ADVERTISEMENT

ಕಕ್ಕೇರಾ | ಅಚ್ಚುಮೆಚ್ಚಿನ ಶಿಕ್ಷಕಿಯ ಪಾದಪೂಜೆ ನೆರವೇರಿಸಿದ ವಿದ್ಯಾರ್ಥಿಗಳು

ಟ್ರ್ಯಾಕ್ಟರ್‌ನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 14:47 IST
Last Updated 7 ಜುಲೈ 2024, 14:47 IST
ಕಕ್ಕೇರಾದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳು ಲಕ್ಷ್ಮೀಬಾಯಿ ಕಿರಣಗಿ ಅವರ ಪಾದಪೂಜೆ ಮಾಡಿದರು
ಕಕ್ಕೇರಾದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳು ಲಕ್ಷ್ಮೀಬಾಯಿ ಕಿರಣಗಿ ಅವರ ಪಾದಪೂಜೆ ಮಾಡಿದರು   

ಕಕ್ಕೇರಾ: ಪಟ್ಟಣದ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಲಕ್ಷ್ಮೀಬಾಯಿ ಕಿರಣಗಿ ವಯೋನಿವೃತ್ತಿ ಹೊಂದಿದ ಪ್ರಯುಕ್ತ ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಅವರನ್ನು ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟರು. ವಿದ್ಯಾರ್ಥಿಗಳು ಶಿಕ್ಷಕಿಯ ಪಾದಪೂಜೆ ಮಾಡಿದರು.

ಸನ್ಮಾನಿತಗೊಂಡು ಲಕ್ಷ್ಮೀಬಾಯಿ ಕಿರಣಗಿ ಮಾತನಾಡಿ, ‘ನನ್ನ 39 ವರ್ಷಗಳ ಸೇವೆ ಅತ್ಯಂತ ತೃಪ್ತಿ ತಂದಿದೆ. ಇಲಾಖೆಯ ಮೇಲಧಿಕಾರಿಗಳ ಹಾಗೂ ಶಾಲಾ ಅಡಳಿತ ಮಂಡಳಿಯ ಸಹಾಯ, ಸಹಕಾರದಿಂದ ಕರ್ತವ್ಯದಲ್ಲಿ ಎಲ್ಲಿಯೂ ಕಪ್ಪು ಚುಕ್ಕೆ ಇಲ್ಲದೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಸಹಕಾರಿಯಾಯಿತು’ ಎಂದರು.

‘ವಿದ್ಯಾರ್ಥಿಗಳು ಸಮಯ ಪಾಲನೆ, ಶಿಸ್ತು ಮೈಗೂಡಿಸಿಕೊಳ್ಳಬೇಕು. ಶಿಕ್ಷಕರ ಮಾರ್ಗದರ್ಶನದಲ್ಲಿ ಸತತ ಅಧ್ಯಯನ ಮಾಡಿ, ಉನ್ನತ ಗುರಿಯೊಂದಿಗೆ ಭವಿಷ್ಯ ರೂಪಿಸಿಕೊಳ್ಳಬೇಕು. ಪಾಲಕರು ಕೂಡ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ’ ಎಂದು ಸಲಹೆ ನೀಡಿದರು.

ADVERTISEMENT

ಶಿಕ್ಷಕ ಬಸಯ್ಯಸ್ವಾಮಿ ಮಾತನಾಡಿ, ‘ಲಕ್ಷ್ಮೀಬಾಯಿ ಅವರು ನಮ್ಮ ಶಾಲೆಯ ಮದರ್ ಇಂಡಿಯಾ ಎಂದೇ ಖಾತಿ ಪಡೆದಿದ್ದರು. ಅವರ ಆದರ್ಶಗಳು ನಮಗೆ ಮಾರ್ಗದರ್ಶಕವಾಗಿವೆ’ ಎಂದು ಹೇಳಿದರು.

ಶಿಕ್ಷಕರಾದ ಅಶೋಕ ಕೋಳೂರ್, ನಾನಾಗೌಡ ಬಸರಕೋಡ, ಬಸವರಾಜ ಕೋಳ್ಕೂರ್, ಅಶ್ವಿನಿ ನೆಲೋಗಿ, ನಿಂಗರಾಯ, ರಾಜಭಕ್ಷಿ, ಅಶ್ವಿನಿ ಹಡಪದ, ರಾಜು ಬೊಮ್ಮನಳ್ಳಿ ಮಾತನಾಡಿದರು.

ಅಯ್ಯಣ್ಣ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಶಿಕ್ಷಕ ಸಂಗನಗೌಡ ದೇವರಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಭೂಧಾನಿ ಬಾಲಪ್ಪ ದೇಸಾಯಿ, ಎಸ್‌ಡಿಎಂಸಿ ಅಧ್ಯಕ್ಷ ದೇವಿಂದ್ರಪ್ಪ ದೇಸಾಯಿ, ಪ್ರಭಾಕರ್ ಕಿರಣಸಗಿ, ಸೋಮಶೇಖರ್, ಶಿವರಾಯ ಉಪಸ್ಥಿತರಿದ್ದರು.

ಮೋನಿಕಾ ಸಂಗಡಿಗರು ಪ್ರಾರ್ಥಿಸಿದರು. ಸುನೀಲ ಹಡಪದ ಸ್ವಾಗತಿಸಿದರು. ಶಿವು ಲಿಂಗದಳ್ಳಿ ಸ್ವಾಗತಿಸಿದರು. ಮಹಾದೇವಿ ಅರಳಳ್ಳಿ ಪರಿಚಯಿಸಿದರು. ದೇವಿಂದ್ರಪ್ಪ ಆಲದಾರ್ತಿ ವಂದಿಸಿದರು.

ಕಾರ್ಯಕ್ರಮದ ನಂತರ ಲಕ್ಷ್ಮೀಬಾಯಿ ಕಿರಣಗಿ ಅವರನ್ನು ಶಾಲಾ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಟ್ರ್ಯಾಕ್ಟರ್‌ನಲ್ಲಿ ಮರೆವಣಿಗೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.