
ಯಾದಗಿರಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಿಗದಿಪಡಿಸಿದ್ದ ಮನೆಗಳ ಸಮೀಕ್ಷೆ ಗುರಿಯನ್ನು ಪೂರ್ಣಗೊಳಿಸಿದ್ದರೂ ಮತ್ತೊಂದು ಪಟ್ಟಿ ಕೊಟ್ಟು ಸಮೀಕ್ಷೆ ಮಾಡುವಂತೆ ಅಧಿಕಾರಿಗಳು ತಾಕೀತು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿ ಸಮೀಕ್ಷೆದಾರರು ಮಂಗಳವಾರ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಕೆಲಹೊತ್ತು ಜಮಾಯಿಸಿದ್ದರು.
ಕುಟುಂಬಗಳ ಸಮೀಕ್ಷೆಯಲ್ಲಿ ಶೇ102ರಷ್ಟು ಪ್ರಗತಿ ಸಾಧಿಸಿದ್ದರೂ ಕುಟುಂಬ ಸದಸ್ಯರ ಜನಸಂಖ್ಯೆಯ ಮಾಹಿತಿ ಸಂಗ್ರಹದಲ್ಲಿ ಯಾದಗಿರಿ ಜಿಲ್ಲೆ ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿದೆ. ಅಕ್ಟೋಬರ್ 13ರ ಸಂಜೆ 6.30ಕ್ಕೆ ಕೊನೆಗೊಂಡಂತೆ ಸಮೀಕ್ಷೆಯಲ್ಲಿ ಜಿಲ್ಲೆಯ 15.65 ಲಕ್ಷ ಜನರ ಪೈಕಿ 10.9 ಲಕ್ಷ ಜನರ ಮಾಹಿತಿ ಕಲೆಹಾಕಲಾಗಿದ್ದು, 4.74 ಲಕ್ಷ ಜನರು ಮಾಹಿತಿ ಕಲೆ ಹಾಕಬೇಕಿದೆ. ಹೀಗಾಗಿ, ಸಮೀಕ್ಷೆಯಲ್ಲಿ ಸೇರ್ಪಡೆಯಾಗದ ಕುಟುಂಬ ಸದಸ್ಯರ ಮಾಹಿತಿ ಕ್ರೋಢೀಕರಣ ಮಾಡುವಂತೆ ಜಿಲ್ಲಾಡಳಿತ ಬಿಟ್ಟು ಹೋದವರ ಪಟ್ಟಿ ಕೊಟ್ಟು ಸಮೀಕ್ಷೆಗೆ ಇಳಿಸಿದೆ.
‘ಗೊತ್ತುಪಡಿಸಿದ ಗುರಿ ಮುಟ್ಟದೆ ಇದ್ದಾಗ ಶಿಕ್ಷಕರು ಯಾವುದೇ ಪ್ರದೇಶ, ಗ್ರಾಮಗಳಿಗೆ ತೆರಳಿ ಕೊಟ್ಟಿರುವ ಟಾರ್ಗೆಟ್ ಮುಟ್ಟುವಂತೆ ಹೇಳಿತ್ತು. ಹೀಗಾಗಿ, ನನಗೆ ಕೊಟ್ಟಿದ್ದ 135 ಕುಟುಂಬಗಳ ಸಮೀಕ್ಷೆ ಮಾಡಿದ್ದೇವೆ. ಸರಿಯಾದ ವಿಳಾಸ ಇಲ್ಲದ ಮತ್ತೊಂದು ಪಟ್ಟಿಕೊಟ್ಟು ಮತ್ತೊಮ್ಮೆ ಸಮೀಕ್ಷೆ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ’ ಎಂದು ಶಿಕ್ಷಕರೊಬ್ಬರು ಹೇಳಿದರು.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಡಿಪಿಐ ಚನ್ನಬಸಪ್ಪ ಮುಧೋಳ, ‘ರಾಜ್ಯದ ಎಲ್ಲ ಕಡೆಗಳಲ್ಲಿ ಕೆಲವು ಕುಟುಂಬ ಸದಸ್ಯರು ಹೆಸರು ಸಮೀಕ್ಷೆಯಲ್ಲಿ ಸೇರ್ಪಡೆಯಾಗಿಲ್ಲ. ಬಿಟ್ಟು ಹೋದವರನ್ನು ಸಮೀಕ್ಷೆ ವ್ಯಾಪ್ತಿಗೆ ತರಲು ಸ್ಕೀಮ್ ವರ್ಕರ್, ಬಿಲ್ ಕಲೆಕ್ಟರ್, ಪಡಿತರ ಅಂಗಡಿ ಸಿಬ್ಬಂದಿ ನೆರವು ಪಡೆದು ಹೆಸರು ಸೇರ್ಪಡೆ ಮಾಡುವಂತೆ ಶಿಕ್ಷಕರಿಗೆ ಪಟ್ಟಿ ಕೊಟ್ಟು ಕಳುಹಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.