ADVERTISEMENT

ಅಂಗವಿಕಲರಿಗೆ ಕೂಡಲೇ ಸ್ಪಂದಿಸಿ: ಶಾಸಕ ಶರಣಗೌಡ ಕಂದಕೂರ ಸಲಹೆ

ಅಧಿಕಾರಿಗಳಿಗೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 5:57 IST
Last Updated 24 ಜುಲೈ 2025, 5:57 IST
ಗುರುಮಠಕಲ್ ಪಟ್ಟಣದ ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರ ಮಾತನಾಡಿದರು
ಗುರುಮಠಕಲ್ ಪಟ್ಟಣದ ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರ ಮಾತನಾಡಿದರು   

ಗುರುಮಠಕಲ್: ‘ನಮ್ಮ ತಂದೆ, ಮಾಜಿ ಶಾಸಕ ದಿ.ನಾಗನಗೌಡ ಕಂದಕೂರ ಅವರ ಅವಧಿಯಲ್ಲಿ ಅಂಗವಿಕಲರಿಗೆ ಮೀಸಲಾದ ಶೇ.10 ಅನುದಾನದಲ್ಲಿ 165 ತ್ರಿಚಕ್ರ ವಾಹನ ವಿತರಿಸಲಾಗಿತ್ತು. ನನ್ನ ಅವಧಿಯಲ್ಲಿ 17 ತ್ರಿಚಕ್ರವಾಹನ ವಿತರಿಸಲಾಗಿದೆ. ಇನ್ನುಮುಂದೆ ನಿಮ್ಮ ಸಲಹೆಯಂತೆ ಅನುದಾನ ಬಳಕೆ ಮಾಡಲಾಗುವುದು’ ಎಂದು ಆರ್.ಪಿ.ಡಿ. ಸಂಸ್ಥೆಗೆ ಶಾಸಕ ಶರಣಗೌಡ ಕಂದಕೂರ ಭರವಸೆ ನಿಡಿದರು.

ಪಟ್ಟಣದ ಡಾ.ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆರ್.ಪಿ.ಡಿ. ಟಾಸ್ಕ್ ಫೋರ್ಸ್ ತಾಲ್ಲೂಕು ಘಟಕ, ಗ್ರಾಮೀಣ ಮತ್ತು ನಗರ ಅಂಗವಿಕಲರ ಪುನರ್ವಸತಿ ಕಾರ್ಯಕ್ರಮದ ಸಹಯೋಗದಲ್ಲಿ ಜರುಗಿದ ‘ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016ರ ಅರಿವು, ವಿಕಲಚೇತನರ ಹಕ್ಕೊತ್ತಾಯ ಸಮಾವೇಶ ಹಾಗೂ ವಿಕಲಚೇತನ ಸಾಧಕರಿಗೆ ಸನ್ಮಾನ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ಅಂಗವಿಕಲರ ಕಲ್ಯಾಣಕ್ಕೆ ಆರ್.ಪಿ.ಡಿ. ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಸರ್ಕಾರ ನೀಡುತ್ತಿರುವ ಅನುದಾನ ಮತ್ತು ಸೌಲಭ್ಯದ ಲಾಭ ನೀವು ಕಡ್ಡಾಯವಾಗಿ ಪಡೆಯಬೇಕು’ ಎಂದರು.

ADVERTISEMENT

‘ಅಧಿಕಾರಿಗಳು ಕಚೇರಿಗಳಿಗೆ ಬರುವ ಅಂಗವಿಕಲರಿಗೆ ಕೂಡಲೇ ಸ್ಪಂದಿಸಬೇಕು. ಅವರಿಗೆ ಆದ್ಯತೆಯಲ್ಲಿ ಸೇವೆ ಒದಗಿಸಬೇಕು. ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಇದ್ದಾಗ ಏಳು ಸಾವಿರ ಅಂಗವಿಕಲರಿಗೆ ವಿಧಾನಸೌದಲ್ಲಿ ಉದ್ಯೋಗಾವಕಾಶ ನೀಡಿದ್ದರು’ ಎಂದರು.

ಆರ್.ಪಿ.ಡಿ ರಾಜ್ಯ ಘಟಕದ ಅಧ್ಯಕ್ಷ ಸುರೇಶ ಭಂಡಾರಿ ಮಾತನಾಡಿ, ‘ಅಂಗವಿಕಲರಿಗೆ ಕಾಯ್ದೆಯ ಕುರಿತು ಮತ್ತು ಅವರ ಹಕ್ಕುಗಳು, ಸೌಲಭ್ಯಗಳ ಕುರಿತು ಮಾಹಿತಿಯ ಕೊರತೆಯಿದೆ. ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ’ ಎಂದರು.

ಎಪಿಡಿ ಸಂಸ್ಥೆಯ ನೀತಿ ಮತ್ತು ವಕಾಲತ್ತು ವಿಭಾಗದ ನಿರ್ದೇಶಕ ಬಾಬು ಖಾನ್ ಅವರು ಕಾಯ್ದೆ ಮತ್ತು ಅನುದಾನ ಬಳಕೆ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಅಂಗವಿಕಲ ಸಾಧಕರನ್ನು ಸನ್ಮಾನಿಸಲಾಯಿತು.

ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀ, ತಹಶೀಲ್ದಾರ್ ಶಾಂತಗೌಡ ಬಿರಾದರ, ಇಒ ಅಂಬ್ರೇಶ ಪಾಟೀಲ, ಟಿಎಚ್ಒ ಡಾ.ಹಣಮಂತರೆಡ್ಡಿ, ಪುರಸಭೆ ಉಪಾಧ್ಯಕ್ಷೆ ರೇಣುಕಾ ಪಡಿಗೆ, ಸಿಒ ಭಾರತಿ ಸಿ.ದಂಡೋತಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಶುಭಾಷ ಕಟಕಟಿ, ಆರ್.ಪಿ.ಡಿ. ಸಂಸ್ಥೆಯ ಸಿದ್ದಣಗೌಡ ಪಾಟೀಲ, ಕಲ್ಯಾಣಾಧಿಕಾರಿ ಸಿದ್ದಣಗೌಡ, ರಮೇಶ ದುಂಡಪ್ಪ, ಸಂಪ್ರೀತಾ ದೇವಪುತ್ರ, ಉಮಾ ನಾಯಕ, ಸೈದಪ್ಪ, ನಾಗಪ್ಪ, ವಿರೂಪಾಕ್ಷಪ್ಪಗೌಡ, ಈರಣ್ಣ ಬಿರಾದಾರ, ರಮೇಶ ಕಟ್ಟಿಮನಿ, ರಮೇಶ ಮಾನೆ ಇದ್ದರು.

ದೈಹಿಕ ನ್ಯೂನತೆಯಿರಬಹುದು. ಆದರೆ ನಿಮ್ಮ ಮಾನಸಿಕ ದೃಢತೆಯನ್ನು ಕಳೆದುಕೊಳ್ಳದಿರಿ. ನಿಮ್ಮ ಬೇಡಿಕೆಗಳ ಕುರಿತು ಅಧಿವೇಶನದಲ್ಲಿ ಮಾತನಾಡುವೆ.
ಶರಣಗೌಡ ಕಂದಕೂರ ಗುರುಮಠಕಲ್ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.