ADVERTISEMENT

ಸುರಪುರ: ಕಾಯಕಲ್ಪಕ್ಕೆ ಕಾಯುತ್ತಿರುವ ಸ್ಮಾರಕಗಳು...

ಅಶೋಕ ಸಾಲವಾಡಗಿ
Published 9 ಜೂನ್ 2025, 7:14 IST
Last Updated 9 ಜೂನ್ 2025, 7:14 IST
ಸುರಪುರದ ಕುಂಬಾರಪೇಟೆಯ ಅಗಸಿ
ಸುರಪುರದ ಕುಂಬಾರಪೇಟೆಯ ಅಗಸಿ   

ಸುರಪುರ: ಎರಡು ಶತಮಾನಗಳ ಕಾಲ ಅಭೂತಪೂರ್ವ ಆಡಳಿತ ನೀಡಿದ ಇಲ್ಲಿನ ಗೋಸಲ ದೊರೆಗಳು ನಿರ್ಮಿಸಿದ ಸ್ಮಾರಕಗಳು, ತಾಣಗಳು, ಅಭಿವೃದ್ಧಿಯ ಕುರುಹುಗಳು, ಕಟ್ಟಡಗಳಿಗೆ ಲೆಕ್ಕವೇ ಇಲ್ಲ.

ಸ್ಥಳೀಯ ಆಡಳಿತ, ಸಂಬಂಧಿಸಿದ ಇಲಾಖೆ ಮತ್ತು ನಾಗರಿಕರ ನಿರ್ಲಕ್ಷ್ಯತನದಿಂದ ಈ ಎಲ್ಲ ಐತಿಹಾಸಿಕ ಸ್ಮಾರಕಗಳು ಕ್ರಮೇಣ ಮರೆಯಾಗುವತ್ತ ಸಾಗುತ್ತಿವೆ. ಮುಂದಿನ ಪೀಳಿಗೆ ಇಲ್ಲಿನ ಇತಿಹಾಸದ ಸಾಕ್ಷಿಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

17ನೇ ಶತಮಾನದಲ್ಲಿ ಕಟ್ಟಿದ ಕೋಟೆಗಳು ಅನನ್ಯವಾಗಿವೆ. ಕುಂಬಾರಪೇಟೆಯ ಅಗಸಿಯ ನೋಟ ಮುದ ನೀಡುತ್ತದೆ. ಈಗಲೂ ಸುಸಜ್ಜಿತ ಸ್ಥಿತಿಯಲ್ಲಿದ್ದು, ಸಿಡಿಲಿಗೆ ಬೆಚ್ಚದ ಉಕ್ಕಿನ ಕೋಟೆ ಎಂದು ಕರೆಸಿಕೊಳ್ಳುತ್ತದೆ. ವಾಗಣಗೇರಿ ಕೋಟೆ, ಸುರಪುರ ಸುತ್ತಲಿನ ಕೋಟೆ, ನಗರದ ನಾಲ್ಕು ದಿಕ್ಕಿನ ಅಗಸಿಗಳು ಶಿಥಿಲಾವಸ್ಥೆ ತಲುಪಿವೆ.

ADVERTISEMENT

ಈ ಎಲ್ಲ ಕೋಟೆ, ಅಗಸಿಗಳು ಈಗ ಮಲಮೂತ್ರಗಳ ತಾಣವಾಗಿವೆ. ನಗರದ ಸುತ್ತಲಿನ ಕೋಟೆಯ ಕಲ್ಲುಗಳು ಕಳ್ಳರ ಪಾಲಾಗಿವೆ. ಟೇಲರ್ ಮಂಜಿಲ್ ಹತ್ತಿರದ ಕುದುರೆಗುಡ್ಡದ ಸುತ್ತಲೂ ಹೊಲಸು ಮನೆಮಾಡಿದೆ. ವಾಗಣಗೇರಿ ಕೋಟೆಯ ಸುತ್ತಲೂ ಗ್ರಾಮಸ್ಥರು ಶೌಚಕ್ಕೆ ಹೋಗುತ್ತಾರೆ.

ಅರಸರು ಕಟ್ಟಿದ ನೂರಾರು ಬಾವಿಗಳಲ್ಲಿ ಇಂದಿಗೂ ನೀರಿನ ಅದ್ಭುತ ಸೆಲೆ ಇದೆ. ಅವುಗಳಲ್ಲಿ ಹಲವಾರು ಬಾವಿಗಳು ಭೂಗರ್ಭ ಸೇರಿವೆ. ಮುಚ್ಚುತ್ತಿದ್ದ ಬಹರಿ ಬಾವಿಯನ್ನು ಕೆಲ ಪ್ರಜ್ಞಾವಂತ ನಾಗರಿಕರು ರಕ್ಷಿಸಿದ್ದಾರೆ. ದೇವರಬಾವಿ ಇನ್ನೂ ಉಳಿದುಕೊಂಡಿದೆ. ಜನರು ಅದರಲ್ಲಿ ಪೂಜಾ ಸಾಮಗ್ರಿಗಳ ತ್ಯಾಜ್ಯ ಎಸೆಯುತ್ತಿದ್ದಾರೆ.

ಸುರಪುರ ಅರಸರು ಮತ್ತು ಆಂಗ್ಲರ ಇತಿಹಾಸಕ್ಕೆ ಸಾಕ್ಷಿಯಾಗಿರುವ ಫಾಲನ್‌ ಬಂಗ್ಲಾ, ಅದರ ಹತ್ತಿರ ಇರುವ ಸಿಬ್ಬಂದಿಯ ಮನೆಗಳು ಬಿದ್ದಿವೆ. ಫಾಲನ್ ಬಂಗ್ಲಾ ಕುಡುಕರ, ಜೂಜೂಕೋರರ ಅಡ್ಡೆಯಾಗಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಕೆಲ ದೇಗುಲಗಳು ಮುಚ್ಚಿಹೋಗಿವೆ. ಆದರೆ ಈ ಸಂಖ್ಯೆ ಕಡಿಮೆ. ಎಲ್ಲ ದೇವಸ್ಥಾನಗಳಿಗೆ ಅರಸರು ವ್ಯವಸ್ಥೆ ಮಾಡಿದ್ದರಿಂದ ಬಹುತೇಕ ಗುಡಿಗಳು ಇಂದಿಗೂ ಸುಸ್ಥಿತಿಯಲ್ಲಿವೆ. ಕೆಲವು ದೇವಸ್ಥಾನಗಳನ್ನು ಪ್ರಜ್ಞಾವಂತರು ಕಳೆದ ಎರಡು ವರ್ಷಗಳಿಂದ ಜೀರ್ಣೋದ್ಧಾರ ಮಾಡಿದ್ದಾರೆ.

ದೇವರಬಾವಿ

ಟಂಕ ಸಾಲೆ, ಮದ್ದಿನ ಮಹಲು ಇನ್ನೂ ಹತ್ತು ಹಲವಾರು ಐತಿಹಾಸಿಕ ಸ್ಮಾರಕಗಳು ನೋಡಲು ಸಿಗುತ್ತಿಲ್ಲ. ಹಿಂದಿನ ಶತಮಾನದಲ್ಲಿ ಇನ್ನೆಷ್ಟು ಕುರುಹುಗಳು ಇದ್ದವೋ ಎನ್ನುವ ಬಗ್ಗೆ ಮಾಹಿತಿ ಇಲ್ಲ. ವರ್ಷಗಳು ಕಳೆದಂತೆ ಈಗ ಲಭ್ಯವಿರುವ ಸ್ಮಾರಕಗಳಿಗೂ ಕುತ್ತು ಬರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಸಂಶೋಧನೆಗೆ ವಿಪುಲ ಅವಕಾಶ: 

ಸುರಪುರದ ಇತಿಹಾಸದ ಬಗ್ಗೆ ಹೆಕ್ಕಿದಷ್ಟು ಮಾಹಿತಿ ಲಭಿಸುತ್ತದೆ. ಸಂಶೋಧನಾ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿಲ್ಲ. ಈಗಾಗಲೇ ಇಲ್ಲಿನ ವಿವಿಧ ಇತಿಹಾಸದ ಬಗ್ಗೆ ಅನೇಕರು ಪಿಎಚ್‍.ಡಿ ಪಡೆದಿದ್ದಾರಾದರೂ ಪ್ರಚಾರ ಇಲ್ಲ. ಹಿರಿಯ ಇತಿಹಾಸಕಾರರ ಪ್ರಕಾರ ಇಲ್ಲಿನ ಇತಿಹಾಸ ಸುವರ್ಣಾಕ್ಷರಗಳಿಂದ ಬರೆದಿಡುವಂಥದ್ದು. ಸಂಶೋಧಕರಿಗೆ ಪ್ರೋತ್ಸಾಹದ ಅಗತ್ಯವಿದೆ. ಸಂಶೋಧನಾ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಬೇಕು ಎನ್ನುತ್ತಾರೆ ಅವರು.

ವಾಗಣಗೇರಿ ಕೋಟೆ

ರಕ್ಷಣೆಯ ಕೂಗು: ಪ್ರಥಮ ಸಾತಂತ್ರ್ಯ ಸಂಗ್ರಾಮಕ್ಕೆ ಅನನ್ಯ ಕೊಡುಗೆ ನೀಡಿದ, ಕಲೆ, ಸಾಹಿತ್ಯ, ಭಾತೃತ್ವ, ಪ್ರಜೆಗಳ ಯೋಗಕ್ಷೇಮಕ್ಕೆ ಹೆಸರಾದ ಇಲ್ಲಿನ ಇತಿಹಾಸವನ್ನು ರಕ್ಷಿಸಬೇಕೆನ್ನುವ ಕೂಗು ಈಗ ಜೋರಾಗಿದೆ.

ಸ್ಥಳೀಯ ಆಡಳಿತ, ಪ್ರಾಚ್ಯವಸ್ತು ಇಲಾಖೆ ಸ್ಮಾರಕಗಳನ್ನು ರಕ್ಷಿಸಬೇಕು. ರಾಯಚೂರು ವಿಶ್ವವಿದ್ಯಾಲಯದಲ್ಲಿ ಸುರಪುರ ಇತಿಹಾಸ ಅಧ್ಯಯನ ಸಂಸ್ಥೆ ಆರಂಭಿಸಬೇಕು. ಕಲಬುರಗಿ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯವೀರ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಹೆಸರಿಡಬೇಕು ಎಂಬ ಒತ್ತಾಸೆ ಜೋರು ಪಡೆದುಕೊಂಡಿದೆ.

ಕುದುರೆ ಗುಡ್ಡ

ಯಾರು ಏನು ಹೇಳ್ತಾರೆ?

ಇತಿಹಾಸವನ್ನು ಜೀವಂತವಾಗಿಡಲು ಪ್ರತಿ ವರ್ಷ ಹಲವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ನಾಲ್ವಡಿ ರಾಜಾ ವೆಂಕಟಪ್ಪನಾಯಕ ಪ್ರಶಸ್ತಿ ಸ್ಥಾಪಿಸಲಾಗಿದೆ. ಅರಮನೆ ಜೀರ್ಣೋದ್ಧಾರ ಮಾಡಲಾಗಿದೆ
ರಾಜಾ ಕೃಷ್ಣಪ್ಪನಾಯಕ, ಸಂಸ್ಥಾನಿಕ
ಇಲ್ಲಿನ ಇತಿಹಾಸದ ಬಗ್ಗೆ ಹಲವು ಪುಸ್ತಕಗಳು ಬಂದಿವೆ. ಅವುಗಳಲ್ಲಿ ಈಗ ಬಹುತೇಕ ಲಭ್ಯವಿಲ್ಲ. ಗ್ರಂಥಾಲಯ ಇಲಾಖೆ ಈ ಪುಸ್ತಕಗಳನ್ನು ಮರು ಮುದ್ರಣ ಮಾಡಬೇಕು
ಪ್ರಕಾಶಚಂದ ಜೈನ್, ಪ್ರಕಾಶಕ
ಇಲ್ಲಿನ ಅನನ್ಯ ಇತಿಹಾಸದ ಬಗ್ಗೆ ತಿಳಿದ ಹಿರಿಯರು ಕೆಲವೇ ಜನ ಬದುಕಿದ್ದಾರೆ. ಅವರಿಂದ ಮಾಹಿತಿ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬೇಕು
ಶ್ರೀಹರಿರಾವ ಆದವಾನಿ, ಹಿರಿಯ ನಾಗರಿಕ
ಸುರಪುರದ ಗೋಸಲ ವಂಶಸ್ಥರ ಇತಿಹಾಸ ಅಪೂರ್ವವಾದದ್ದು. ಔರಂಗಜೇಬನ ಕೊನೆಯ ಯುದ್ಧ ವಾಗಣಗೇರಿ ಕದನ. ಹೀಗಾಗಿ ದಕ್ಷಿಣ ಭಾರತದ ದೇವಸ್ಥಾನಗಳನ್ನು ಉಳಿಸಿದ ಶ್ರೇಯಸ್ಸು ಇಲ್ಲಿನ ರಾಜರದ್ದು
ಶ್ರೀನಿವಾಸ ಜಾಲವಾದಿ, ಸಾಹಿತಿ
ಮುಸ್ಲಿಮರಿಗೆ ಹಬ್ಬಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅರಸ ತನ್ನ ಪಟ್ಟದ ಕತ್ತಿ ನೀಡಿದ್ದು, ಸೇನೆಯಲ್ಲಿ ಮುಸ್ಲಿಮರಿಗೆ ಉನ್ನತ ಹುದ್ದೆಗಳನ್ನು ನೀಡಿದ್ದು ಇಲ್ಲಿನ ಅರಸರ ಭಾವೈಕ್ಯಕ್ಕೆ ಸಾಕ್ಷಿ
ಜಾವೇದ ಹವಲ್ದಾರ್, ಲೇಖಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.