ADVERTISEMENT

ಕೆಎಂಎಫ್‌ನಿಂದ ಎಮ್ಮೆ ಹಾಲು ಬಿಡುಗಡೆ ಶೀಘ್ರ: ಪಿ.ವಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2023, 16:20 IST
Last Updated 30 ಡಿಸೆಂಬರ್ 2023, 16:20 IST
ಯಾದಗಿರಿ ನಗರದಲ್ಲಿ ಕೆಎಂಎಫ್ ನಂದಿನಿ ಹಾಲಿನ ವಿತರಕರ ಸಭೆಯಲ್ಲಿ ಕಲಬುರಗಿ-ಬೀದರ್‌-ಯಾದಗಿರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪಿ.ವಿ.ಪಾಟೀಲ ಮಾತನಾಡಿದರು
ಯಾದಗಿರಿ ನಗರದಲ್ಲಿ ಕೆಎಂಎಫ್ ನಂದಿನಿ ಹಾಲಿನ ವಿತರಕರ ಸಭೆಯಲ್ಲಿ ಕಲಬುರಗಿ-ಬೀದರ್‌-ಯಾದಗಿರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪಿ.ವಿ.ಪಾಟೀಲ ಮಾತನಾಡಿದರು    

ಯಾದಗಿರಿ: ಕಲಬುರಗಿ, ಬೀದರ್‌, ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯೊಂದಿರುವ ಕೆಎಂಎಫ್ ಕಲಬುರಗಿ ಹಾಲು ಒಕ್ಕೂಟದಿಂದ ಅತಿ ಶೀಘ್ರದಲ್ಲೇ ಎಮ್ಮೆ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕಲಬುರಗಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪಿ.ವಿ.ಪಾಟೀಲ ಹೇಳಿದರು.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಂದಿನಿ ಹಾಲು ವಿತರಕರ ಸಭೆಯಲ್ಲಿ ಮಾತನಾಡಿದ ಅವರು, ನಂದಿನಿ ಬ್ರ್ಯಾಂಡ್‌ ಅಡಿಯಲ್ಲಿ ಎಮ್ಮೆ ಹಾಲನ್ನು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.

‘ಸದ್ಯ 33 ಸಾವಿರ ಲೀಟರ್ ಎಮ್ಮೆ ಹಾಲು ಮಾರಾಟದ ಗುರಿ ಹೊಂದಲಾಗಿದೆ. ನಂದಿನಿ ಹಾಲು ರೈತರ ಮತ್ತು ಗ್ರಾಹಕರ ನಡುವೆ ಸಂಪರ್ಕವಿದ್ದಂತೆ. ವಿತರಕರ ಶ್ರಮ ಕೂಡ ಅಪಾರವಾಗಿದೆ. ರಾಸಾಯನಿಕ ಮಿಶ್ರಿತ ಕಲಬೆರಕೆ ಹಾಲು ಗ್ರಾಹಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರ ಬಗ್ಗೆ ಸಂಶೋಧನೆ ವರದಿ ಹೊರಬಿದ್ದಿದೆ. ನಂದಿನಿ ಹಾಲು ಗ್ರಾಹಕರ ಕುಟುಂಬದ ಆರೋಗ್ಯ ಕಾಪಾಡುತ್ತದೆ’ ಎಂದರು.

ADVERTISEMENT

‘ಪ್ರತಿದಿನ ಕಲಬುರಗಿ ಒಕ್ಕೂಟಕ್ಕೆ 80 ಸಾವಿರ ಲೀಟರ್‌ ಹಾಲು ಶೇಖರಣೆಯಾಗುತ್ತಲಿದೆ. ಪ್ರತಿದಿನ 15 ಸಾವಿರ ಲೀಟರ್‌ ಹೆಚ್ಚುವರಿ ಹಾಲನ್ನು ಹಾಲಿನ ಪೌಡರ್ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಹೈನುಗಾರಿಕೆ ತೀವ್ರ ಹಿಂದುಳಿದಿದೆ. ಜಿಲ್ಲೆಯ ಹುಣಸಗಿ ತಾಲ್ಲೂಕಿನಲ್ಲಿ 18 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿದಿನ 2 ಸಾವಿರ ಲೀಟರ್‌ ಹಾಲು ಕಲಬುರಗಿ ಒಕ್ಕೂಟಕ್ಕೆ ಬರುತ್ತದೆ. ಹುಣಸಗಿ ತಾಲ್ಲೂಕು ಮಾದರಿಯಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸಹಕಾರ ಸಂಘಗಳಿಂದ ಹಾಲು ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಮಾರುಕಟ್ಟೆ ವ್ಯವಸ್ಥಾಪಕ ಪತ್ತಾರ ಮಾತನಾಡಿ, ವಿತರಕರ ಪರಿಶ್ರಮ ಅಪಾರ. ವಿತರಕರಿಗೆ ವಿಮಾ ಸೌಲಭ್ಯ, ಇತರ ಸೌಕರ್ಯಗಳನ್ನು ಕಲಬುರಗಿ ಒಕ್ಕೂಟದಿಂದ ಮಾಡಿಕೊಡಲಾಗುವುದು. ನಂದಿನಿ ಹಾಲಿನ 160ಕ್ಕೂ ಹೆಚ್ಚು ಉತ್ಪನ್ನಗಳಿವೆ. ಅತಿ ಹೆಚ್ಚು ನಂದಿನಿ ಹಾಲನ್ನು ಗ್ರಾಹಕರಿಗೆ ಮಾರಾಟ ಮಾಡಿ ರೈತರ ಮತ್ತು ಡೇರಿಯ ಹಿತ ಕಾಪಾಡಬೇಕು ಎಂದರು.

ಮಾರುಕಟ್ಟೆ ಅಧೀಕ್ಷಕ ಶರಣು ಪಾಟೀಲ, ವಿತರಕರಾದ ಆನಂದ ಮಿಲ್ಟ್ರಿ, ನಾಗಪ್ಪ ನಾಯ್ಕಲ್, ಮೈಹಿಪಾಲರೆಡ್ಡಿ, ಸುಭಾಸ ದೇವರಮನಿ, ಶರಣು, ಅಂಜನೇಯ, ಏಕನಾಥ ಚವಾಣ್‌, ದೇವಪ್ಪ ಪೂಜಾರಿ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ವಿತರಕರು ಭಾಗವಹಿಸಿದ್ದರು.

ಮಾರುಕಟ್ಟೆ ಅಧಿಕಾರಿ ಅವಿನಾಶ ಜಾಧವ್ ಸ್ವಾಗತಿಸಿದರು. ಮಾರುಕಟ್ಟೆ ಮೇಲ್ವಿಚಾರಕ ವಿಶ್ವನಾಥರೆಡ್ಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.