ADVERTISEMENT

ಡ್ರಗ್ಸ್ ಜಿಹಾದ್ ನಿರ್ಮೂಲನೆಗೆ ಶ್ರೀರಾಮ ಸೇನೆ ಆಗ್ರಹ

ಶ್ರೀರಾಮ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 17:06 IST
Last Updated 10 ಸೆಪ್ಟೆಂಬರ್ 2020, 17:06 IST
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ಶ್ರೀರಾಮ ಸೇನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ಶ್ರೀರಾಮ ಸೇನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು   

ಯಾದಗಿರಿ: ರಾಜ್ಯದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ‘ಡ್ರಗ್ಸ್ ಜಿಹಾದ್’ ನಿರ್ಮೂಲನೆಗೆ ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಗುರುವಾರ ಇಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.

ಶ್ರೀರಾಮಸೇನೆ ಕಲ್ಯಾಣ ಕರ್ನಾಟಕ ಅಧ್ಯಕ್ಷ ವಿಜಯಕುಮಾರ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಡ್ರಗ್ಸ್ ಜಿಹಾದ್‌ನ ಅಂತರರಾಷ್ಟ್ರೀಯ ಜಾಲ ವ್ಯಾಪಕವಾಗಿ ಹರಡಿ ರಾಜ್ಯದ ಘನತೆಗೆ, ಯುವ ಸಮುದಾಯಕ್ಕೆ ಶಾಪವಾಗಿ ಪರಿಣಮಿಸಿದೆ. ಇದುದೇಶದ ಭವಿಷ್ಯಕ್ಕೆ ಕಂಟಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡ್ರಗ್ಸ್ ಜಿಹಾದ್ ಕಬಂಧಬಾಹುಗಳು ಎಲ್ಲೆಡೆ ಚಾಚಿದ್ದು, ಇವುಗಳನ್ನು ಬೇರು ಸಮೇತ ಕಿತ್ತು ಹಾಕಬೇಕು. ಕೂಡಲೇ ಸರ್ಕಾರ ಕಾರ್ಯಪ್ರವೃತ್ತರಾಗಿ ಡ್ರಗ್ಸ್ ಮಾರಾಟ ಹಾಗೂ ಸಾಗಾಟ ಮಾಡುವವರನ್ನು ರಾಷ್ಟ್ರೀಯ ಸುರಕ್ಷಾ ಕಾಯಿದೆಯಲ್ಲಿ ಬಂಧಿಸುವಂತೆ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಶಾಲಾ, ಕಾಲೇಜುಗಳ ಸುತ್ತಮುತ್ತ ಗುಪ್ತಚರ ಇಲಾಖೆಯ ಗಸ್ತು ಹೆಚ್ಚಿಸಬೇಕು. ಯಾವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಡ್ರಗ್ಸ್ ಪತ್ತೆಯಾಗುತ್ತೋ ಆ ಠಾಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಬೇಕು ಎಂದರು.

ಪಬ್, ಕ್ಲಬ್, ಲೈವ್ ಬ್ಯಾಂಡ್, ಸ್ಟಾರ್ ಹೋಟೆಲ್ ಮುಂತಾದ ಸ್ಥಳಗಳಲ್ಲಿ ನಿರಂತರ ನಿಗಾ ಇರಿಸಿ ತನಿಖೆ ನಡೆಸಬೇಕು. ಕೆಲವು ರಾಜಕಾರಣಿಗಳು, ದೊಡ್ಡ ಉದ್ದಿಮೆದಾರರು, ಪಕ್ಷಗಳಿಗೆ ದೇಣಿಗೆ ನೀಡುವ ದೊಡ್ಡ ಕುಳಗಳು ಈ ದಂಧೆಯ ಹಿಂದೆ ಇರುವುದರ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಅಧ್ಯಕ್ಷ ಸಂದೀಪ್ ಮಹೇಂದ್ರಕರ್, ವಡಗೇರಾ ತಾಲ್ಲೂಕು ಅಧ್ಯಕ್ಷ ಅಂಬರೀಷ್ ತಡಿಬಿಡಿ, ಹನುಮಂತರಾಯ್ ಪಾಟೀಲ, ಸುಭಾಷ್ ದೇವದುರ್ಗ, ಶರಣಮ್ಮ ಜೋತ್ತೆ, ಚನ್ನಬಸಮ್ಮ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.