
ಸುರಪುರ: ನಗರದಲ್ಲಿ ದನ ಕಾಯೋರು ಇಲ್ಲ. ಹಾಗಂತ ದನಗಳನ್ನು ಮನೆಯಲ್ಲಿಯೇ ಕಟ್ಟಿ ಹಾಕುವುದಿಲ್ಲ. ಬೆಳಿಗ್ಗೆ ತಮ್ಮ ತಮ್ಮ ಮಾಲೀಕರು ಹಾಲು ಕರಿದುಕೊಂಡ ಮೇಲೆ ತಾವೇ ಗುಡ್ಡಗಾಡು ಪ್ರದೇಶಕ್ಕೆ ಹಿಂಡು ಹಿಂಡಾಗಿ ತೆರಳುತ್ತವೆ. ಸಂಜೆವರೆಗೂ ಅಲ್ಲಿ ಹುಲ್ಲನ್ನು ಮೇಯ್ದು ಗೋಧೂಳಿ ಸಮಯಕ್ಕೆ ಸರಿಯಾಗಿ ತಮ್ಮ ತಮ್ಮ ಮನೆಗಳಿಗೆ ಹಾಜರಾಗುತ್ತವೆ.
ಬೆಳಿಗ್ಗೆ ಮನೆಯಿಂದ ಸಾಲು ಸಾಲಾಗಿ ಎಮ್ಮೆಗಳು ಐದಾರು ಕಿಮೀ ದೂರದ ಗುಡ್ಡಗಾಡು ಪ್ರದೇಶಕ್ಕೆ ಹೋಗುತ್ತವೆ. ಅಲ್ಲಿ ಕೆರೆಯೂ ಇದೆ. ನೈಸರ್ಗಿಕವಾಗಿ ಹುಲ್ಲು ಸಮೃದ್ಧವಾಗಿ ಬೆಳೆದಿರುತ್ತದೆ. ಅಲ್ಲಿ ಮೇಯುವ ಎಮ್ಮೆಗಳು, ಮಧ್ಯಾಹ್ನ ಸ್ವಲ್ಪ ಕಾಲ ವಿಶ್ರಾಂತಿ ಪಡೆದು, ನೀರೂ ಕುಡಿಯುತ್ತವೆ. ಸಂಜೆ ಮತ್ತೆ ಸಾಲು ಸಾಲಾಗಿ ಬಂದು ತಮ್ಮ ಮನೆಗಳಿಗೆ ಹೋಗುತ್ತವೆ. ನಂತರ ಮಾಲೀಕರು ಗೂಟಕ್ಕೆ ಕಟ್ಟಿ ಮತ್ತೆ ಹಾಲು ಕರಿದುಕೊಳ್ಳುತ್ತಾರೆ. ಇದು ಕಳೆದ ಹತ್ತಾರು ವರ್ಷಗಳಿಂದ ನಗರದಲ್ಲಿ ಕಂಡು ಬರುವ ದೃಶ್ಯ.
ನಗರದಲ್ಲಿ ಮೊದಲು ಗೌಳಿ ಜನಾಂಗದವರು ಹೈನುಗಾರಿಕೆ ಮಾಡುತ್ತಿದ್ದರು. ಕ್ರಮೇಣ ಅವರು ಹೋಟೆಲ್ ಇತರ ವ್ಯಾಪಾರಗಳಿಗೆ ಇಳಿದ ಮೇಲೆ ಹಾಲು ಮಾರುವವರು ಇಲ್ಲದಂತಾದರು. ಜನ ಪಾಕೆಟ್ ಹಾಲನ್ನು ಖರೀದಿಸುವಂತಾಯಿತು.
ಕಳೆದ 4 ದಶಕಗಳ ಹಿಂದೆ ಉದ್ದಾರ ಓಣಿಯ ಕಾಸೀಮಸಾಬ ನದಾಫ ಎಂಬುವವರು ಹೈನುಗಾರಿಕೆ ಆರಂಭಿಸಿದರು. ಹಾಲು ಮಾರಾಟ ಮಾಡಿ ಲಾಭವನ್ನು ಪಡೆಯತೊಡಗಿದರು. ಕ್ರಮೇಣ ಈಗ 20 ಕ್ಕೂ ಹೆಚ್ಚು ಕುಟುಂಬಗಳು ಹೈನುಗಾರಿಕೆಯನ್ನು ವ್ಯಾಪಾರವಾಗಿಸಿಕೊಂಡಿದ್ದಾರೆ. ಇವರಲ್ಲಿ ಕುರುಬ ಜನಾಂಗದವರೇ ಹೆಚ್ಚು.
ಒಬ್ಬೊಬ್ಬರಲ್ಲಿ 10 ರಿಂದ 12 ಜವಾರಿ ಎಮ್ಮೆಗಳು ಇವೆ. ಒಂದೊಂದು ಎಮ್ಮೆ ಬೆಳಿಗ್ಗೆ ಮತ್ತು ಸಂಜೆ 5 ರಿಂದ 6 ಲೀ. ಹಾಲು ಕರಿಯುತ್ತವೆ. ಒಂದು ಲೀ. ಹಾಲಿಗೆ ದರ ₹ 60 ಇದೆ. ಈ ಕುಟುಂಬಗಳು ಹಾಲು ಮಾರಿ ಬದುಕು ಕಟ್ಟಿಕೊಂಡಿದ್ದಾರೆ.
ಕೆಲ ಗ್ರಾಹಕರು ಎಮ್ಮೆ ಸಾಕಿದ ಮಾಲೀಕರ ಮನೆಗೆ ತೆರಳಿ ಹಾಲು ಹಾಕಿಸಿಕೊಂಡು ಬರುತ್ತಾರೆ. ಹೀಗಾಗಿ ನೀರು ಕಲಿಸುತ್ತಾರೆ ಎಂಬ ಭಯವಿಲ್ಲ. ಗಟ್ಟಿ ಹಾಲು ದೊರಕುತ್ತದೆ. ಮಾಲೀಕರು ಉಳಿದ ಹಾಲನ್ನು ಕೆಲವರ ಮನೆಗೆ, ಹೋಟೆಲ್‌ಗಳಿಗೆ ಹೋಗಿ ಕೊಟ್ಟು ಬರುತ್ತಾರೆ. ತಿಂಗಳಿಗೊಮ್ಮೆ ಹಣ ಸಂಗ್ರಹಿಸುತ್ತಾರೆ.
ಮೊದಲು ಜೋಳ, ಸಜ್ಜೆ ಇತರ ಮೇವು ಉತ್ಪನ್ನ ಬೆಳೆಗಳನ್ನು ಈ ಭಾಗದಲ್ಲಿ ಬೆಳೆಯುತ್ತಿದ್ದರು. ಆಗ ಮೇವಿನ ಕೊರತೆ ಇರಲಿಲ್ಲ. 30 ವರ್ಷಗಳಿಂದ ಭತ್ತ ಬೇಸಾಯ ನಡೆಯುತ್ತಿದ್ದಂತೆ ಮೇವಿನ ಕೊರತೆ ಉಂಟಾಯಿತು. ಹೀಗಾಗಿ ಎಮ್ಮೆಗಳನ್ನು ಹೊರಗೆ ಮೇಯಲು ಬಿಡುವ ಪರಿಪಾಠ ಆರಂಭವಾಯಿತು.
ಈ ಭಾಗದಲ್ಲಿ ‘ದನ ಇದ್ದಂಗೆ ಇದೇಲೋ’ ಎಂಬ ಬಯ್ಗುಳ ಸಾಮಾನ್ಯ. ಆದರೆ ಇಲ್ಲಿನ ದನಗಳು ಒಗ್ಗಟ್ಟು, ನಿಯತ್ತು, ಪ್ರಾಮಾಣಿಕತೆಯಿಂದ ನಡೆದುಕೊಳ್ಳುತ್ತವೆ. ಗಾಂಧಿವೃತ್ತದಲ್ಲಿ ವಾಹನ ಸಂಚಾರಕ್ಕೆ ದಾರಿ ಮಾಡಿಕೊಡುತ್ತವೆ. ಯಾರಿಗೂ ಏನೂ ಹಾನಿ ಮಾಡುವುದಿಲ್ಲ. ಇಲ್ಲಿನ ದನಗಳು ‘ಸುರಪುರದ ದನಗಳ ನೋಡಿ ಕಲಿ’ ಎಂದು ಸಾಬೀತುಪಡಿಸಿವೆ.
ಕಳೆದ 4 ದಶಕಗಳಿಂದ ಹಾಲು ಮಾರಾಟ ಮಾಡುತ್ತಿದ್ದೇವೆ. ನಮ್ಮ ಬದುಕು ಏಳಕ್ಕೂ ಎರದ ಆರಕ್ಕೂ ಇಳಿಯದ ಸ್ಥಿತಿಗೆ ಬಂದಿದೆ. ಹೈನುಗಾರಿಕೆಗೆ ಸರ್ಕಾರ ಉತ್ತೇಜನ ನೀಡಬೇಕುಅಲ್ಲಾವುದ್ದೀನ್ ನದಾಫ ಹಾಲು ಮಾರಾಟಗಾರರು
ರಿಯಾಯತಿ ದರದಲ್ಲಿ ಪಶು ಇಲಾಖೆ ಮೇವು ಪೂರೈಸಬೇಕು. ಎಮ್ಮೆ ಶೆಡ್ ನಿರ್ಮಾಣ ಎಮ್ಮೆ ಖರೀದಿಗೆ ಸರ್ಕಾರ ಸಾಲ ಸೌಲಭ್ಯ ಮತ್ತು ರಿಯಾಯಿತಿ ನೀಡಬೇಕುವೆಂಕಟೇಶ ಮಂಗಿಹಾಳ ಹಾಲು ಮಾರಾಟಗಾರರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.