ADVERTISEMENT

ವೈಚಾರಿಕ ಶರಣ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ...!

ಟಿ.ನಾಗೇಂದ್ರ
Published 28 ಡಿಸೆಂಬರ್ 2025, 8:15 IST
Last Updated 28 ಡಿಸೆಂಬರ್ 2025, 8:15 IST
ವಿಶ್ವಾರಾಧ್ಯ ಸತ್ಯಂಪೇಟೆ
ವಿಶ್ವಾರಾಧ್ಯ ಸತ್ಯಂಪೇಟೆ   

ಶಹಾಪುರ: ಶರಣ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಅವರು, ಯಾದಗಿರಿಯಲ್ಲಿ ಡಿ.28, 29, 30ರಂದು ನಡೆಯಲಿರುವ ರಾಜ್ಯ ಮಟ್ಟದ 5ನೇ ವೈಜ್ಞಾನಿಕ ಸಂಶೋಧನಾ ಪರಿಷತ್ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

ಆಕರ್ಷಕ ವ್ಯಕ್ತಿತ್ವ ಹೊಂದಿರುವ ಸತ್ಯಂಪೇಟೆ ಅವರು, ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ದಿ.ಲಿಂಗಣ್ಣ ಸತ್ಯಂಪೇಟೆಯ ತಂದೆಯ ನಿಗೂಢ ಸಾವಿನ ಬಲೆ ಭೇದಿಸಲು ಸತ್ಯಾನ್ವಷಣೆಯಲ್ಲಿ ತೊಡಗಿಕೊಂಡು, ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳನ್ನು ಬಸವ ಬೆಳಕು ಎನ್ನುವ ಕಾರ್ಯಕ್ರಮದ ಮೂಲಕ ಸದಾ ಜಾಗೃತಿಯ ಚಿಲುಮೆಯಂತೆ ಅರಿವಿನ ಬೆಳಕು ವಿಸ್ತರಿಸುತ್ತ ವಚನ ಸಾಹಿತ್ಯವನ್ನು ಮನೆಮನೆಗೆ ಮುಟ್ಟಿಸಲು ಶ್ರಮಿಸುತ್ತಿರುವ ವಿಶ್ವಾರಾಧ್ಯ ಸತ್ಯಂಪೇಟೆ ಅವರು ಪ್ರಜ್ಞಾವಂತ ಸಮುದಾಯಕ್ಕೆ ದಿಕ್ಸೂಚಿಯಾಗಿದ್ದಾರೆ.

ADVERTISEMENT

‘ಜಡ್ಡುಗಟ್ಟಿರುವ ಮನುವಾದದ ವ್ಯವಸ್ಥೆಯನ್ನು ವಿರೋಧಿಸುತ್ತ, ದೇವರು ಹಾಗೂ ಧರ್ಮದ ಹೆಸರಿನಲ್ಲಿ ನಡೆಯುವ ವಂಚನೆಯನ್ನು ಮುಲಾಜಿಲ್ಲದೆ ವಿರೋಧಿಸಿದ್ದಾರೆ. ಹೀಗಾಗಿ ಸಾಕಷ್ಟು ಮಠಾಧೀಶರ ಕಂಗೆಣ್ಣಿಗೆ ಗುರಿಯಾಗಿ ಹಿಂಸೆ ಅನುಭವಿಸಿ, ಅದಕ್ಕೊಂದು ತಾರ್ಕಿಕ ಅಂತ್ಯ ಹಾಡುವುದೆಂದರೆ ಸಾಮಾನ್ಯ ಸಂಗತಿಯಲ್ಲ’ ಶರಣ ಸಾಹಿತಿ ಶಿವಣ್ಣ ಇಜೇರಿ ಹೇಳಿದ್ದಾರೆ.

ಶರಣ ಸಾಹಿತಿ ಅಲ್ಲದೆ ಒಬ್ಬ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಹಾಪುರದಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮತ್ತು ಹಲವಾರು ಲೇಖನಗಳನ್ನು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಬರೆದು ಗಮನ ಸೆಳೆದಿದ್ದಾರೆ.

ಪ್ರಶಸ್ತಿ: ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಅವರಿಂದ ವಸುದೇವಂ ಭೂಪಾಲ ಪ್ರಶಸ್ತಿ,
ಇಳಕಲ್ ಮಠದಿಂದ ಕಾರುಣ್ಯ ಪ್ರಶಸ್ತಿ, ಮಾನವ ಬಂಧು, ದಲಿತ ಸಂಘಟನೆಯಿಂದ ಪೆರಿಯಾರ, ಬಸವ ಜ್ಯೋತಿ ಲಭಿಸಿವೆ.

ವಿಶ್ವಾರಾಧ್ಯ ಸತ್ಯಂಪೇಟೆ ಅವರ ಪ್ರಮುಖ ಕೃತಿಗಳು

ವಿಶ್ವಾರಾಧ್ಯ ಸತ್ಯಂಪೇಟೆ ಅವರು 23 ಕೃತಿಗಳನ್ನು ರಚಿಸಿದ್ದಾರೆ. ‘ಮಠದ ಗೂಳಿಗಳು’ ‘ಧರ್ಮ ಮತ್ತು ದಗಲಬಾಜಿಗಳು’ ‘ಪ್ರಳಯಾಂತಕರು’ ‘ಕಾವಿಯೋಳಗಿನ ಕೆಂಡ’ ಇವು  ಅವರ ಪ್ರಮುಖ ಕೃತಿಗಳಾಗಿವೆ. ಅಲ್ಲದೆ ಬಸವ ಬೆಳಕು ಧ್ವನಿ ಸುರಳಿ ಬಸವ ಮಾರ್ಗ ಯೂಟ್ಯೂಬ್ ಮೂಲಕ ವೈಚಾರಿಕ ಚಿಂತನೆಯನ್ನೂ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ.

ಯಾದಗಿರಿಯಲ್ಲಿ ನಡೆಯುವ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನದ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ವಿಶ್ವರಾಧ್ಯ ಸತ್ಯಂಪೇಟೆ ಶಹಾಪುರ ನೆಲದ ಶರಣ ಸಾಹಿತಿ ಆಗಿದ್ದಾರೆ
–ಶಿವಣ್ಣ ಇಜೇರಿ, ಶರಣ ಸಾಹಿತಿ ಶಹಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.