ADVERTISEMENT

ಸುರಪುರ | 'ತಾ.ಪಂ ಕಚೇರಿಗೆ ಮುಳ್ಳು ಹಚ್ಚಿ ಪ್ರತಿಭಟನೆ'

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 7:26 IST
Last Updated 16 ಡಿಸೆಂಬರ್ 2025, 7:26 IST
ಸುರಪುರದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರು ಸೋಮವಾರ ತಾಪಂ ಕಚೇರಿಗೆ ಮುಳ್ಳು ಹಚ್ಚಿ ಪ್ರತಿಭಟನೆ ನಡೆಸಿದರು
ಸುರಪುರದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರು ಸೋಮವಾರ ತಾಪಂ ಕಚೇರಿಗೆ ಮುಳ್ಳು ಹಚ್ಚಿ ಪ್ರತಿಭಟನೆ ನಡೆಸಿದರು   

ಸುರಪುರ: ತಾಲ್ಲೂಕಿನ ಏವೂರು ಮತ್ತು ತಿಂಥಣಿ ಗ್ರಾಮ ಪಂಚಾಯಿತಿ ಪಿಡಿಒ ಅವರ ಮೇಲೆ ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಮುಖಂಡರು ಸೋಮವಾರ ತಾಲ್ಲೂಕು ಪಂಚಾಯಿತಿ ಕಚೇರಿಗೆ ಮುಳ್ಳು ಹಚ್ಚಿ ಪ್ರತಿಭಟನೆ ನಡೆಸಿದರು.

ಸಮಿತಿಯ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ‘ತಿಂಥಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಪುರ ಕ್ರಾಸ್‍ನಲ್ಲಿರುವ ಸರ್ವೆ ನಂ 56 ರಲ್ಲಿ ಅನಧಿಕೃತವಾಗಿ ಹಾಕಿರುವ ಹೊಟೇಲ್ ಮತ್ತು ಅಂಗಡಿಗಳನ್ನು ತೆರುವುಗೊಳಿಸುವಲ್ಲಿ ಪಿಡಿಒ ಮೀನಮೇಷ ಎಣಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಈ ಕುರಿತು ಕಳೆದ ಒಂದು ವರ್ಷದಿಂದ ಮನವಿ ಸಲ್ಲಿಸುತ್ತಾ ಬರಲಾಗಿದೆ. ಆದರೆ ಪಿಡಿಒ ಅವರು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಹೊಟೇಲ್ ಮಾಲೀಕರಿಂದ ಲಂಚ ಪಡೆದು ಅನಧಿಕೃತವಾಗಿ ಹೊಟೇಲ ಹಾಕಿಕೊಳ್ಳಲು ಕುಮ್ಮಕ್ಕು ನೀಡಿದ್ದಾರೆ’ ಎಂದು ದೂರಿದರು.

ADVERTISEMENT

‘ಏವೂರ ಗ್ರಾಮದಲ್ಲಿ ಕಳೆದ 30-40 ವರ್ಷಗಳಿಂದ ಹಿಟ್ಟಿನ ಗಿರಣಿ ನಡೆಸಲಾಗುತ್ತಿದೆ. ಆ ಜಾಗವನ್ನು ಪಿಡಿಒ ಅವರು ಲಂಚ ಪಡದು ಬೇರೊಬ್ಬರ ಹೆಸರಿಗೆ ವರ್ಗ ಮಾಡಿ ಕೊಟಿದ್ದಾರೆ. ಸುಮಾರು ವರ್ಷಗಳಿಂದ ಹಿಟ್ಟಿನ ಗಿರಣಿ ಹಾಕಿಕೊಂಡಿದ್ದವರಿಗೆ ಅನ್ಯಾಯ ಮಾಡಲಾಗಿದೆ’ ಎಂದು ದೂರಿದರು.

‘ಏವೂರಿನಲ್ಲಿ ಹಿಟ್ಟಿನ ಗಿರಣಿ ನಿವೇಶನದ ಕಬ್ಜಾದಾರನ ಹೆಸರಿಗೆ ನಿವೇಶನ ಒದಗಿಸಿಕೊಡಬೇಕು. ಶಾಂತಪುರ ಕ್ರಾಸ್‍ನಲ್ಲಿ ಹೊಟೆಲ್ ತೆರವುಗೊಳಿಸಬೇಕು’ ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ತಾಲ್ಲೂಕು ಪಂಚಾಯಿತಿ ಅಧಿಕಾರಿ ಅವರು ಹಿಂಬರಹ ನೀಡಿದ ನಂತರ ಧರಣಿ ಕೈಬಿಡಲಾಯಿತು.

ತಾಲ್ಲೂಕು ಅಧ್ಯಕ್ಷ ಬಸವರಾಜ ದೊಡ್ಮನಿ, ಮುಖಂಡರಾದ ರಾಮು ಶೆಳ್ಳಗಿ, ಹಣಮಂತ ಕುಂಬಾರಪೇಟ, ಜಟ್ಟೆಪ್ಪ ನಾಗರಾಳ, ಮೂರ್ತಿ ಬೊಮ್ಮನಳ್ಳಿ, ಮಲ್ಲಿಕಾರ್ಜುನ ತಳ್ಳಳ್ಳಿ, ಭೀಮರಾಯ, ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.