ADVERTISEMENT

ವಿದ್ಯಾರ್ಥಿಗಳಿಂದ ಪ್ರತಿಭಟನೆ

ಗುರುಮಠಕಲ್‌: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಭದ್ರತೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 10:40 IST
Last Updated 5 ಜನವರಿ 2020, 10:40 IST
ಗುರುಮಠಕಲ್‌ನ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಶನಿವಾರ ಪ್ರತಿಭಟನೆ ನಡೆಸಿದರು
ಗುರುಮಠಕಲ್‌ನ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಶನಿವಾರ ಪ್ರತಿಭಟನೆ ನಡೆಸಿದರು   

ಗುರುಮಠಕಲ್: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಾಲೇಜಿನಲ್ಲಿನ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಶನಿವಾರ ಪ್ರತಿಭಟನೆ ನಡೆಸಿದರು.

‘ಕಾಲೇಜಿನ ಒಳಗಡೆ ಹೊರಗಿನವರು ಯಾರ್‍ಯಾರೋ ಬಂದು ನಮಗೆ ಕಿರುಕುಳ ಕೊಡುತ್ತಾರೆ. ಶೌಚಾಲಯ ದುರ್ನಾತ ಬಿರುತ್ತಿದೆ. ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ ಎಂಬುದೂ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸಿ ಎಂದು ವಿದ್ಯಾರ್ಥಿಗಳು ತರಗತಿ ಕೋಣೆಯಲ್ಲಿ ಉಪನ್ಯಾಸಕರು ಹಾಗೂ ಪ್ರಾಚಾರ್ಯರೊಂದಿಗೆ ವಾಗ್ವಾದಕ್ಕಿಳಿದರು.

ಸಮಸ್ಯೆಗಳನ್ನು ಎಷ್ಟು ಬಾರಿ ತಿಳಿಸಿದರೂ ಏಕೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನೆ ಮಾಡಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ವಿದ್ಯಾರ್ಥಿಗಳೊಡನೆ ಚರ್ಚಿಸಿದರು.

ADVERTISEMENT

ಹೊರಗಡೆಯಿಂದ ಬರುವ ಪೋಲಿಗಳಿಗೆ ಕಾಲೇಜಿನ ಕೆಲವು ಅತಿಥಿ ಶಿಕ್ಷಕರ ಬೆಂಬಲ ಇರುವುದರಿಂದ ಅವರು ಯಾವುದೇ ಭಯವಿಲ್ಲದೆ ಇಂತಹ ಕೆಲಸಗಳು ಮಾಡುತ್ತಿದ್ದಾರೆ. ಪ್ರಾಚಾರ್ಯರಿಗೆ ಇದೆಲ್ಲಾ ಗೊತ್ತಿದ್ದರೂ ಸುಮ್ಮನಿದ್ದು ಪರೋಕ್ಷವಾಗಿ ಅವರಿಗೆ ಅಭಯವನ್ನು ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಶಾಸಕರಿಗೆ ಕೇಳಿ: ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಕೇಳಿದರೆ ನಿಮ್ಮ ಶಾಸಕರನ್ನು ಹೋಗಿ ಕೇಳಿ ಪಡೆಯಿರಿ ಎಂದು ಪ್ರಾಂಶುಪಾಲರು ಹೇಳುತ್ತಾರೆ. ಜತೆಗೆ ಅವಾಚ್ಯವಾಗಿ ಮಾತನಾಡುತ್ತಾರೆ ಎಂದೂ ವಿದ್ಯಾರ್ಥಿಗಳು ದೂರಿದರು.

ಆಡಳಿತ ಮಂಡಳಿ ಸದಸ್ಯರು ಸಮಸ್ಯೆಗಳನ್ನು ಕೇಳಿ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು. ಶೌಚಾಲಯದ ಅವ್ಯವಸ್ಥೆ, ವಿದ್ಯಾರ್ಥಿ ಗಳಿಗೆ ಅಭದ್ರತೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಅನ್ಯ ವ್ಯಕ್ತಿಗಳ ಹಸ್ತಕ್ಷೇಪದಂತಹ ವಿಷಯಗಳು ಮುಂದುವರಿಯದಂತೆ ಎಚ್ಚರಿಕೆ ನೀಡಿದರು.

ಸಮಸ್ಯೆಗಳನ್ನು ಮೂರು ದಿನಗಳಲ್ಲಿ ಪರಿಹರಿಸುವುದಾಗಿ ಮತ್ತು ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸುವುದಾಗಿ ಪ್ರಾಂಶುಪಾಲ ಡಾ.ಅಶೋಕ ಮಟ್ಟಿ ಹೇಳಿದರು. ಅವರು ಹೊರಗಿನವರಿಗೆ ಬೆಂಬಲ ನೀಡುತ್ತಿರುವ ಅತಿಥಿ ಉಪನ್ಯಾಸಕರ ಮೇಲೆ ಕೈಮ ಕೈಗೊಳ್ಳುವ ಭರವಸೆಯನ್ನು ನೀಡಿದ ನಂತರ ವಿದ್ಯಾರ್ಥಿಗಳು ಮನೆಗೆ ತೆರಳಿದರು.ಆಡಳಿತ ಮಂಡಳಿಯ ವೆಂಕಟೇಶ ಹೂಗಾರ, ದಾವಲಸಾಬ್, ಜಗದೀಶ ಆವಂಟಿ, ಸತ್ಯನಾರಾಯಣ ತಿವಾರಿ, ಜ್ಞಾನೇಶ್ವರರೆಡ್ಡಿ, ಹಳೆ ವಿದ್ಯಾರ್ಥಿಗಳಾದ ರವೀಂದ್ರ ಪೋತುಲ್, ಪೋಷಕರಾದ ನಾಗರಾಜ, ಅಶ್ವತರೆಡ್ಡಿ, ಕನ್ನಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.