ADVERTISEMENT

ಯಾದಗಿರಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ಹತ್ತಾರು ಅಡ್ಡಿ

ತಾಂತ್ರಿಕ ಸಮಸ್ಯೆ ನಡುವೆ ಶಿಕ್ಷಕರ ಗಣತಿಕಾರ್ಯಕ್ಕೆ ಅನ್ಯ ಇಲಾಖೆಗಳಿಂದ ಸಿಗದ ಸಹಕಾರ

ಮಲ್ಲಿಕಾರ್ಜುನ ನಾಲವಾರ
Published 26 ಸೆಪ್ಟೆಂಬರ್ 2025, 7:13 IST
Last Updated 26 ಸೆಪ್ಟೆಂಬರ್ 2025, 7:13 IST
ಸಮೀಕ್ಷೆಯಲ್ಲಿ ಕಂಡುಬಂದ ತಾಂತ್ರಿಕ ಅಡ್ಡಿ
ಸಮೀಕ್ಷೆಯಲ್ಲಿ ಕಂಡುಬಂದ ತಾಂತ್ರಿಕ ಅಡ್ಡಿ   

ಯಾದಗಿರಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಡಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುತ್ತಿರುವ ಶಿಕ್ಷಕರನ್ನು ಸರ್ವರ್‌, ತಾಂತ್ರಿಕ ಸಮಸ್ಯೆ ಗುರುವಾರವೂ ಕಾಡಿತು. ಇದರಿಂದಾಗಿ ಶಿಕ್ಷಕರು ದಿನವಿಡೀ ಹೈರಾಣಾಗಿ ಹೋದರು.

ಜಿಲ್ಲೆಯಲ್ಲಿ 2.40 ಲಕ್ಷ ಕುಟುಂಬಗಳನ್ನು ಸಮೀಕ್ಷೆಗೆ ಗುರುತಿಸಿದ್ದು, 2,191 ಬ್ಲಾಕ್‌ ಗಣತಿದಾರರನ್ನು ಸಮೀಕ್ಷೆಗಾಗಿ ನೇಮಿಸಲಾಗಿದೆ.‌ ಸಮೀಕ್ಷೆ ಆರಂಭದ ಮೊದಲ ಮೂರು ದಿನಗಳಲ್ಲಿ 2,610 ಮನೆಗಳ ಸಮೀಕ್ಷೆಯಷ್ಟೇ ಪೂರ್ಣಗೊಂಡಿದೆ.

ಸಮೀಕ್ಷೆಗೆ ಸಂಬಂಧಿಸಿದ ‘ಪೃಥ್ವಿ’ ಆ್ಯಪ್‌ನಲ್ಲಿ ಗುರುವಾರ 3.4 ಹೆಸರಿನ ನೂತನ ಸಾಫ್ಟ್‌ವೇರ್‌ ಅಪ್‌ಡೆಟ್‌ ಮಾಡಲಾಗಿತ್ತು. ಹೊಸ ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಂಡಿದ್ದರೂ ಪೃಥ್ವಿ ಆ್ಯಪ್‌ನಲ್ಲಿ ಸಮೀಕ್ಷೆ ಮಾಡಬೇಕಾದ ಮನೆಗಳ ಮ್ಯಾಪ್ ಸರಿಯಾಗಿ ತೋರಿಸಲಿಲ್ಲ. ಸಮೀಕ್ಷೆಗೆ ನೆರವಾಗಬೇಕಿದ್ದ ಗ್ರಾಮ ಪಂಚಾಯಿತಿ, ಸಖಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಂದಲೂ ಮನೆಗಳನ್ನು ಹುಡುಕುವ ಸಹಾಯವೂ ಸಿಗಲಿಲ್ಲ’ ಎಂದು ಗಣತಿದಾರ ಶಿಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ವಿಶಿಷ್ಟ ಮನೆ ಸಂಖ್ಯೆ’ (ಯುಎಚ್‌ಐಡಿ) ತೋರಿಸದೇ ಇರುವುದು; ಸಮೀಕ್ಷೆಯ ಕಾಲಂ ಓಪನ್‌ ಆಗದೇ ಇರುವುದು; ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಭರ್ತಿ ಮಾಡಿ ಸಬ್‌ಮಿಟ್‌ ಮಾಡುವ ವೇಳೆಗೆ ಸಾಫ್ಟ್‌ವೇರ್‌ ‌ಸ್ಥಗಿತವಾಗುವುದು; ಎಲ್ಲ ಮಾಹಿತಿ ಸಲ್ಲಿಕೆಯಾದ ಬಳಿಕ ದೃಢೀಕರಣ ಸರ್ಟಿಫಿಕೇಟ್ ಅಪ್‌ಲೋಡ್ ಆಗದಿರುವುದು. ಹೀಗೆ ಹಲವು ತಾಂತ್ರಿಕ ಸಮಸ್ಯೆಗಳು ದಿನವಿಡಿ ಕಾಣಿಸಿಕೊಂಡವು’ ಎಂದು ಮತ್ತೊಬ್ಬ ಶಿಕ್ಷಕರು ಮಾಹಿತಿ ಹಂಚಿಕೊಂಡರು.

‘ಒಬ್ಬೊಬ್ಬ ಶಿಕ್ಷಕರಿಗೆ ನಿತ್ಯ 10 ಮನೆಗಳ ಟಾರ್ಗೆಟ್ ಕೊಟ್ಟಿದ್ದಾರೆ. ಆದರೆ, ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ತಾಂತ್ರಿಕ ಸಮಸ್ಯೆಯಿಂದ ಸಮೀಕ್ಷೆಯಲ್ಲಿ ಅಡ್ಡಿಯಾಗುತ್ತಿದೆ ಎಂದರೂ ಅಧಿಕಾರಿಗಳು ನಮ್ಮ ಮಾತು ಕೇಳಿಸಿಕೊಳ್ಳುತ್ತಿಲ್ಲ. ರಾಜ್ಯ ಸರ್ಕಾರ ಸರಿಯಾಗಿ ಆ್ಯಪ್ ಅನ್ನು ಅಭಿವೃದ್ಧಿಪಡಿಸದೆ ಶಿಕ್ಷಕರನ್ನು ಸಮೀಕ್ಷೆಗೆ ನಿಯೋಜಿಸಿ ಈಗ ಗೋಳಾಡುವಂತೆ ಮಾಡುತ್ತಿದೆ’ ಎಂದು ಯಾದಗಿರಿ ನಗರದ ಮೇಲ್ವಿಚಾರಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಮೊದಲೇ ಶಿಕ್ಷಕರ ಕೊರತೆ ಇದೆ. ಅನ್ಯ ಇಲಾಖೆಗಳ ಮೊರೆ ಹೋಗದೆ ನಿವೃತ್ತಿಯ ಹಂಚಿನಲ್ಲಿರುವ, ಅನಾರೋಗ್ಯದಿಂದ ಬಳಲುತ್ತಿರುವ ಶಿಕ್ಷಕರನ್ನೂ ನಿಯೋಜನೆ ಮಾಡಿಕೊಂಡಿದ್ದಾರೆ. ನಾಯಿ ಕಡಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರನ್ನು ಬಿಡುತ್ತಿಲ್ಲ. ಶಿಕ್ಷಕರು ಬಿಟ್ಟರೆ ಬೇರೆ ಇಲಾಖೆಯವರು ಕಾಣಿಸುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ನಿತ್ಯ ಸಭೆ ನಡೆಸಿ ತಾಂತ್ರಿಕ ಸಮಸ್ಯೆ ಇತ್ಯರ್ಥ’

‘ನಿತ್ಯ ಬೆಳಿಗ್ಗೆ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮನ್ವಯತೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗುತ್ತಿದೆ. ಪರಿಣಿತರನ್ನು ನಿಯೋಜನೆ ಮಾಡಿ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಗುತ್ತಿದೆ. ಅನಾರೋಗ್ಯ ಸಂಬಂಧಿತ ನಾಯಿ ಕಡಿತಕ್ಕೆ ಒಳಗಾದವರನ್ನು ಸಮೀಕ್ಷಾ ಕಾರ್ಯದಿಂದ ವಿನಾಯಿತಿ ಕೊಡಲಾಗಿದೆ’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ’ಪ್ರಜಾವಾಣಿ’ಗೆ ತಿಳಿಸಿದರು. 

‘ನಾಲ್ಕು ದಿನಗಳಲ್ಲಿ 3864 ಮನೆಗಳ ಸಮೀಕ್ಷೆ’

‘ತಾಂತ್ರಿಕ ಸಮಸ್ಯೆಯ ನಡುವೆಯೂ ಶಿಕ್ಷಕರು ನಾಲ್ಕು ದಿನಗಳಲ್ಲಿ 3864 ಮನೆಗಳ ಸಮೀಕ್ಷೆಯನ್ನು ಪೂರ್ಣಗೊಳಸಿದ್ದಾರೆ’ ಎಂದು ಹಿಂದುಳಿದ ವರ್ಗಗಳ ಇಲಾಖೆಯ ಉಪ ನಿರ್ದೇಶಕ ಸದಾಶಿವ ನಾರಾಯಣಕರ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಸಮೀಕ್ಷೆಯು ಒಂದು ಇಲಾಖೆಗೆ ಸಂಬಂಧಿಸಿದ್ದಲ್ಲ. ಗ್ರಾಮ ಪಂಚಾಯಿತಿಯವರು ಸಮೀಕ್ಷೆಯ ಬಗ್ಗೆ ಪ್ರಚಾರ ಮಾಡಬೇಕು. ಸಖಿ ಕೇಂದ್ರದ ಸಿಬ್ಬಂದಿ ಶಿಕ್ಷಕರಿಗೆ ಸಮೀಕ್ಷೆಯಲ್ಲಿ ಸಹಕಾರ ಕೊಡಬೇಕು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆಗಳನ್ನು ತೋರಿಸಬೇಕು. ಶಿಕ್ಷಕರಿಗೆ ನೆರವಾಗುವಂತೆ ಪಿಡಿಒ ಇಒಗಳಿಗೆ ಸೂಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.