ಹಿಂದುಗಡೆ ಬೆಟ್ಟ ಪ್ರದೇಶ ಆವರಿಸಿಕೊಂಡಿದೆ. ಅಲ್ಲಿನ ಹಲವು ದಿನದಿಂದ ಅರಣ್ಯ ಇಲಾಖೆಯ ಆಶ್ರಯದಲ್ಲಿ ಸಾಲು ಮರದ ತಿಮ್ಮಕ್ಕನ ವೃಕ್ಷೋದ್ಯಾನ ತಲೆ ಎತ್ತುತ್ತಲಿದೆ.

ಈಚೆಗೆ ಸುರಿದ ಮಳೆಯಿಂದ ಬೆಟ್ಟವು ನಿಸರ್ಗದ ಹಸಿರು ಸೀರೆ ಉಟ್ಟಂತೆ ಕಾಣುತ್ತಲಿದೆ. ಅಲ್ಲಲ್ಲಿ ಕಾಣುವ ಕಲ್ಲು ಬಂಡೆಗಳ ನಡುವೆ ಟಿಸಿಲೊಡೆದು ನಿಂತಿರುವ ಸೀತಾಫಲ, ಕವಳಿ ಗಿಡ, ಇನ್ನಿತರ ಜಾತಿಯ ಗಿಡಗಳು ಹಸಿರು ಮೈದುಂಬಿಕೊಂಡಿವೆ. ಸದ್ಯಕ್ಕೆ ಥೇಟ್ ಮಲೆನಾಡಿನ ಸೊಬಗು ನಮ್ಮ ಕಣ್ಣಿಗೆ ಕಾಣುತ್ತಲಿದೆ ಎನ್ನುತ್ತಾರೆ ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ.

ADVERTISEMENT

ಈಗಾಗಲೇ ಬೆಟ್ಟಕ್ಕೆ ಹೊಂದಿಕೊಂಡ ಜಾಗದಲ್ಲಿ ಕಟ್ಟಿಗೆಯಂತೆ ಹೋಲುವ ಪ್ರವೇಶ ದ್ವಾರ ನಿರ್ಮಿಸಿದ್ದಾರೆ. ಅದಕ್ಕೆ ‘ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ’ ಎಂದು ಹೆಸರಿಟ್ಟಿದ್ದಾರೆ. ನಾಮಫಲಕದ ಮೇಲುಗಡೆ ಚಿರತೆ, ನವಿಲು ಹಾಗೂ ಮಂಗ ಕುಳಿತ ಚಿತ್ರ ಗಮನ ಸೆಳೆಯುತ್ತವೆ. ತುಸು ಎತ್ತರದಲ್ಲಿ ಉದ್ದನೆಯ ಹಾಸುಗಲ್ಲು ಹಾಕಿ ವಾಯುವಿಹಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅದರ ಎಡ ಮತ್ತು ಬಲ ಭಾಗದಲ್ಲಿ ಸಸಿಗಳನ್ನು ನೆಟ್ಟಿದ್ದಾರೆ. ಅಲ್ಲದೆ ಎರಡು ಕಡೆ ಕುಳಿತುಕೊಳ್ಳಲು ಪ್ರತ್ಯೇಕವಾದ ಗೋಪುರವನ್ನು ನಿರ್ಮಿಸಿದ್ದು ಅದು ಸಹ ನೈಸರ್ಗಿಕವಾಗಿ ಕಟ್ಟಿಗೆಯಿಂದ ನಿರ್ಮಿಸಿ ಹಂಚಿನ ಹೊದಿಕೆ ಹಾಕಿರುವುದು ಮನಸ್ಸಿಗೆ ಖುಷಿ ನೀಡುತ್ತದೆ ಎನ್ನುತ್ತಾರೆ ಪ್ರವಾಸಿ ತಾಣವನ್ನು ವೀಕ್ಷಿಸಿದ ಯುವಕ ಮನೋಜಕುಮಾರ.

ಅರಣ್ಯ ಪ್ರದೇಶದ ಜಾಗದಲ್ಲಿ ಸುಮಾರು ₹70 ಲಕ್ಷ ವೆಚ್ಚದಲ್ಲಿ ಟೆಂಡರ್ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹಂತ ಹಂತವಾಗಿ ಕೆಲಸ ಆರಂಭಿಸಲಾಗಿದೆ. ಸರ್ಕಾರವು ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುತ್ತಲಿದೆ. ಮಕ್ಕಳಿಗೆ ಆಟ ಆಡಲು ಪಾರ್ಕ್‌ ನಿರ್ಮಾಣ ಅಲ್ಲದೆ ಔಷಧ ಗುಣವುಳ್ಳ ಸಸಿಗಳನ್ನು ಹಾಕುವುದು ಇದರ ಉದ್ದೇಶವಾಗಿದೆ ಎಂದು ಉಪವಲಯ ಅರಣ್ಯ ಅಧಿಕಾರಿ ಕಾಶಪ್ಪ ಮಾಹಿತಿ ನೀಡಿದರು.

ಹಳಿಸಗರ ವ್ಯಾಪ್ತಿಯ 8 ಎಕರೆ ಕಾಯ್ದಿಟ್ಟ ಅರಣ್ಯ ಪ್ರದೇಶದ ಜಮೀನಿನಲ್ಲಿ ವೃಕ್ಷೋದ್ಯಾನ ನಿರ್ಮಿಸಲಾಗುತ್ತಿದೆ. ಇದು ಅತ್ಯುತ್ತಮ ಪ್ರವಾಸಿ ತಾಣವಾಗಲಿದೆ
ಕಾಶಪ್ಪ, ಉಪವಲಯ ಅರಣ್ಯ ಅಧಿಕಾರಿ
ಬರದ ನಾಡಿನಲ್ಲಿ ಓಯಸಿಸ್‌ನಂತೆ ವೃಕ್ಷೋದ್ಯಾನ ಕಣ್ಣಿಗೆ ಹಬ್ಬವನ್ನು ಉಂಟು ಮಾಡಿದೆ. ಅತ್ಯುತ್ತಮ ಪ್ರವಾಸಿತಾಣ ರೂಪಿಸಲು ಅವಕಾಶವಿದೆ.
ಯಲ್ಲಯ್ಯ ನಾಯಕ, ವನದುರ್ಗ ರೈತ ಮುಖಂಡ
ಶಹಾಪುರ ನಗರದ ಆದರ್ಶ ವಿದ್ಯಾಲಯದ ಹಿಂದುಗಡೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಸಾಲು ಮರದ ತಿಮ್ಮಕ್ಕ ವೃಕ್ಷೊದ್ಯಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.