ADVERTISEMENT

ಶಹಾಪುರ: ‘ಶೀಘ್ರವೇ 64 ನಿವೇಶನಗಳ ಹಕ್ಕು ಪತ್ರ ಹಂಚಿಕೆ’

​ಪ್ರಜಾವಾಣಿ ವಾರ್ತೆ
Published 24 ಮೇ 2025, 13:51 IST
Last Updated 24 ಮೇ 2025, 13:51 IST
ಶಹಾಪುರ ಹೊರವಲಯದ ಸರ್ವೇ ನಂಬರ್‌ 299ರ ಪ್ರದೇಶದಲ್ಲಿ ರಚನೆಯಾದ 64 ನಿವೇಶನಗಳ ಪ್ರದೇಶವನ್ನು ಶನಿವಾರ ಸಚಿವ ಶರಣಬಸಪ್ಪ ದರ್ಶನಾಪುರ ಪರಿಶೀಲಿಸಿದರು
ಶಹಾಪುರ ಹೊರವಲಯದ ಸರ್ವೇ ನಂಬರ್‌ 299ರ ಪ್ರದೇಶದಲ್ಲಿ ರಚನೆಯಾದ 64 ನಿವೇಶನಗಳ ಪ್ರದೇಶವನ್ನು ಶನಿವಾರ ಸಚಿವ ಶರಣಬಸಪ್ಪ ದರ್ಶನಾಪುರ ಪರಿಶೀಲಿಸಿದರು   

ಶಹಾಪುರ: ‘ಹೊರವಲಯದ ಸರ್ವೇ ನಂಬರ್‌ 299ರ ಪ್ರದೇಶದಲ್ಲಿ ರಚನೆಯಾದ 64 ನಿವೇಶನಗಳನ್ನು ಮೀಸಲಾತಿ ಪ್ರಕಾರ ನಿರ್ಗತಿಕ, ಸೂರು ವಂಚಿತ ಬಡ ಜನತೆಗೆ ಶೀಘ್ರದಲ್ಲಿಯೇ ಹಂಚಿಕೆ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ಹೊರವಲಯದ ಸರ್ವೇ ನಂಬರ್‌ 299ರ ಪ್ರದೇಶದಲ್ಲಿ ರಚನೆಯಾದ 64 ನಿವೇಶನಗಳ ಪ್ರದೇಶಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

‘ಸರ್ಕಾರದ ಮಾರ್ಗಸೂಚಿ ನಿಯಮದ ಪ್ರಕಾರ 20* 30 ಅಳತೆಯ 64 ನಿವೇಶನಗಳ ಪೈಕಿ 17 ಕುಂಬಾರ ಸಮದಾಯ, 12 ಘಿಸಾಡಿ, 11 ಪರಿಶಿಷ್ಟ ಜಾತಿ, 4 ಪರಿಶಿಷ್ಟ ಪಂಗಡ, 9 ಸಾಮಾನ್ಯ, 6 ಅಲ್ಪಸಂಖ್ಯಾತ, 3ವಿಕಲಚೇತನ, ಹಿರಿಯ ನಾಗರಿಕ ಹಾಗೂ ಮಾಜಿ ಸೈನಿಕ ತಲಾ 1 ನಿವೇಶವನ್ನು ಹಂಚಿಕೆ ಮಾಡಲಾಗುವುದು. ಈಗಾಗಲೇ ಅಲ್ಲಿನ ಪ್ರದೇಶದಲ್ಲಿ ಅಗತ್ಯ ಮೂಲ ಸೌಲಭ್ಯ ಒದಗಿಸುವಂತೆ ನಗರಸಭೆ ಸಿಬ್ಬಂದಿಗೆ ಸೂಚಿಸಿದೆ. ಹಕ್ಕು ಪತ್ರ ವಿತರಣೆಯಾಗಿ ಅರ್ಹಫಲಾನುಭವಿಗಳು ಮಾತ್ರ ಇಲ್ಲಿ ನೆಲೆಸಲು ಅವಕಾಶ ನೀಡಬೇಕು’ ಎಂದು ಸ್ಥಳದಲ್ಲಿಯೇ ಉಪಸ್ಥಿತರಿದ್ದ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಅವರಿಗೆ ಸಚಿವರು ತಾಕೀತು ಮಾಡಿದರು.

ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತಕುಮಾರ ಸುರಪುರಕರ್, ಶಾಂತಪ್ಪ ಕಟ್ಟಿಮನಿ, ಬಸವರಾಜ ನಾಯ್ಕಲ್ ಉಪಸ್ಥಿತರಿದ್ದರು.

ADVERTISEMENT
ಶರಣಬಸಪ್ಪ ದರ್ಶನಾಪುರ

ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಯುದ್ಧ ಗೆದ್ದಿಲ್ಲವೇ...?

ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರದ ಅವಧಿಯಲ್ಲಿ ಪಾಕಿಸ್ತಾನದ ನಡುವೆ ಯುದ್ಧ ನಡೆದಾಗ ನಮ್ಮ ದೇಶದ ಶೈನಿಕರು ಕೆಚ್ಚೆದೆ ಹೋರಾಟ ಮಾಡಿ ಯುದ್ಧ ಗೆದ್ದಿಲ್ಲವೇ...? ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾಧ್ಯಮದ ಮೂಲಕ ಬಿಜೆಪಿ ಪಕ್ಷದ ನಾಯಕರಿಗೆ ಪ್ರಶ್ನಿಸಿದ ಪರಿ ಇದು. ಶಹಾಪುರ ನಗರದಲ್ಲಿ ಶನಿವಾರ ಸುದ್ಧಿಗೋಷ್ಠಿ ನಡೆಸಿದ ಅವರುಯುದ್ಧ ಆರಂಭಿಸಿದ್ದೇವೆ ಎನ್ನುವರು ಅವಸರದಲ್ಲಿ ಕದನ ವಿರಾಮ ಯಾಕೆ ಮಾಡಿದಿರಿ. ಒಂದು ತಾರ್ತಿಕ ಅಂತ್ಯ ಹಚ್ಚಬೇಕಾಗಿತ್ತು. ಯುದ್ಧ ಯಾರನ್ನು ನೆಮ್ಮದಿಯಾಗಿ ಇರಲು ಬಿಡುವುದಿಲ್ಲ. ಸೈನಿಕರು ಕೆಚ್ಚೆದೆಯ ಹೋರಾಟ ಮಾಡಿ ಗೆಲುವು ಸಾಧಿಸಿದ್ದಾರೆ. ಅದೆಲ್ಲ ಖುಷಿ ಹಾಗೂ ಸಂಭ್ರಮದ ವಿಚಾರ. ಆದರೆ ಬಿಜೆಪಿಯ ನಾಯಕರು ತಾವೇ ಯುದ್ದಕ್ಕೆ ನಿಂತು ಗೆದ್ದವರಂತೆ ಅತಿರೇಕವಾಗಿ ವರ್ತಿಸಿ ಭಾವನಾತ್ಮಕ ವಿಷಯಗಳನ್ನು ಬಿತ್ತನೆ ಮಾಡಿ ಜನತೆಯನ್ನು ಮರಳು ಮಾಡುವ ಕಾಲ ಮುಗಿದು ಹೋಗಿದೆ ಎಂದು ಅವರು ಲೇವಡಿ ಮಾಡಿದರು. ಕೇಂದ್ರ ಬಿಜೆಪಿ ಸರ್ಕಾರ 11 ವರ್ಷ ಅಧಿಕಾರದ ಅವಧಿಯಲ್ಲಿ ಇದೆ. ಅಭಿವೃದ್ಧಿ ಕೆಲಸ ಅದಕ್ಕೆ ಅಪಥ್ಯ. ಹುಸಿ ಭರವಸೆ ಹಾಗೂ ಹಸಿ ಸುಳ್ಳು ಹೇಳುವುದರಲ್ಲಿ ಬಿಜೆಪಿ ನಾಯಕರು ನಿಸ್ಸಿಮರಾಗಿದ್ದಾರೆ. ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ಬಿಜೆಪಿಯ ರಾಜ್ಯ ಘಟಕದ ಬಿ.ವೈ ವಿಜಯೇಂದ್ರ ಅವರ ಮಾತಿಗೆ ಕವಡೆ ಕಿಮ್ಮತ್ತು ಇಲ್ಲ ಎಂದು ಅವರು ದೂರಿದರು. ಪ್ರಸಕ್ತ ಬಾರಿ ಉತ್ತಮ ಮಳೆ ಇದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿರುವುದು ಖುಷಿ ತಂದಿದೆ. ಜಿಲ್ಲೆಯಲ್ಲಿ ಮುಂಗಾರು ಬಿತ್ತನೆಗಾಗಿ ಸಕಲ ವ್ಯವಸ್ಥೆ ಮಾಡಿಕೊಂಡಿದೆ. ನಕಲಿ ಹತ್ತಿ ಹಾಗೂ ಇನ್ನಿತರ ಬೀಜ ಮಾರಾಟ ಮಾಡುವುದನ್ನು ಕಟ್ಟುನಿಟ್ಟಾಗಿ ತಡೆಯಲು ಕೃಷಿ ಇಲಾಖೆಗೆ ಸೂಚಿಸಿದೆ. ನೆರೆ ರಾಜ್ಯದಿಂದ ಬೀಜ ಖರೀದಿಸಿ ಸಂಕಷ್ಟ ಎದುರಿಸುವ ರೈತರು ನಮ್ಮಲ್ಲಿಯೇ ಗುಣಮಟ್ಟದ ಬೀಜ ಪಡೆದು ಕಡ್ಡಾಯವಾಗಿ ರಸೀದಿ ಪಡೆದುಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.

‘ಆಲಮಟ್ಟ ಜಲಾಶಯ ಎತ್ತರಿಸಲು ಮುಂದಾಗಿ’

ಕೇಂದ್ರ ಬಿಜೆಪಿ ಸರ್ಕಾರ ತನ್ನ ಪರಾಕ್ರಮವನ್ನು ರೈತರ ಅಭಿವೃದ್ಧಿಗಾಗಿ ಪ್ರದರ್ಶಿಸಲಿ. ಆಲಮಟ್ಟಿ ಜಲಾಶಯದ ಎತ್ತರವನ್ನು 521ರಿಂದ 524 ಅಡಿ ಎತ್ತರಿಸಲು ಯಾಕೆ ಮುಂದಾಗುತ್ತಿಲ್ಲ. ಗೆಜೆಟ್ ಹೊರಡಿಸಲು ಮೀನವೇಷ ಯಾಕೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಪ್ರಶ್ನಿಸಿದರು. ಜಲಾಶಯ ಎತ್ತರವನ್ನು ಹೆಚ್ಚಿಸಿದರೆ ರೈತರಿಗೆ ಇನ್ನಷ್ಟು ನೀರಾವರಿ ಭಾಗ್ಯ ಲಭಿಸಲಿದೆ ಎಂದು ಅವರು ತಿಳಿಸಿದರು.

ಬಾಯಿ ಚಪಲಕ್ಕೆ ಮಾತಾಡುವುದು ನಿಲ್ಲಿಸಿ

ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಮ್ಮ ನಾಲಿಗೆ ಹರಿಬಿಟ್ಟು ಸಚಿವ ಪ್ರಿಯಾಂಕ್ ಖರ್ಗೆ ಬಗ್ಗೆ ಹಗುರವಾಗಿ ಮಾತಾಡಿರುವುದು ಅವರ ಘನತೆಗೆ ಶೋಭೆ ತರುವಂತದಲ್ಲ. ಬಾಯಿ ಚಪಲಕ್ಕೆ ಮಾತನಾಡಿವುದು ನಿಲ್ಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಸಲಹೆ ಮಾಡಿದರು. ಕೆಟ್ಟ ಶಬ್ದ ಬಳಕೆ ಹಾಗೂ ವೈಯಕ್ತಿಕ ನಿಂದನೆ ಮಾಡುವುದು ಯಾವ ರಾಜಕಾರಣಿಗೂ ಶೋಭೆ ತರುವುದಿಲ್ಲ. ನಮಗೆ ವಯಸ್ಸಾದಂತೆ ಮಾಗಿ ತೂಕಬದ್ಧವಾಗಿ ಮಾತಾಡಬೇಕು.ಸಾರ್ವಜನಿಕ ಜೀವನದಲ್ಲಿ ನಾವಿರುವಾಗ ಪ್ರತಿಯೊಬ್ಬರು ನಮ್ಮ ನಡೆಯನ್ನು ಗಮನಿಸುತ್ತಾರೆ ಎಂಬುವುದು ಮರೆಯಬೇಡಿ ಎಂದರು. ಯಾವುದೇ ಪಕ್ಷದ ನಾಯಕರು ಇರಲಿ ಸಾರ್ವಜನಿಕ ಒಳತಿಗಾಗಿ ಟೀಕೆ ಸಲಹೆ ಮಾಡಿ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ಮಾಡಿ. ಅದಲ್ಲೆವನ್ನು ಬಿಟ್ಟು ವೈಯಕ್ತಿಕವಾಗಿ ನಿಂದಿಸುವುದು ರಾಜಕಾರಣಿಗಳಿಗೆ ಸರಿಯಾದ ನಡೆಯಲ್ಲ ಎಂದು ಅವರು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.