ADVERTISEMENT

‘ಶಿಕ್ಷಣದಿಂದ ಸಮಸ್ಯೆಗಳಿಗೆ ಪರಿಹಾರ’

ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 4:28 IST
Last Updated 6 ಆಗಸ್ಟ್ 2021, 4:28 IST
ಯಾದಗಿರಿಯ ಆರ್ಯಭಟ್ಟ ಇಂಟರ್‌ ನ್ಯಾಷನಲ್‌ ಅಕಾಡೆಮಿ ಶಾಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾವಿದ್ಯಾರ್ಥಿಗಳೊಂದಿಗೆ ಭಾಗವಹಿಸಿದ್ದರು
ಯಾದಗಿರಿಯ ಆರ್ಯಭಟ್ಟ ಇಂಟರ್‌ ನ್ಯಾಷನಲ್‌ ಅಕಾಡೆಮಿ ಶಾಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾವಿದ್ಯಾರ್ಥಿಗಳೊಂದಿಗೆ ಭಾಗವಹಿಸಿದ್ದರು   

ಯಾದಗಿರಿ: ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹಲವಾರು ಸಮಸ್ಯೆಗಳ ಮಧ್ಯೆ ಜೀವನ ನಡೆಸುತ್ತಿದ್ದೇವೆ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದ್ದು, ಕಲಿಕೆಯಿಂದ ನಾವು ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು‘ ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಹೇಳಿದರು.

ನಗರದ ಆರ್ಯಭಟ್ಟ ಇಂಟರ್‌ ನ್ಯಾಷನಲ್‌ ಅಕಾಡೆಮಿ ಶಾಲೆಯಲ್ಲಿ ಆಯೋಜಿಸಿದ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಜಿಲ್ಲೆಯ ಹಲವು ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಇಲ್ಲಿನ ಕ್ಯಾಂಪಸ್‌ನಲ್ಲಿ ಬೆಳೆಸಿರುವ ಸಾವಿರಾರು ಗಿಡಮರಗಳು ಸಂತಸ ತಂದಿದೆ. ಹಸಿರಿನ ವಾತಾವರಣದ ನಡುವೆ ಕಲಿಯುವುದು ಉತ್ತಮವಾದದ್ದು‘ ಎಂದರು.

ADVERTISEMENT

‘ವಿದ್ಯಾರ್ಥಿಗಳಿಗೆ ಆರೋಗ್ಯಕರ ವಾತಾವರಣಕ್ಕೆ ಶಾಲಾ ಆಡಳಿತ ಮಂಡಳಿ ಒತ್ತು ನೀಡಬೇಕು. ಇದು ಮಕ್ಕಳ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಿ, ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ‘ ಎಂದುಅಭಿಪ್ರಾಯಪಟ್ಟರು.

ಬಡತನ ಹಾಗೂ ಸಂಕಷ್ಟಗಳ ನಡುವೆಯೂ ಗ್ರಾಮೀಣ ಭಾಗದ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಬದಲಾವಣೆಯ ಸಂಕೇತ. ಶಿಕ್ಷಣದಿಂದ ಸಮಾಜದ ಪ್ರತಿಯೊಬ್ಬರಿಗೂ ಅವಕಾಶಗಳು ಸಿಗಬೇಕು‘ ಎಂದು ಹೇಳಿದರು.

’ಶಾಲಾ ಶಿಕ್ಷಕರು ಹಾಗೂ ಪೋಷಕರು ತಮ್ಮ ಮಕ್ಕಳ ಮನಸ್ಥಿತಿ, ಆಸಕ್ತಿ ಗಮನಿಸಿ ಆ ದಿಸೆಯಲ್ಲಿ ಅವರಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು. ಮುಂದಿನ ದಿನಗಳಲ್ಲಿ ಅವರು ತಮ್ಮ ಗುರಿ ತಲುಪುತ್ತಾರೆ. ಪಠ್ಯ-ಪುಸ್ತಕಗಳ ಅಭ್ಯಾಸದ ಜೊತೆಗೆ ಸ್ಪರ್ಧಾತ್ಮಕ ಪುಸ್ತಕಗಳತ್ತ ಗಮನಹರಿಸಬೇಕು. ಇದರಿಂದ ಮಕ್ಕಳಲ್ಲಿ ಜ್ಞಾನ್ ಸಂಪತ್ತು ವೃದ್ಧಿಯಾಗುತ್ತದೆ‘ ಎಂದು ಅವರು ಹೇಳಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಧಾಕರರೆಡ್ಡಿ ಮಾಲಿಪಾಟೀಲ ಅನಪುರ ಮಾತನಾಡಿ, ’ಹಿಂದುಳಿದ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಅವರಲ್ಲಿ ಶಿಸ್ತು, ಸಮಯ ಪ್ರಜ್ಞೆ ಹಾಗೂ ದೇಶಾಭಿಮಾನ ಮೂಡಿಸಲು ಆದ್ಯತೆ ನೀಡಿದ್ದೇವೆ‘ ಎಂದು ತಿಳಿಸಿದರು.

‘ಕಳೆದ 2 ವರ್ಷಗಳಿಂದ ಕಂಡುಬರುತ್ತಿರುವ ಕೋವಿಡ್‌ ಪಿಡುಗು ಶಿಕ್ಷಣ ಕ್ಷೇತ್ರ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಶಿಕ್ಷಣ ನೀಡಿದ್ದೇವೆ. ಬರುವ ದಿನಗಳಲ್ಲಿ ಪರಿಣಾಮಕಾರಿಯಾದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪ್ರಯತ್ನಿಸುತ್ತೇವೆ‘ ಎಂದರು.

ವೇದಿಕೆ ಮೇಲೆ ಶಾಲಾ ಪ್ರಾಂಶುಪಾಲ ಅರವಿಂದಾಕ್ಷಣ ಇದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶ್ರುತಿ ಗುಪ್ತಾ ಪ್ರಥಮ ಸ್ಥಾನ, ಶಯಿಸ್ತಾ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಇದೇ ವೇಳೆ ಜಿಲ್ಲಾಧಿಕಾರಿ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಪ್ರಮಾಣ ಪತ್ರ ನೀಡಿ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.