ADVERTISEMENT

ಶಹಾಪುರ: ಮರೆಯಾದ ನಿಸರ್ಗ ಬುದ್ಧ

₹4 ಕೋಟಿ ಅನುದಾನ ಮಂಜೂರು, ಕಾಮಗಾರಿಗೆ ಮಾಡದೇ ಬಿಲ್‌ ಎತ್ತುವಳಿ

ಟಿ.ನಾಗೇಂದ್ರ
Published 12 ಮೇ 2025, 6:19 IST
Last Updated 12 ಮೇ 2025, 6:19 IST
ಶಹಾಪುರ- ಭೀಮರಾಯನಗುಡಿ ಹೆದ್ದಾರಿಗೆ ಹೊಂದಿಕೊಂಡು ನಿಸರ್ಗದ ಮಡಲಿನ ಬೆಟ್ಟದ ಸಾಲುಗಳ ಮಧ್ಯ ಮಲಗಿದ ದೃಶ್ಯ
ಶಹಾಪುರ- ಭೀಮರಾಯನಗುಡಿ ಹೆದ್ದಾರಿಗೆ ಹೊಂದಿಕೊಂಡು ನಿಸರ್ಗದ ಮಡಲಿನ ಬೆಟ್ಟದ ಸಾಲುಗಳ ಮಧ್ಯ ಮಲಗಿದ ದೃಶ್ಯ   

ಶಹಾಪುರ: ಬೀದರ್‌-ಶ್ರೀರಂಗಪಟ್ಟಣದ ಹೆದ್ದಾರಿಯನ್ನು ನಗರವು ಸೀಳಿಕೊಂಡು ಅರ್ಧ ಕಿ.ಮೀ ಕ್ರಮಿಸಿ ಎಡಗಡೆ ಭಾಗಕ್ಕೆ ಸಾಗುವ ಮಧ್ಯದಲ್ಲಿ ಬೆಟ್ಟದ ಸಾಲುಗಳ ಮೇಲೆ ಕಣ್ಣಾಡಿಸಿದರೆ ಸಾಕು ನಮ್ಮೊಳಗಿನ ಬುದ್ದ ಜಾಗೃತಗೊಳ್ಳುತ್ತಾನೆ. ಬೆಟ್ಟದ ಉದ್ದನೆಯ ಸಾಲುಗಳ ಮಧ್ಯ ಬುದ್ಧ ಅನಾವರಣಗೊಳ್ಳುತ್ತಾನೆ. ಆಗ ಅದನ್ನು ನೋಡಿದ ಖುಷಿ ಹಾಗೂ ಸಂಭ್ರಮ ಮನಸ್ಸಿಗೆ ಹೇಳ ತೀರದು.

ಮೊದಲು ಬುದ್ದ ಮಲಗಿದ ಪ್ರದೇಶದ ಸುತ್ತಲು ಅಭಿವೃದ್ಧಿಪಡಿಸಿಕೊಳ್ಳಲು ಸರ್ವೇ ನಂ.430/2ರಲ್ಲಿ 3.37 ಗುಂಟೆ ಹಾಗೂ 431/3ರಲ್ಲಿ 28 ಗುಂಟೆ ಜಮೀನು ಹೀಗೆ ಒಟ್ಟು 4.25 ಗುಂಟೆ ವಶಪಡಿಸಿಕೊಂಡು ಅಭಿವೃದ್ಧಿಪಡಿಸಲು ಚಾಲನೆ ದೊರೆಯಿತು. ಪ್ರವಾಸಿ ಸೌಲಭ್ಯ ಅಭಿವೃದ್ಧಿಗಾಗಿ ₹4ಕೋಟಿ ಅನುದಾನದಲ್ಲಿ 2015 ಆಗಸ್ಟ್ 8ರಂದು ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಾರಂಭಿಕವಾಗಿ ₹1.64 ಕೋಟಿ ಅನುದಾನ ಬಿಡುಗಡೆಗೊಳಿಸಿ ಬೆಂಗಳೂರಿನ ದಿ.ನರ್ಸರಿಮೇನ್ ಕೋಆಪರೇಟಿವ್ ಸಂಸ್ಥೆಗೆ ಕಾಮಗಾರಿ ಕೈಗೊಳ್ಳಲು ಆದೇಶ ನೀಡಿತ್ತು.

‘ವಿಚಿತ್ರವೆಂದರೆ ಕಾಮಗಾರಿ ಪೂರ್ಣಗೊಳಿಸದೆ ಇದ್ದರೂ ಸಂಸ್ಥೆಗೆ ₹75.90ಲಕ್ಷ ಪಾವತಿ ಮಾಡಿದ್ದಾರೆ’ ಎಂದು ದೂರುತ್ತಾರೆ ಬುದ್ಧಘೋಷ ದೇವೇಂದ್ರ ಹೆಗ್ಗೆಡೆ.

ADVERTISEMENT

ಇನ್ನೂ ಅಲ್ಲಿನ ಪ್ರದೇಶದಲ್ಲಿ ವೀಕ್ಷಣೆ ಗೋಪುರ, ಆಸನಗಳ ವ್ಯವಸ್ಥೆ, ಮಕ್ಕಳ ಆಟಿಕೆ ಸಾಮಾನು, ಉದ್ಯಾನ, ಪಾದಚಾರಿಗಳಿಗೆ ಸಮರ್ಪಕವಾಗಿ ಅಲೆದಾಡುವ ವ್ಯವಸ್ಥೆ ಕೈಗೊಳ್ಳಬೇಕಾಗಿದೆ. ಇದು ಒಂದು ಭಾಗವಾದರೆ, ಇನ್ನೊಂದು ದೊಡ್ಡ ತೊಡಕು ಎದುರಾಗಿರುವುದು ಹೆದ್ದಾರಿಗೆ ಹೊಂದಿಕೊಂಡು ವೀಕ್ಷಣೆಯ ಗೋಪುರದ ನಾಮಫಲಕ್ಕೆ ಹೊಂದಿಕೊಂಡು ಖಾಸಗಿ ಜಮೀನು ಮಾಲೀಕತ್ವದ ವ್ಯಕ್ತಿ ಒಬ್ಬರು ಅಲ್ಲಿ ಶೆಡ್ ನಿರ್ಮಿಸಿದ್ದಾರೆ. ಇದರಿಂದ ಮಲಗಿದ ಬುದ್ದ ಕಣ್ಮರೆಯಾಗಿದ್ದಾನೆ. ದಲಿತಪರ ಹಾಗೂ ಶಹಾಪುರ ಹಿತರಕ್ಷಣಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಶೆಡ್ ತೆರವಿಗೆ ಮನವಿ ಸಲ್ಲಿಸಿದರೂ ಜಿಲ್ಲಾಡಳಿತ ಮಾತ್ರ ಮೌನಕ್ಕೆ ಶರಣಾಗಿದೆ. ನಗರಸಭೆ ಸಿಬ್ಬಂದಿ ಮೇಲಧಿಕಾರಿಗಳಿಗೆ ಬೊಟ್ಟು ತೋರಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಬುದ್ದನ ಅನುಯಾಯಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಮಾವಿನ ಕೆರೆಯಲ್ಲಿ ಬೋಟಿಂಗ್

ಬುದ್ದ ಮಲಗಿದ ಸಾಲುಗಳ ಬೆಟ್ಟಕ್ಕೆ ಹೊಂದಿಕೊಂಡು ಮಳೆ ನೀರು ಸಂಗ್ರಹಿಸಲು ವಿಶಾಲವಾದ ಮಾವಿನಕೆರೆ ನಿರ್ಮಿಸಿದ್ದಾರೆ. ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ನಿಸರ್ಗದ ದೃಶ್ಯ ಮತ್ತಷ್ಟು ಸೋಬಗು ಹೆಚ್ಚಿಸುತ್ತಿದೆ. ಈಗಾಗಲೇ ಮಾವಿನ ಕೆರೆಗೆ ಕಾಲುವೆ ನೀರು ತುಂಬಿಸುವ ಯೋಜನೆ ಭರದಿಂದ ಸಾಗಿದೆ. ಕೆರೆಯಲ್ಲಿ ನೀರು ಸಂಗ್ರಹವಾದ ಮೇಲೆ ಬೋಟಿಂಗ್ ವ್ಯವಸ್ಥೆಗೆ ಪ್ರವಾಸೋದ್ಯಮ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ರಾಮಚಂದ್ರ ಕಟ್ಟಿಮನಿ.

ಬುದ್ದನ ಚಿತ್ರದ ಕಲ್ಪನೆ ನೋಡುಗರ ಕಣ್ಣಲ್ಲಿ ನೋಡುಗರ ಕಣ್ಣಿಗೆ ಶೋಧದ ತುಡಿತವಿದ್ದರೆ ಬೆಟ್ಟದ ಕಲ್ಲು ಬಂಡೆಗಳ ನಡುವೆ ವಸ್ತುಗಳನ್ನು ಕಾಣಲು ಸಾಧ್ಯ ಎನ್ನುವಂತೆ ಸಾಲು ಬೆಟ್ಟದ ಮೇಲೆ ಕಣ್ಣು ತೆರೆದು ನೋಡುತ್ತಾ ಸಾಗುತ್ತಿದ್ದಂತೆ ಬಂಡೆಗಳ ನಡುವೆ ಬುದ್ದನ ಕಿವಿ ಮೂಗು ದೇಹವು ಮಲಗಿದಂತೆ ಕಾಣುತ್ತಾ ನಮಗರಿವಿಲ್ಲದಂತೆ ಬುದ್ದ ನಮ್ಮೋಳಗೆ ಮೂಡುತ್ತಾ ಸಾಗುತ್ತಾನೆ. ಬುದ್ದನ ಚಿತ್ರದ ಕಲ್ಪನೆ ನೋಡುಗರ ಕಣ್ಣುಗಳಲ್ಲಿ ಬಂದಾಗ ಅದರ ಸ್ಪಷ್ಟತೆಯಾಗುತ್ತದೆ ವಿನಃ ಅಲ್ಲಿ ಬರೀ ಕಲ್ಲು ಬಂಡೆಗಳ ಸಾಲು ಕಾಣುವುದನ್ನು ಮರೆಯದಿರಿ.

ಬುದ್ದ ಮಲಗಿದ ದೃಶ್ಯ ಕಾಮಗಾರಿ ನಿರ್ಮಿಸದೆ ಹೆಚ್ಚು ಹಣ ಪಡೆದುಕೊಂಡಿರುವ ಬಗ್ಗೆ ಸಂಸ್ಥೆಗೆ ಪತ್ರ ಬರೆದು ತಿಳಿಸಿದೆ. ಭೂಸ್ವಾಧೀನ ಪ್ರಕ್ರಿಯೆ ಚಾಲನೆಯಲ್ಲಿ ಇದೆ. ಶೆಡ್ ತೆರವುಗೊಳಿಸುವಂತೆ ನಿವೇಶನಗಳ ಮಾಲೀಕರಿಗೆ ಮನವಿ ಮಾಡಿದೆ
ರಾಮಚಂದ್ರ ಕಟ್ಟಿಮನಿ, ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ ಯಾದಗಿರಿ
ಅಧಿಕಾರಿಗಳ ನಿಷ್ಕಾಳಜಿ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ಜಗದ ಗಮನ ಸೆಳೆದಿರುವ ಬುದ್ದ ಮಲಗಿದ ದೃಶ್ಯ ಅಭಿವೃದ್ಧಿಯಲ್ಲಿ ಮರೀಚಿಕೆಯಾಗಿದೆ. ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತುಕೊಳ್ಳಲಿ.
ಬುದ್ದಘೋಷ ದೇವೇಂದ್ರ ಹೆಗ್ಗೆಡೆ, ಬೌದ್ದ ಸಾಹಿತಿ
ಬುದ್ದ ವೀಕ್ಷಣೆಯ ಸ್ಥಳದಲ್ಲಿ ಶೆಡ್ ನಿರ್ಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.