ADVERTISEMENT

‘ಸಮಸ್ಯೆಗಳ ಜಾಗೃತಿ ಮೂಡಿಸುವ ಎನ್‌ಎಸ್‌ಎಸ್‌’

ವಿವಿಧೆಡೆ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ, ವಿಶೇಷ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 5:22 IST
Last Updated 25 ಸೆಪ್ಟೆಂಬರ್ 2022, 5:22 IST
ಯಾದಗಿರಿ ನಗರದ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಆಚರಿಸಲಾಯಿತು
ಯಾದಗಿರಿ ನಗರದ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಆಚರಿಸಲಾಯಿತು   

ಯಾದಗಿರಿ: ಸೇವೆಯ ಮೂಲಕ ಸಮಾಜದಲ್ಲಿನ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವೇ ರಾಷ್ಟ್ರೀಯ ಸೇವಾ ಯೋಜನೆ ಎಂದು ಕನ್ನಡ ಉಪನ್ಯಾಸಕ ಸತೀಶ ಕುಮಾರ ಹವಲ್ದಾರ್ ಹೇಳಿದರು.

ನಗರದ ಲಿಂಗೇರಿ ಕೋನಪ್ಪ ಶಿಕ್ಷಣ ಟ್ರಸ್ಟ್‌ನ ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಮಹಿಳಾ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಶನಿವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ರಾಷ್ಟ್ರಪಿತ ಮಹತ್ಮಗಾಂಧಿ ಕನಸನ್ನು ಮತ್ತು ಅವರ ಕಲ್ಪನೆಯಾದ ಗ್ರಾಮೀಣ ಅಭಿವೃದ್ಧಿಯ ಪರಿಕಲ್ಪನೆಯೊಂದಿಗೆ ವಿದ್ಯಾರ್ಥಿಗಳಲ್ಲಿ ಏಕತೆ ಮತ್ತು ಸಾಮಾಜಿಕ ಜವಾಬ್ದಾರಿ, ದೇಶದ ಸ್ವಚ್ಛತೆ, ಪರಿಸರದ ಸಂರಕ್ಷಣೆ ನಾಡು ನುಡಿಯ ಸಂರಕ್ಷಣೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವುದಕ್ಕಾಗಿ 1969ರ ಸೆ.24 ರಂದು ಅಂದಿನ ಕೇಂದ್ರದ ಸರ್ಕಾರದ ಶಿಕ್ಷಣ ಸಚಿವ ಡಾ.ವಿ.ಕೆ.ಆರ್.ವಿ.ರಾವ್ ಅವರಿಂದ ಈ ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು ಎಂದರು.

ADVERTISEMENT

ಶುದ್ಧ ಕುಡಿಯುವ ನೀರು, ಗ್ರಾಮ ನೈರ್ಮಲ್ಯ ಸಾಕ್ಷರತೆಯ ಅರಿವು, ಶೌಚಾಯಲಯದ ಸದ್ಭಳಕೆ, ಗ್ರಾಮಿಣ ಭಾಗದಲ್ಲಿನ ಮೂಢನಂಬಿಕೆಗಳ ಅರಿವು ಮತ್ತು ಸುತ್ತಮುತ್ತಲಿನ ಪರಿಸರದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಜನಸಂಖ್ಯೆ ಹೆಚ್ಚಳದಿಂದಾಗುವ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಯೋಜನೆಯ ಆಶಯ ನುಡಿಯಂತೆ ನಾನು ನನಗಾಗಿ ಅಲ್ಲ ನಿಮಗಾಗಿ ಎನ್ನುವ ಧ್ಯೇಯಯ ವಾಕ್ಯದಂತೆ ಪ್ರತಿಯೊಬ್ಬರು ಕೂಡ ಅರಿತುಕೊಂಡು ಸರಳ ಜೀವನ ನಡೆಸಲು ಮಾರ್ಗದರ್ಶನ ನೀಡುವುದು ಈ ರಾಷ್ಟ್ರೀಯ ಸೇವಾ ಯೋಜನೆಯ ಗುರಿಯಾಗಿದೆ ಎಂದರು.

ನಂತರ ಮಾತನಾಡಿದ ಪ್ರಾಚಾರ್ಯ ಜಿ.ಎಂ.ವಿಶ್ವಕರ್ಮ, ರಚನಾತ್ಮಕ ಕಾರ್ಯಗಳಲ್ಲಿ ಯುವಕ, ಯುವತಿಯರು ತಮ್ಮ ಕ್ರೀಯಾಶೀಲತೆ ಮತ್ತು ಸೃಜನಶೀಲತೆಯನ್ನು ಸರಿಯಾಗಿ ಬಳಸಿಕೊಳ್ಳಲು ಈ ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮವು ಉತ್ತಮ ವೇದಿಕೆಯಾಗಿದೆ ಎಂದರು.

ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಸ್ವಯಂ ಬದುಕುವ ಧೈರ್ಯ, ಆತ್ಮವಿಶ್ವಾಸ, ನಾಯಕತ್ವದ ಗುಣಗಳು, ಶಿಸ್ತು, ಸಮಯ ಪ್ರಜ್ಞೆ ಮತ್ತು ಸ್ವಯಂ ನಿರ್ಧಾರ ತೆಗೆದುಕೊಳ್ಳುವುದನ್ನು ಕಲಿಸುತ್ತದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮ ದಲ್ಲಿ ಉಪನ್ಯಾಸಕರಾದ ಗೀತಾ ಪಾಟೀಲ, ಬಸಲಿಂಗಪ್ಪ, ರೂಪಿಕಾ ಅಪರ್ಣಾ ಜುಗೇರಿ, ಸುಷ್ಮಾ ಕುಲ್ಕರ್ಣಿ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.