ಸುರಪುರ: ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾದ ತಾಲ್ಲೂಕಿನ ಹೆಗ್ಗನದೊಡ್ಡಿ ಮತ್ತು ಗೋಡ್ರಿಹಾಳ ಮಧ್ಯದಲ್ಲಿರುವ ಮರುಳಸಿದ್ದೇಶ್ವರ ಮಠ ನ್ಯಾಯ, ನೀತಿ, ಸರ್ವಧರ್ಮ ಸಮನ್ವಯತೆಯಿಂದ ಧರ್ಮರಮಠ ಎಂದೇ ಖ್ಯಾತಿ ಹೊಂದಿದೆ.
ರೇವಣಸಿದ್ದೇಶ್ವರರ ಅವತಾರವಾಗಿರುವ ಮರುಳಸಿದ್ದೇಶ್ವರರ ಕರ್ತೃ ಗದ್ದುಗೆ ಇಲ್ಲಿದೆ. ಪ್ರತಿನಿತ್ಯ ಪೂಜೆ, ನೈವೇದ್ಯ, ಅನ್ನದಾಸೋಹ ನಡೆಯುತ್ತದೆ. ಸುತ್ತಲಿನ ಗ್ರಾಮಗಳಲ್ಲದೆ ನೆರೆ ರಾಜ್ಯದ ಜನರೂ ಈ ಮಠಕ್ಕೆ ಭಕ್ತರು.
1770ರಲ್ಲಿ ಸ್ಥಾಪನೆಯಾದ ಮಠಕ್ಕೆ ಚಂದ್ರಾಬಾಯಿ ತಾಯಿ ಮೊದಲ ಪೀಠಾಧಿಕಾರಿಯಾಗಿದ್ದರು. ನಂತರ ಗಾಂಧಾರಮ್ಮ ತಾಯಿ, ಸರಸ್ವತಿ ತಾಯಿ (1942 ರಿಂದ 1996) ಪೀಠಾಧಿಕಾರಿಗಳಾಗಿದ್ದರು. ಮಧ್ಯದಲ್ಲಿ ಕೆಲವು ಪೀಠಾಧಿಕಾರಿಗಳ ಹೆಸರು ದಾಖಲೆಯಲ್ಲಿ ಇಲ್ಲ. ಸಧ್ಯ ನಿಜಲಿಂಗಮ್ಮ ತಾಯಿ ದೇವರು ಪೀಠದಲ್ಲಿದ್ದಾರೆ.
ಎಲ್ಲ ಪೀಠಾಧಿಕಾರಿಗಳು ಮರುಳಸಿದೇಶ್ವರರ ಪೂಜೆ, ಅನುಷ್ಠಾನ, ಜಪ, ತಪಗಳಿಂದ ಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಮಕ್ಕಳಿಲ್ಲದವರು ಇಲ್ಲಿ ಹರಕೆ ಕಟ್ಟಿ ಸಂತಾನ ಭಾಗ್ಯ ಪಡೆದುಕೊಂಡ ಅನೇಕ ಉದಾಹರಣೆಗಳಿವೆ.
ಅಂದಿನ ಕಾಲದಲ್ಲಿ ರೋಗ ಗುಣಪಡಿಸಿದ ಪವಾಡಗಳು ನಡೆದಿವೆ. ಕಲಹಗಳಿಗೆ ಸಮರ್ಪಕ ನ್ಯಾಯ ಕಲ್ಪಿಸಿ ಧರ್ಮರಮಠ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸರ್ವಧರ್ಮ ಸಮನ್ವಯತೆ, ಪರಧರ್ಮ ಸಹಿಷ್ಣುತೆಗೆ ಮಠ ಹೆಸರುವಾಸಿ. ಎಲ್ಲ ವರ್ಗದ ಜನರು ಮಠಕ್ಕೆ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಪೀಠಾಧ್ಯಕ್ಷರು ಎಲ್ಲ ಭಕ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಸರ್ಕಾರಿ ಶಾಲೆಗಳಿಗೆ ಭೂದಾನ ನೀಡಿ ಶಿಕ್ಷಣಕ್ಕೂ ಮಠ ವಿಶೇಷ ಕೊಡುಗೆ ನೀಡಿದೆ.
ಶಿವರಾತ್ರಿ ಮತ್ತು ಶ್ರಾವಣಮಾಸದಲ್ಲಿ ಮಠದ ಜಾತ್ರೆ ನಡೆಯುತ್ತದೆ. ಅದರಲ್ಲೂ ಮರುಳಸಿದ್ದೇಶ್ವರರು ಲಿಂಗದ ರೂಪದಲ್ಲಿ ಇರುವುದರಿಂದ ಮತ್ತು ಶಿವನ ಸಂಭೂತರಾಗಿರುವುದರಿಂದ ಶಿವರಾತ್ರಿ ಉತ್ಸವಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ.
ವಿವಿಧ ಕಾರ್ಯಕ್ರಮಗಳು: ಫೆ.20 ರಂದು ಮರುಳಸಿದ್ದೇಶ್ವರ ದೇವರ ಕಾರ್ಯಕ್ರಮ, 21 ರಂದು ಬೆಳಿಗ್ಗೆ 6 ಗಂಟೆಯಿಂದ ಸದರು, 22 ರಂದು ಮಧ್ಯಾಹ್ನ 1 ಗಂಟೆಗೆ ಭಾರ ಎತ್ತುವ ಸ್ಪರ್ಧೆ, 23ರಂದು ಬೆಳಿಗ್ಗೆ 6 ಗಂಟೆಗೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, 24 ರಂದು ನಿಜಲಿಂಗಮ್ಮ ತಾಯಿ ಅವರಿಂದ ಅಶೀರ್ವಚನ ನಡೆಯಲಿದೆ ಎಂದು ವ್ಯವಸ್ಥಾಪಕ ಸಂತೋಷ ದೇಸಾಯಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.