
ಸುರಪುರದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದವರು ಸೋಮವಾರ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಸುರಪುರ: ಮಹರ್ಷಿ ವಾಲ್ಮೀಕಿ ಗ್ರಂಥಾಲಯ ಮತ್ತು ರಾಜಾ ನಾಲ್ವಡಿ ವೆಂಕಟಪ್ಪನಾಯಕ ಉದ್ಯಾನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಸೋಮವಾರ ಮಹರ್ಷಿ ವಾಲ್ಮೀಕಿ ನಾಯಕ ಸಂಘದವರು ಸುರಪುರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳು, ಶಾಲಾ, ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಬಸ್ ಸಂಚಾರ ಹಿಂಪಡೆಯಲಾಗಿತ್ತು. ಪ್ರತಿಭಟನಾಕಾರರು ಗಾಂಧೀಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ಹಸನಾಪುರ ವೃತ್ತದಲ್ಲಿ ರಾಜ್ಯ ಹೆದ್ದಾರಿ ಸಂಚಾರ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಹೋರಾಟ ಮುಂದುವರೆಸಿದರು.
ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ ಮಾತನಾಡಿ, ‘ತಾಲ್ಲೂಕಿನಲ್ಲಿ ವಾಲ್ಮೀಕಿ ಸಮುದಾಯ ಅತಿ ದೊಡ್ಡದಾಗಿದೆ. ಸಮುದಾಯ ಭವನ, ಗ್ರಂಥಾಲಯ ಹೊಂದಿರುವುದಿಲ್ಲ. ಇವುಗಳ ನಿರ್ಮಾಣಕ್ಕಾಗಿ ಪ್ರಭು ಕಾಲೇಜು ಮೈದಾನದ ಸರ್ವೆ ನಂ.7/1ರಲ್ಲಿ ಖಾರೀಜ್ ಖಾತಾ ವಿಸ್ತೀರ್ಣ 6 ಎಕರೆ 15 ಗುಂಟೆ ಜಮೀನು ಪೈಕಿ 4 ಎಕರೆ ಜಮೀನು ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.
ತಾಲ್ಲೂಕು ಸಮಿತಿ ಅಧ್ಯಕ್ಷ ಭೀಮನಗೌಡ ಲಕ್ಷ್ಮೀ ಮಾತನಾಡಿ, ‘ಸದರಿ ಆಸ್ತಿಯು ಸುರಪುರ ಸಂಸ್ಥಾನಕ್ಕೆ ಸೇರಿದೆ. ಸಂಸ್ಥಾನದ ಅರಸರು ಪ್ರಭು ಕಾಲೇಜಿಗೆ ಆಟದ ಮೈದಾನವಾಗಿ ಬಳಕೆ ಮಾಡಿಕೊಳ್ಳುವುದಕ್ಕೆ ನೀಡಿರುತ್ತಾರೆ. ಈ ಜಮೀನು ಸುಮಾರು 45 ವರ್ಷಗಳಿಂದ ನಮ್ಮ ಕಬ್ಜೆದಲ್ಲಿರುತ್ತದೆ. ಸಂವಿಧಾನದ 342 ಆರ್ಟಿಕಲ್ ಪ್ರಕಾರ ಪರಿಶಿಷ್ಟ ಪಂಗಡದವರು ಕಬ್ಜೆ ಮಾಡಿರುವ ಜಮೀನನ್ನು ಸಕ್ರಮ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ತಹಸೀಲ್ದಾರ್ ಎಚ್.ಎ.ಸರಕಾವಸ್, ಡಿವೈಎಸ್‍ಪಿ ಜಾವೇದ್ ಇನಾಮದಾರ್, ಪಿಐ ಉಮೇಶ್ ನಾಯಕ ಸೇರಿ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ಗೊಲ್ಲಪಲ್ಲಿಯ ವರದಾನೇಶ್ವರ ಸ್ವಾಮೀಜಿ, ಭೀಮುನಾಯಕ ಮಲ್ಲಿಬಾವಿ, ನಾಗರಾಜನಾಯಕ ಪ್ಯಾಪ್ಲಿ, ಹನುಮಗೌಡ, ಯಲ್ಲಪ್ಪ ಕಲ್ಲೊಡಿ, ಮಲ್ಲನಗೌಡ ಗೋಡಿಹಾಳ, ಸಂಜೀವ ನಾಯಕ, ಪರಮಣ್ಣ ವಡಕೇರಿ, ರಂಗನಾಥ ಲಕ್ಷ್ಮೀಪುರ, ಪರಶುರಾಮನಾಯಕ ದೇವಾಪುರ, ದೇವುನಾಯಕ ಚಾಲಿಬೆಂಚಿ, ಮೌನೇಶ ನಾಯಕ ಪತ್ತೆಪೂರ, ವಿಜಯಗೌಡ ಬೇವಿನಾಳ, ವೆಂಕಟೇಶನಾಯಕ ಪರಸನಹಳ್ಳಿ, ವಿಜಯಕುಮಾರ ಚಿಟ್ಟಿ, ಮುಖಂಡರಾದ ರಮೇಶ ದೊರೆ ಆಲ್ದಾಳ, ವೆಂಕಟೇಶ ಬೇಟೆಗಾರ, ವಿನಯನಾಯಕ ಕರಡಕಲ್ ಸೇರಿ ಅನೇಕರಿದ್ದರು.
ಟೈರ್‌ಗೆ ಬೆಂಕಿ ಹಚ್ಚಿ ಹೋರಾಟ
4 ಎಕರೆ ಭೂಮಿ ಮಂಜೂರಿಗೆ ಬೇಡಿಕೆ
ಬಸ್ ಸಂಚಾರ ಸ್ಥಗಿತ, ಜನಸಂಚಾರ ವಿರಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.