
ಯಾದಗಿರಿ: ‘ನಲಿಕಲಿಯಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿದ್ದು, ಹೊಸ ವರ್ಷದೊಳಗೆ ನಲಿಕಲಿ ರದ್ದು ಮಾಡಿಸುತ್ತೇವೆ’ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಅಧ್ಯಕ್ಷ ಚಂದ್ರಶೇಖರ್ ನುಗ್ಲಿ ಹೇಳಿದರು.
ಇಲ್ಲಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಜಿಲ್ಲಾ ಘಟಕ ಆಯೋಜಿಸಿದ್ದ ಕಲಬುರಗಿ ವಿಭಾಗೀಯ ಮಟ್ಟದ ಜಿಲ್ಲೆಗಳ ಜಿಲ್ಲಾಧ್ಯಕ್ಷರ, ಕಾರ್ಯದರ್ಶಿಗಳ ಹಾಗೂ ನಿರ್ದೇಶಕರ ಸಂಘಟನಾತ್ಮಕ ಸಭೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಲಿಕಲಿ ಸ್ಥಗಿತ ಮಾಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಯಾಗಿದೆ. ಹೊಸ ವರ್ಷದೊಳಗೆ ರಾಜ್ಯದ 25 ಸಾವಿರ ಶಾಲೆಗಳಲ್ಲಿ ನಲಿಕಲಿ ರದ್ದು ಮಾಡುವ ಆದೇಶ ಹೊರಡಿಸಲಾಗುವುದು. ಆ ನಂತರದ ವರ್ಷದಲ್ಲಿ ಉಳಿದ 17 ಸಾವಿರ ಶಾಲೆಗಳಲ್ಲಿಯೂ ಸ್ಥಗಿತವಾಗಲಿದೆ’ ಎಂದರು.
‘ಆನ್‌ಲೈನ್ ಕೆಲಸದಿಂದ ಶಿಕ್ಷಕರ ಮೇಲಿನ ಒತ್ತಡ ಹೆಚ್ಚಾಗುತ್ತಿದೆ. ಮರುಸಿಂಚನ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ರದ್ದು ಮಾಡುವ ಕೆಲಸವೂ ನಡೆಯುತ್ತಿದೆ. ಮೊಟ್ಟೆಯ ದರವನ್ನು ₹ 5.50ರಿಂದ ₹ 8ಕ್ಕೆ ಹೆಚ್ಚಿಸುವ ಆದೇಶ ಮಾಡಲಾಗುವುದು. ಅದರ ಜೊತೆಗೆ 250 ಮಕ್ಕಳಿರುವ ಶಾಲೆಗೆ ಡಾಟಾ ಎಂಟ್ರಿ ಆಪರೇಟರ್ ಕೊಡಿಸಲಾಗುವುದು’ ಎಂದು ಹೇಳಿದರು.
‘ಗಣತಿ, ಸಮೀಕ್ಷೆ, ಚುನಾವಣೆಯ ನೆಪದಲ್ಲಿ ವರ್ಗಾವಣೆಯಾದ ಶಿಕ್ಷಕರನ್ನು ಬಿಡುಗಡೆ ಮಾಡಬೇಕು. ಬಿಎಲ್‌ಒ ಕಾರ್ಯದಿಂದಲೂ ಶಿಕ್ಷಕರನ್ನು ಬಿಡುಗಡೆಗೊಳಿಸಬೇಕು. ಇಲ್ಲದೆ ಇದ್ದರೆ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ. ಈ ಬಗ್ಗೆ ಖಾರವಾಗಿ ಪತ್ರ ಬರೆದರೂ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ, ಮುಖ್ಯಮಂತ್ರಿಗಳ ಜೊತೆಗೆ ಈ ಕುರಿತು ಚರ್ಚೆ ಮಾಡಲಾಗುವುದು’ ಎಂದರು.
ಡಿಡಿಪಿಐ ಚನ್ನಬಸಪ್ಪ ಮುಧೋಳ ಮಾತನಾಡಿ, ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಿಲ್ಲೆಯು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯನ್ನು ಕಾಣದೆ ಇದ್ದಾಗ ಮೇಲಾಧಿಕಾರಿಗಳು ಸರಿಯಾಗಿ ಸಮೀಕ್ಷೆ ಮಾಡದ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದ್ದರು. ಶಿಕ್ಷಕರಿಗೆ ಎದುರಾಗಿದ್ದ ಸಮಸ್ಯೆಯನ್ನು ಅವರಿಗೆ ಮನವರಿಕೆ ಮಾಡಿ, ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಂಘದ ಪದಾಧಿಕಾರಿಗಳಾದ ಪದ್ಮಲತಾ, ವಿ.ಬಿ. ಕಾಮನಹಳ್ಳಿ, ಯಾದಗಿರಿ ಜಿಲ್ಲಾಧ್ಯಕ್ಷ ರಾಘವೇಂದ್ರ ಅಳ್ಳಳ್ಳಿ, ಬಳ್ಳಾರಿ ಜಿಲ್ಲಾ ಅಧ್ಯಕ್ಷ ಲಿಂಗಪ್ಪ, ಬೀದರ್ ಜಿಲ್ಲಾ ಅಧ್ಯಕ್ಷ ರವಿಂದ್ರ ರೆಡ್ಡಿ, ರಾಯಚೂರು ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್ ರೆಡ್ಡಿ, ಕೊಪ್ಪಳ ಜಿಲ್ಲಾ ಅಧ್ಯಕ್ಷ ಶರಣಬಸನಗೌಡ ಪಾಟೀಲ, ವಿಜಯನಗರ ಜಿಲ್ಲಾ ಅಧ್ಯಕ್ಷ ಶಿವಾನಂದ್ ಬಿ.ಬಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರ್ಥಿಕ ಸಬಲೀಕರಣ ಮಾಡಿ ಎಲ್ಲ ಬಗೆಯ ಸವಲತ್ತುಗಳನ್ನು ನೀಡಿ ಪೋಷಕರು ತಮ್ಮ ಜವಾಬ್ದಾರಿ ತೋರಿದಾಗ ಫಲಿತಾಂಶ ಸುಧಾರಣೆ ಕಾಣುತ್ತದೆಚೇತನ್ ಸಂಘದ ರಾಜ್ಯ ಕಾರ್ಯದರ್ಶಿ
ವಿಭಾಗ ಮಟ್ಟದಲ್ಲಿ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳನ್ನು ಪರಿಹರಿಸಬೇಕುಮಲ್ಲಯ್ಯ ಗುತ್ತೇದಾರ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.