ADVERTISEMENT

ತಳವಾರ ಸಮುದಾಯದವರಿಗೆ ಸಂವಿಧಾನದ ಪ್ರಕಾರ ಪ್ರಮಾಣಪತ್ರ: ಮಲ್ಲಿಕಾರ್ಜುನ ಗೋಸಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 8:38 IST
Last Updated 15 ಆಗಸ್ಟ್ 2025, 8:38 IST
ಮಲ್ಲಿಕಾರ್ಜುನ ಗೋಸಿ
ಮಲ್ಲಿಕಾರ್ಜುನ ಗೋಸಿ   

ಯಾದಗಿರಿ: ‘ತಳವಾರ ಸಮುದಾಯವರು ಸಂವಿಧಾನದ ಪ್ರಕಾರವೇ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ವಾಲ್ಮೀಕಿ ಸಮುದಾಯದವರು ಮಾಡುವ ಆರೋಪದಲ್ಲಿ ಸತ್ಯಾಂಶವಿಲ್ಲ’ ಎಂದು ಕೋಲಿ ಕಬ್ಬಲಿಗ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೋಸಿ ಹೇಳಿದರು.

‘ಮೀಸಲಾತಿ ಪಡೆಯುವುದು ನಮ್ಮ ಹಕ್ಕಾಗಿದೆ. ಕೋಲಿ ಕಬ್ಬಲಿಗ ಸಮುದಾಯದ ಉಪ ಜಾತಿಗಳಾದ ತಳವಾರ ಮತ್ತು ಪರಿವಾರದವರು ಕಾನೂನು ಬದ್ಧವಾಗಿ ಎಸ್ಟಿ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಂವಿಧಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಕಾರ ಜಾತಿ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದೆ. ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಕಬ್ಬಲಿಗ ಸಮಾಜದ ಗುಂಪಿನಿಂದ ಬಿಟ್ಟು ಹೋದ ಪದಗಳನ್ನು ಕಾನೂನು ಬದ್ಧವಾಗಿ ಸೇರಿಸಿಕೊಳ್ಳಲಾಗಿದೆ. ವಾಲ್ಮೀಕಿ ಸಮಾಜದ ಬಂಧುಗಳು ಈ ಬಗ್ಗೆ ಹೊರಡಿಸಿರುವ ಗೆಜೆಟ್ ನೋಡಬೇಕು’ ಎಂದರು.

ADVERTISEMENT

‘ಆಧಾರ ಇಲ್ಲದೆ ಒಂದು ದೊಡ್ಡ ಸಹೋದರ ಸಮಾಜದ ಬಗ್ಗೆ ಅನುಭವ ಇಲ್ಲದ ಬಿಸಿ ರಕ್ತದ ಯುವಕರು ಹಿಂದುಳಿದ ವರ್ಗಗಳಲ್ಲಿ ಕಂದಕ ಸೃಷ್ಟಿಸುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ನಾವೂ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ. ನಮ್ಮ ಧರ್ಮ ಗುರುವಿನ ಬಗ್ಗೆ ಮಾತನಾಡಿದರೆ ಸುಮ್ಮನೆ ಇರುವುದಿಲ್ಲ’ ಎಂದು ಹೇಳಿದರು.

‘ನಾವೆಲ್ಲರೂ ಸೌಲಭ್ಯ ವಂಚಿತರು. ಕಾನೂನು ಮುಖಾಂತರ ನ್ಯಾಯ ದೊರಕಿಸಿಕೊಳ್ಳಬೇಕು. ಕಬ್ಬಲಿಗ ಸಮಾಜಕ್ಕೆ ಸೌಲಭ್ಯಗಳು ಸಿಕ್ಕರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಮನೋಭಾವವನ್ನು ಬಿಡಬೇಕು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ‌ಸಣ್ಣ ಹಣಮಂತ ಬಳಿಚಕ್ರ, ಮಲ್ಲು ಪೂಜಾರಿ, ಭೀಮರೆಡ್ಡಿ ಯರಗೋಳ, ನಿಂಗಪ್ಪ ಜಾಲಗಾರ, ರಾಜಪ್ಪ ಸೈದಾಪುರ, ಮುದುಕಪ್ಪ ಚಾಮನಾಳ, ಮಹೇಶ್ ಬಾಡ್ಯಾಳ, ಶಿವರಾಜ ಬಳಿಚಕ್ರ, ಮಹೇಶಕುಮಾರ, ಮಹೇಶ್ ಪಾಮಳ್ಳಿ, ಮರೆಪ್ಪ ಸುಣಗಾರ, ಅಯ್ಯಣ್ಣ ನಾಯ್ಕೋಡಿ ಹಾಲಗೇರಿ, ಮಲ್ಲಿಕಾರ್ಜುನ ಹೆಡಗಿಮದ್ರಾ, ಭೀಮು ಹೀರೇನೂರು, ಶರಣು ದುಗುನೂರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.