
ಹುಣಸಗಿ: ‘ಅನುಭಾವವು ಹೇಳುವುದರಿಂದ ಬರುವದಿಲ್ಲ. ಬದಲಿಗೆ ಅದನ್ನು ವಿಚಾರಿಸಿ ಆಚಾರದಲ್ಲಿ ತಂದರೆ ಮಾತ್ರ ಅನುಭಾವವಾಗುತ್ತದೆ’ ಎಂದು ಪ್ರಭುಸ್ವಾಮಿ ಕೊಡೇಕಲ್ಲಮಠ ಹೇಳಿದರು.
ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಮಹಲಿನಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಸವನ ಹುಣ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತನ್ನಲ್ಲಿಯೇ ತಾನು ಹುಡುಕಿ, ತನ್ನನ್ನೇ ತಾನು ತಿಳಿದುಕೊಳ್ಳುವುದೇ ಅನುಭಾವ. ಅದಕ್ಕಾಗಿ ಶರಣರು ನುಡಿದಂತೆ ನಡೆಯುವ ಮೂಲಕ ತಮ್ಮ ಅನುಭಾವವನ್ನು ವಚನಗಳ ಮೂಲಕ ಎಲ್ಲರಿಗೂ ತಿಳಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.
ಸಾಹಿತಿ ಗುರುರಾಜ ಜ್ಯೋಶಿ ಮಾತನಾಡಿ, ‘ನಿತ್ಯವೂ ಭಗವಂತನ ಚಿಂತನೆ ಮಾಡುವ ಮೂಲಕ ಅವನ ಮಹಿಮೆ ತಿಳಿದು ಆ ಮಾರ್ಗದಲ್ಲಿ ನಡೆಯುವುದೇ ಅನುಭಾವ. ಭಗವಂತನ ಚಿಂತನೆ ಎಂಬುದು ಒಂದು ದಿನ, ವರ್ಷದಲ್ಲಿ ಅರಿಯುವುದಲ್ಲ. ಅದು ಜೀವನ ಪೂರ್ತಿ ಚಿಂತನೆ ಮಾಡುವುದಾಗಿದೆ’ ಎಂದು ಹೇಳಿದರು.
ಬಸವರಾಜ ಭದ್ರಗೋಳ ಮಾತನಾಡಿ, ‘ಶರಣರ ತತ್ವದಲ್ಲಿಯೇ ಅನುಭಾವದ ಅಮೃತವಿದೆ. ಅದರ ಸಾರ ತಿಳಿಯುತ್ತ ಹೊದಂತೆಲ್ಲ ನಮ್ಮಲ್ಲಿ ಅನುಭಾವ ಆವರಿಸುತ್ತದೆ’ ಎಂದು ತಿಳಿಸಿದರು.
ಹಿರಿಯರಾದ ಬಸವರಾಜಯ್ಯ ಮಹಲಿನಮಠ ಸಾನ್ನಿಧ್ಯ ವಹಿಸಿ ಮಾತನಾಡಿದರು. ಕಸಾಪ ವಲಯ ಅಧ್ಯಕ್ಷ ಕೋರಿಸಂಗಯ್ಯ ಗಡ್ಡದ, ರಾಚಪ್ಪ ಜಾಲಿಗಿಡದ ಸೇರಿದಂತೆ ಇತರರು ಮಾತನಾಡಿದರು. ಅಲ್ಲಮಪ್ರಭು ಹೊಕ್ರಾಣಿ, ಈರಪ್ಪಯ್ಯ ತಾತಾ, ಈರಪ್ಪಯ್ಯ ಹುಣಸಿಗಿಡದ, ದಾನಪ್ಪ ಅಪ್ಪಗೋಳ, ಮಲ್ಲು ಜಂಗಳಿ, ಚೇತನ ಮುತ್ತಗಿ, ಸಂಗಮೇಶ ಅಡ್ಡಿ, ಚನ್ನಮ್ಮ ಉದ್ದನ, ಹನುಮವ್ವ ಗುಮತೆ, ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.