ADVERTISEMENT

ಬಜೆಟ್: ಹತ್ತಿ, ಅಕ್ಕಿ ಗಿರಣಿಗಳ, ಸರ್ಕಾರಿ ಕಚೇರಿಗಳ ಕನಸು

ಸುರಪುರ ವಿಧಾನಸಭಾ ಕ್ಷೇತ್ರ: ಈಡೇರುವುದೇ ಬೇಡಿಕೆಗಳ ಸರಮಾಲೆ!

ಅಶೋಕ ಸಾಲವಾಡಗಿ
Published 28 ಫೆಬ್ರುವರಿ 2026, 9:13 IST
Last Updated 28 ಫೆಬ್ರುವರಿ 2026, 9:13 IST
ಸುರಪುರ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಪಶು ವೈದ್ಯಕೀಯ ಕಚೇರಿ ಮತ್ತು ಪಶು ಆಸ್ಪತ್ರೆ
ಸುರಪುರ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಪಶು ವೈದ್ಯಕೀಯ ಕಚೇರಿ ಮತ್ತು ಪಶು ಆಸ್ಪತ್ರೆ   

ಸುರಪುರ: ಸುರಪುರ ವಿಧಾನಸಭಾ ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲು ಕ್ಷೇತ್ರವು ಹುಣಸಗಿ ತಾಲ್ಲೂಕು ಒಳಗೊಂಡಿದ್ದು, ಕ್ಷೇತ್ರದ ಜನರು ಸಿಎಂ ಸಿದ್ದರಾಮಯ್ಯ ಅವರ ಬಜೆಟ್‌ ಮೇಲೆ ಹಲವು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ.

ಸುರಪುರ ತಾಲ್ಲೂಕಿನ ರುಕ್ಮಾಪುರ, ಸುಗೂರ ಪಂಚಾಯಿತಿ ವ್ಯಾಪ್ತಿಯ ಹಲವು ಹಳ್ಳಿಗಳು ಕಾಲುವೆ ಕೊನೆ ಜಾಲದಲ್ಲಿ ಬರುತ್ತಿದ್ದು ನೀರಾವರಿಯಿಂದ ವಂಚಿತವಾಗಿವೆ. ಈ ಭಾಗದ ರೈತರು ಸಮರ್ಪಕ ನೀರಾವರಿಗೆ ಮಾಡುತ್ತಿರುವ ಹೋರಾಟಗಳು ನಿಷ್ಫಲವಾಗಿವೆ.

ಕ್ಷೇತ್ರದಲ್ಲಿ ಭತ್ತ ವ್ಯಾಪಕವಾಗಿ ಬೆಳೆಯಲಾಗುತ್ತಿದ್ದು ಅಕ್ಕಿ ಗಿರಣಿಗಳ ಕೊರತೆ ಇದೆ. ದಲ್ಲಾಳಿಗಳು ಭತ್ತ ಖರೀದಿ ಮಾಡುತ್ತಿದ್ದು ರೈತರಿಗೆ ಹಣ ಪಾವತಿಸದೆ ಓಡಿ ಹೋದ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ, ಸ್ಥಳೀಯವಾಗಿ ರೈಸ್‌ ಮಿಲ್ ಹಾಗೂ ಹತ್ತಿ ಗಿರಣಿಗಳ ಸ್ಥಾಪನೆಗೆ ಕೂಗು ಕೇಳಿಬರುತ್ತಿದೆ.

ADVERTISEMENT

ಗ್ರಾಮೀಣ ಭಾಗದ ಶೇ 60ರಷ್ಟು ಕೃಷಿ ಕಾರ್ಮಿಕರು ಹೊಟ್ಟೆ ಪಾಡಿಗೆ ಗುಳೆ ಹೋಗುವುದು ಸಾಮಾನ್ಯವಾಗಿದೆ. ಇದು ಅವರ ಮತ್ತು ಮಕ್ಕಳ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕಾರಣ ಈ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಬೇಕಿದೆ.
ವೃತ್ತಪರ ಕೋರ್ಸ್‍ಗಳನ್ನು ಆರಂಭಿಸುವುದು, ಶೇ 50ರಷ್ಟು ಕೊರತೆ ಇರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರ ನೇಮಕಾತಿ, ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ನೇಮಕ, ಗ್ರಾಮೀಣ ಸಾರಿಗೆ ವ್ಯವಸ್ಥೆ, ಕ್ಷೇತ್ರ ವ್ಯಾಪ್ತಿಯ ಎಲ್ಲ ನಗರ ಮತ್ತು ಪಟ್ಟಣಗಳಲ್ಲಿ ರಸ್ತೆ ವಿಸ್ತಾರ ಮಾಡುವ ಬೇಡಿಕೆಗಳೂ ಇವೆ.

ಐತಿಹಾಸಿಕ ಮತ್ತು ಪ್ರಾಗೈತಿಹಾಸಿಕ ತಾಣಗಳನ್ನು ಹೊಂದಿದ್ದು, ಎಲ್ಲವುಗಳನ್ನು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ ಸೌಕರ್ಯ ಕಲ್ಪಿಸಬೇಕಿದೆ. ರಾಜ್ಯದ ಅತಿ ದೊಡ್ಡ ಪಕ್ಷಧಾಮಗಳಲ್ಲಿ ಒಂದಾ ಬೋನಾಳ ಪಕ್ಷಿಧಾಮದವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಬೇಕಿದೆ.

ದೇವಪುರದಲ್ಲಿ ನೂರಾರು ಆರ್ಚರಿ ಕ್ರೀಡಾಪಟುಗಳು ಸಾಧನೆ ಮಾಡುತ್ತಿದ್ದಾರೆ. ದೇವರಗೋನಾಲದಲ್ಲಿ ಕಬಡ್ಡಿ, ಕೊಕ್ಕೊ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದಾರೆ. ಸುರಪುರದಲ್ಲಿ ಕ್ರೀಡಾ ವಸತಿ ಶಾಲೆ ತೆರೆಯಬೇಕೆನ್ನುವ ಬೇಡಿಕೆಯೂ ಇದೆ. ಕೆಲವು ಇಲಾಖೆಗಳ ನೂತನ ಕಟ್ಟಡಗಳ ಕಾಮಗಾರಿ ನಡೆಯುತ್ತಿದೆ. ಬಿಇಒ ಕಚೇರಿ, ಪಶು ಇಲಾಖೆ ಕಚೇರಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ ಇಲಾಖೆಗಳಿಗೆ ಹೊಸ ಕಟ್ಟಡಗಳ ಅಗತ್ಯವಿದೆ.

ಚಂದಲಾಪುರ ಸೀಮಾಂತರದ ಕಾಲುವೆಯ ಕೊನೆ ಭಾಗದ ದುಸ್ಥಿತಿ
ರಾಜಾ ವೇಣುಗೋಪಾಲನಾಯಕ
ಮಲ್ಲಿಕಾರ್ಜುನ ಸತ್ಯಂಪೇಟೆ
ಗೋಪಾಲ ಚಿನ್ನಾಕಾರ
2008 ರಲ್ಲಿ ನಗರದಲ್ಲಿ ₹ 21 ಕೋಟಿ ವೆಚ್ಚದಲ್ಲಿ ಆರಂಭವಾದ ಯುಜಿಡಿ ಕಾಮಗಾರಿ ಅಪೂರ್ಣಗೊಂಡಿದೆ. 4180 ಕಿ.ಮೀ ಪೈಪ್‍ಲೈನ್ ಕಾಮಗಾರಿ ಮುಗಿದಿದೆ. ಮಲ ಶುದ್ಧೀಕರಣ ಘಟಕ ಆರಂಭವಾಗಬೇಕು ‌
ಗೋಪಾಲ ಚಿನ್ನಾಕಾರ ಸಾಮಾಜಿಕ ಕಾರ್ಯಕರ್ತ

‘₹ 500 ಕೋಟಿ ಅನುದಾನಕ್ಕೆ ಮನವಿ’

‘ಸುರಪುರ ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಗುರಿ. ನನ್ನ ತಂದೆ ದಿ.ರಾಜಾ ವೆಂಕಟಪ್ಪನಾಯಕ ಅವರ ಅಭಿವೃದ್ಧಿಯ ಕನಸು ಸಾಕಾರ ಮಾಡಲು ಯತ್ನಿಸುತ್ತಿದ್ದೇನೆ’ ಎಂದು ಶಾಸಕ ರಾಜಾ ವೇಣುಗೋಪಾಲನಾಯಕ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನನೆಗುದಿಗೆ ಬಿದ್ದಿರುವ ಸುರಪುರ ನಗರದ ಯುಜಿಡಿ ಎರಡನೇ ಹಂತದ ಕಾಮಗಾರಿಗೆ ₹ 240 ಕೋಟಿ ಪ್ರಸ್ತುತ ಬಜೆಟ್‍ನಲ್ಲಿ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದೇನೆ. ಹಸನಾಪುರ ಉಪವಿತರಣಾ ಕಾಲುವೆ ಉನ್ನತೀಕರಿಸಿ ಕಾಲುವೆ ಕೊನೆ ಭಾಗಕ್ಕೆ ನೀರು ಒದಗಿಸಲು ₹ 150 ಕೋಟಿ ಕೇಳಿದ್ದೇನೆ’ ಎಂದರು. ‘ಕಕ್ಕೇರಾ ಪಟ್ಟಣಕ್ಕೆ ಪದವಿ ಕಾಲೇಜು ನಾರಾಯಣಪುರದಲ್ಲಿ ಪ್ರವಾಸಿ ಮಂದಿರ ಮೆಟ್ರಿಕ್ ನಂತರದ ಎಸ್‍ಟಿ ಹಾಸ್ಟೆಲ್‍ಗಳ ಮಂಜೂರಿ ಇತರ ಹಲವಾರು ಅಭಿವೃದ್ಧಿ ಕೆಲಸಗಳ ಅನುದಾನಕ್ಕೆ ಮನವಿ ಸಲ್ಲಿಸಿದ್ದೇನೆ’ ಎಂದು ಹೇಳಿದರು. 

‘ರೈತನ ಮದುವೆಗೆ ₹ 10 ಲಕ್ಷ ಮೀಸಲಿಡಿ’

ರೈತನಿಗೆ ಆರ್ಥಿಕ ಭದ್ರತೆ ಇಲ್ಲದಿರುವುದರಿಂದ ಆತನನ್ನು ಮದುವೆ ಅಗಲು ವಧುಗಳು ಮುಂದೆ ಬರುತ್ತಿಲ್ಲ. ಇದರಿಂದ ರೈತನ ಜೀವನ ಏರು ಪೇರಾಗುತ್ತಿದ್ದು ರೈತರ ಸಂತತಿ ಬೆಳೆಯುತ್ತಿಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಹೇಳಿದರು. ‘ಕಾರಣ ರೈತರ ಮದುವೆಯಾಗುವ ವಧುವಿನ ಹೆಸರಿನಲ್ಲಿ ಸರ್ಕಾರ ₹ 10 ಲಕ್ಷ ಠೇವಣಿ ಇಡಬೇಕು. ಈ ಯೋಜನೆಯನ್ನು ಈ ಬಜೆಟ್‍ನಲ್ಲಿ ಘೋಷಿಸಬೇಕು. ಸರ್ಕಾರಿ ಭತ್ತ ಮತ್ತು ಹತ್ತಿ ಮಿಲ್‍ಗಳ ಸ್ಥಾಪನೆ. ಮೆಣಸಿನಕಾಯಿ ಸಂಗ್ರಹಿಸಲು ಶೀತಲೀಕರಣ ಘಟಕ ಆರಂಭಿಸಬೇಕು’ ಎಂದರು. ‘ಬೂದಿಹಾಳ ಪೀರಾಪುರ ಏತ ನೀರಾವರಿ ಶೀಘ್ರದಲ್ಲಿ ಮುಗಿಸಬೇಕು. ಆಲಮಟ್ಟಿ ಜಲಾಶಯ ಮಟ್ಟ ಎತ್ತರಿಸಿ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು.

ಎಲ್ಲ ಸರ್ಕಾರಿ ಕಚೇರಿಗಳು

ಹುಣಸಗಿಯಲ್ಲಿ ಕಾರ್ಯನಿರ್ವಹಿಸಲಿ ಹುಣಸಗಿ: ಹುಣಸಗಿ ಪಟ್ಟಣದಲ್ಲಿ ಕಳೆದ 2004ನೇ ಸಾಲಿನಲ್ಲಿಯೇ ವಿಶೇಷ ತಾಲ್ಲೂಕು ಎಂದು ಸರ್ಕಾರ ಘೋಷಣೆ ಮಾಡಿ ವಿಶೇಷ ತಹಶಿಲ್ದಾರ್‌ ಕಚೇರಿಯನ್ನು ಆರಂಭಿಸಲಾಯಿತು. ಆ ಬಳಿಕ 2018ರಲ್ಲಿ ತಾಲ್ಲೂಕು ಕೇಂದ್ರವೆಂದು ಘೊಷಣೆ ಮಾಡಿ ತಾಲ್ಲೂಕಿನ ಜನರಿಗೆ ಎಲ್ಲ ಸರ್ಕಾರಿ ಸೇವೆಯನ್ನು ಹುಣಸಗಿಯಲ್ಲಿ ಸಿಗುವಂತೆ ಮಾಡಲು ಮುಂದಾಗಿತು. ಇದರಿಂದಾಗಿ ತಾಲ್ಲೂಕಿನ ಜನತೆ ಆ ಸಂದರ್ಭದಲ್ಲಿ ಹೆಚ್ಚು ಸಂಭ್ರಮಿಸಿದ್ದರು. ಆದರೆ ಆ ಸಂಭ್ರಮದ ಕ್ಷಣ ಇನ್ನೂ ಈಡೇರದೆ ಇರುವುದು ಸ್ಥಳೀಯರಿಗೆ ತಣ್ಣೀರು ಎರಚಿದಂತಾಗಿದೆ. ಪಟ್ಟಣದಲ್ಲಿ ಎಲ್ಲ ಇಲಾಖೆಯ ಕಚೇರಿಗಳು ಒಂದೇ ಸ್ಥಳದಲ್ಲಿ ಲಭ್ಯವಾಗುವಂತಾಗಲು ಪ್ರಜಾಸೌಧ ಇನ್ನೂ ಆರಂಭವಾಗಿಲ್ಲ. ಸುಮಾರು ಎರಡು ದಶಗಳಿಂದಲೂ ಪೊಲೀಸ್‌ ಠಾಣೆ ಹಾಗೂ ವೃತ್ತ ಕಚೇರಿಗೆ ಸ್ಥಳ ನಿಗದಿಯಾಗಿಲ್ಲ. ಅಗ್ನಿ ಶಾಮಕ ಠಾಣೆಗೆ ಸ್ಥಳ ಗುರುತಿಸಲಾಗಿದ್ದು ಕಾಮಗಾರಿ ಆರಂಭಿಸಬೇಕಿದೆ.

‘ಮಳೆಗಾಲ ಬಂದರೆ ಅಧಿಕಾರಿಗಳಿ ಕಚೇರಿ ಕಡತಗಳ ರಕ್ಷಣೆಯದ್ದೆ ಚಿಂತೆ ಎನ್ನುವಂತಾಗಿದೆ. ಇನ್ನೂ ಸರ್ವೆ ಕೆಲಸಕಾರ್ಯಗಳಿಗೆ ಬಿಇಒ ಕಚೇರಿಗಳಾಗಿ ರೈತರು ವಿದ್ಯಾರ್ಥಿಗಳು ಹಾಗೂ ಪಾಲಕರು ಸುರಪುರಕ್ಕೆ ಅಲೆಯುವುದು ತಪ್ಪುತ್ತಿಲ್ಲ’ ಎನ್ನುತ್ತಾರೆ ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಕಡದರಾಳ. ‘ಹುಣಸಗಿ ತಾಲ್ಲೂಕು ಕೇಂದ್ರದಲ್ಲಿ ವರ್ಷದಲ್ಲಿ ಒಂದು ಬಾರಿಯೂ ಎಲ್ಲ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆದಿಲ್ಲ. ಇದರಿಂದಾಗಿ ಅಧಿಕಾರಿಗಳಲ್ಲಿ ಹೊಸ ತಾಲ್ಲೂಕು ಜನರ ಸಮಸ್ಯೆಗಳ ಬಗ್ಗೆ ಕಳಕಳಿ ಮೂಡಲು ಸಾಧ್ಯ’ ಎನ್ನುತ್ತಾರೆ ಕರವೇ ಅಧ್ಯಕ್ಷ ರಮೇಶ ಬಿರಾದಾರ.