ADVERTISEMENT

ಯಾದಗಿರಿ | ಮತ್ತೆ ಸಹಜ ಸ್ಥಿತಿಗೆ ಮರಳಿದ ಜಿಲ್ಲೆ

ಕಂಟೇನ್ಮೆಂಟ್ ಝೋನ್ ಹೊರತು ಪಡಿಸಿ ಎಲ್ಲ ಕಡೆ ಲಾಕ್‌ಡೌನ್‌ ಸಡಿಲಿಕೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 17:50 IST
Last Updated 1 ಜೂನ್ 2020, 17:50 IST
ಯಾದಗಿರಿಯ ಚಕ್ರಕಟ್ಟ ಬಳಿ ಸೋಮವಾರ ಬಟ್ಟೆ ಖರೀದಿಯಲ್ಲಿ ತೊಡಗಿಸಿಕೊಂಡಿದ್ದ ಗ್ರಾಹಕರು
ಯಾದಗಿರಿಯ ಚಕ್ರಕಟ್ಟ ಬಳಿ ಸೋಮವಾರ ಬಟ್ಟೆ ಖರೀದಿಯಲ್ಲಿ ತೊಡಗಿಸಿಕೊಂಡಿದ್ದ ಗ್ರಾಹಕರು   

ಯಾದಗಿರಿ: ಸರ್ಕಾರ ಐದನೇಯ ಹಂತದ ಲಾಕ್‌ಡೌನ್‌ ಸಡಿಲಿಕೆ ಮಾಡಿದ್ದು, ಜಿಲ್ಲೆ ಸಹಜ ಸ್ಥಿತಿಗೆ ಮರಳಿದೆ. ಎಲ್ಲ ರೀತಿಯ ವ್ಯಾಪಾರ ವಹಿವಾಟಿಗೆ ಅನುಮತಿ ನೀಡಲಾಗಿದೆ. ಈ ಹಿಂದೆ ಕೆಲ ವ್ಯಾಪಾರ, ಅಂಗಡಿಗಳಿಗೆ ನಿರ್ಬಂಧ ಹೇರಲಾಗಿತ್ತು.

ಸೋಮವಾರ ಮಾರುಕಟ್ಟೆ ಪ್ರದೇಶ, ಗಂಜ್‌, ಚಕ್ರಕಟ್ಟ, ಗಾಂಧಿ ವೃತ್ತ, ಚಿತ್ತಾಪುರ ವೃತ್ತ, ಸ್ಟೇಷನ್‌ ರಸ್ತೆಯಲ್ಲಿ ಜನ ದಟ್ಟಣೆ ಕಂಡು ಬಂತು. ಬಟ್ಟೆ, ದವಸ ಧಾನ್ಯ ಖರೀದಿಸೇರಿದಂತೆ ವಿವಿಧ ವಹಿವಾಟು ನಡೆದಿದೆ. ಹಸಿರು ವಲಯವಾಗಿದ್ದ ಜಿಲ್ಲೆಯಲ್ಲಿ ಲಾಕ್‌ಡೌನ್‌ ಹಂತ ಹಂತವಾಗಿ ಸಡಿಲಿಕೆ ಮಾಡಲಾಗಿತ್ತು.

ಸಾರ್ವಜನಿಕರು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸನ್ನು ಕಡ್ಡಾಯವಾಗಿ ಧರಿಸಬೇಕು.ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾರಿಗೆಯಲ್ಲಿ ಅಂತರ ಕಾಯ್ದುಕೊಳ್ಳಬೇಕು.ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಗುಟ್ಕಾ, ತಂಬಾಕು ಇತ್ಯಾದಿಗಳ ಬಳಕೆಗೆ ಅವಕಾಶವಿಲ್ಲ.ಧಾರಕ ವಲಯ (ಕಂಟೇನ್ಮೆಂಟ್ ಝೋನ್)ಗಳ ಹೊರಗಿನ ಪ್ರದೇಶಗಳನ್ನು ಹಂತ ಹಂತವಾಗಿ ಪುನಃ ತೆರೆಯಲಾಗುವುದುಎಂದು ಜಿಲ್ಲಾಡಳಿತ ತಿಳಿಸಿದೆ.

ADVERTISEMENT

ಲಾಕ್‍ಡೌನ್ ಕಂಟೇನ್ಮೆಂಟ್ ಝೋನ್‍ಗಳಿಗೆ ಸೀಮಿತ: ಲಾಕ್ ಡೌನ್ ಜೂನ್ 30ರವರೆಗೆ ಕಂಟೇನ್ಮೆಂಟ್ ಝೋನ್‌ಗಳಲ್ಲಿ ಜಾರಿಯಲ್ಲಿರುತ್ತದೆ. ಅಲ್ಲಿ ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅನುಮತಿಸಲಾಗುವುದು. ವೈದ್ಯಕೀಯ ತುರ್ತುಸ್ಥಿತಿಗಳನ್ನು ಹೊರತುಪಡಿಸಿ ಅಗತ್ಯ ಸರಕು ಮತ್ತು ಸೇವೆಗಳ ಪೂರೈಕೆಯನ್ನು ಕಾಪಾಡಿಕೊಳ್ಳಲು ಈ ವಲಯಗಳಲ್ಲಿ ಅಥವಾ ಹೊರಗೆ ಜನರ ಚಲನೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ಪರಿಧಿಯ ನಿಯಂತ್ರಣವಿರುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ನ್ಯಾಯಾಲಯ ಕಲಾಪ ಆರಂಭ

ಶಹಾಪುರ: ನ್ಯಾಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ನ್ಯಾಯಾಧೀಶರು, ಸಿಬ್ಬಂದಿ ಹಾಗೂ ಕಲಾಪಕ್ಕೆ ಆಗಮಿಸಿದ ವಕೀಲರು ಸೇರಿದಂತೆ ನ್ಯಾಯಾಲಯದ ಆವರಣದಲ್ಲಿ 109 ಜನರಿಗೆ ಥರ್ಮಲ್ ಸ್ಕ್ರೀನಿಂಗ್‌ ಮೂಲಕ ಜ್ವರ ತಪಾಸಣೆ ಮಾಡಿಸಲಾಯಿತು.

ಮಾರ್ಚ್‌ 24ರಿಂದ ಲಾಕ್ ಡೌನ್‌ನಿಂದ ನ್ಯಾಯಾಲಯದ ಕಲಾಪ ಸ್ಥಗಿತಗೊಂಡಿತ್ತು. ಸೋಮವಾರ ಷರತ್ತುಬದ್ದ ಮಾರ್ಗಸೂಚಿ ನಿಯಮದಂತೆ ನ್ಯಾಯಾಲಯದ ಕಲಾಪ ನಡೆಯಿತು. ವಾದ ಮಂಡನೆಗಾಗಿ ಇದ್ದ 20 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಯಿತು ಎಂದು ವಕೀಲರ ಸಂಘದ ಕಾರ್ಯದರ್ಶಿ ಸಂದೀಪ ದೇಸಾಯಿ ತಿಳಿಸಿದರು.

ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಭಾಮಿನಿ ಅವರು ವಕೀಲರಿಗೆ ಮಾಹಿತಿ ನೀಡಿ, ಯಾವುದೇ ಕಾರಣಕ್ಕೂ ನ್ಯಾಯಾಲಯದ ಆವರಣದಲ್ಲಿ ಕಕ್ಷಿದಾರರನ್ನು ಕರೆದು ಕೊಂಡು ಬರಬಾರದು. ವಕೀಲರು ತಮ್ಮ ಕೆಲಸ ಮುಗಿದ ತಕ್ಷಣ ವಾಪಸ್‌ ಹೋಗಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಆಗಾಗ ಸ್ಯಾನಿಟೈಸರ್ ಬಳಸಬೇಕು. ಸ್ವಚ್ಛತೆ ಹಾಗೂ ಸುರಕ್ಷತೆ ಎಲ್ಲರ ಹೊಣೆಯಾಗಿದೆ ಎಂದರು.

ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಕಾಡಪ್ಪ ಹುಕ್ಕೇರಿ ಅವರು, ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತೆ ಹಾಗೂ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ನ್ಯಾಯಾಲಯದ ಸಿಬ್ಬಂದಿ ಕಡ್ಡಾಯ ವಾಗಿ ಮಾಸ್ಕ್ ಧರಿಸಬೇಕು
ಎಂದರು.

ಹಿರಿಯ ವಕೀಲರಾದ ಭಾಸ್ಕರರಾವ್ ಮುಡಬೂಳ, ಶ್ರೀನಿವಾಸರಾವ್ ಕುಲಕರ್ಣಿ, ಎಸ್.ಶೇಖರ. ಚಂದ್ರಶೇಖರ ದೇಸಾಯಿ, ಆರ್.ಎಂ.ಹೊನ್ನಾರಡ್ಡಿ, ಸಯ್ಯದ್ ಇಬ್ರಾಹಿಂಸಾಬ್ ಜಮದಾರ್, ವಿಶ್ವನಾಥರಡ್ಡಿ ಸಾಹು, ಸಾಲೋಮನ್ ಆಲ್ಫ್ರೇಡ್, ಶಾಂತಗೌಡ ಪಾಟೀಲ್, ಯೂಸೂಫ್ ಸಿದ್ದಕಿ, ರಮೇಶ ಸೇಡಂಕರ್, ಮಲ್ಕಪ್ಪ ಪಾಟೀಲ್, ಎಚ್.ಆರ್.ಪಾಟೀಲ್, ಎಸ್.ಗೋಪಾಲ, ಮಲ್ಲಪ್ಪ ಪೂಜಾರಿ, ಲಕ್ಷ್ಮಿನಾರಾಯಣ, ಶ್ರೀಮಂತ ಕಂಚಿ, ರಾಕೇಶ ಸಾಹು, ಆಯಿಷ್ ಪರ್ವೀನ್ ಜಮಖಂಡಿ, ಜಯಲಕ್ಷ್ಮಿ ಬಸರಡ್ಡಿ, ಸತ್ಯಮ್ಮ ಹೊಸ್ಮನಿ, ವಾಸುದೇವ ಕಟ್ಟಿಮನಿ,ದೇವರಾಜ ಚೆಟ್ಟಿ, ಸಂತೋಷ ಸತ್ಯಂಪೇಟೆ, ಗುರುರಾಜ ದೇಶಪಾಂಡೆ, ಎಂ.ಆರ್.ಬುಕ್ಕಲ್, ಸಿದ್ದು ಪಸ್ಪೂಲ್ ಇದ್ದರು.

***

ಜಿಲ್ಲೆಯಲ್ಲಿ ಬೆಳಿಗ್ಗೆ 5ರಿಂದ ಸಂಜೆ 5ರವರೆಗೆ ಎಲ್ಲಾ ಅಂಗಡಿ ತೆರೆಯಬಹುದು. ರಾತ್ರಿ 9ರಿಂದ ಬೆಳಿಗ್ಗೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ.
-ಎಂ.ಕೂರ್ಮಾರಾವ್‌, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.