ADVERTISEMENT

‘ಆದರ್ಶ ಗ್ರಾಮಕ್ಕೆ ಜನರ ಸಹಕಾರ ಅಗತ್ಯ’

ಕೊಳ್ಳೂರ(ಎಂ) ಗ್ರಾಮದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 4:33 IST
Last Updated 2 ಮಾರ್ಚ್ 2021, 4:33 IST
ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದಲ್ಲಿ ಸೋಮವಾರ ಸಂಸದರ ಆದರ್ಶ ಗ್ರಾಮ ಕಾಮಗಾರಿಗಳಿಗೆ ಸಂಸದ ರಾಜಾ ಅಮರೇಶ್ವರ ನಾಯಕ ಚಾಲನೆ ನೀಡಿದರು. ಶಾಸಕ ವೆಂಕಟರಡ್ಡಿ ಮುದ್ನಾಳ ಇದ್ದರು
ಶಹಾಪುರ ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದಲ್ಲಿ ಸೋಮವಾರ ಸಂಸದರ ಆದರ್ಶ ಗ್ರಾಮ ಕಾಮಗಾರಿಗಳಿಗೆ ಸಂಸದ ರಾಜಾ ಅಮರೇಶ್ವರ ನಾಯಕ ಚಾಲನೆ ನೀಡಿದರು. ಶಾಸಕ ವೆಂಕಟರಡ್ಡಿ ಮುದ್ನಾಳ ಇದ್ದರು   

ಕೊಳ್ಳೂರ(ಎಂ) (ಶಹಾಪುರ): ‘ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪರಿಕಲ್ಪನೆಯಂತೆ ಸಂಸದರ ಆದರ್ಶ ಗ್ರಾಮದಲ್ಲಿ ಅಗತ್ಯವಾದ ಮೂಲಸೌಲಭ್ಯಗಳನ್ನು ಆದ್ಯತೆ ಮೇಲೆ ತೆಗೆದುಕೊಳ್ಳಲಾಗುವುದು. ವಿವಿಧ ಇಲಾಖೆಯಿಂದ ಬರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಆದರ್ಶ ಗ್ರಾಮವನ್ನಾಗಿ ರೂಪಿಸಲಾಗುವುದು. ಇದಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ’ ಎಂದು ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದರು.

ತಾಲ್ಲೂಕಿನ ಕೊಳ್ಳೂರ(ಎಂ) ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂಸದರ ಆದರ್ಶ ಗ್ರಾಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಗ್ರಾಮದಲ್ಲಿ ಒಳಚರಂಡಿ ವ್ಯವಸ್ಥೆ, ಮೂಲಸೌಲಭ್ಯಗಳ ಪೂರೈಕೆಗೆ ತೀವ್ರ ನಿಗಾ ಇಡಲಾಗುವುದು. ಗ್ರಾಮದಲ್ಲಿ ಸ್ವಚ್ಛತೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ಯಾದಗಿರಿಯಿಂದ ಕೊಳ್ಳೂರ ಮಾರ್ಗವಾಗಿ ಬೆಂಗಳೂರಿಗೆ ಬಸ್ ಸೌಲಭ್ಯ ಒದಗಿಸಲಾಗುವುದು. ಗ್ರಾಮದ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆಯ ವ್ಯವಸ್ಥೆ ಮಾಡಲಾಗುವುದು’ ಎಂಬ ಭರವಸೆ ನೀಡಿದರು.

ADVERTISEMENT

ಶಾಸಕ ವೆಂಕಟರಡ್ಡಿ ಮುದ್ನಾಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಯಡಿಯಾಪುರ, ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ ಕವಲಿ, ರಾಜಾ ವೇಣುಮಾಧವ ನಾಯಕ ಇದ್ದರು.

***

ಕಾಂಗ್ರೆಸ್ ಪಕ್ಷದಿಂದ ಧರಣಿ

ಆದರ್ಶ ಗ್ರಾಮ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಸಂಪೂರ್ಣವಾಗಿ ಶಿಷ್ಟಾಚಾರ ಉಲ್ಲಂಘನೆ ಮಾಡಿ ಬಿಜೆಪಿ ಕಾರ್ಯಕ್ರಮದಂತೆ ನಡೆಸಲಾಗಿದೆ ಎಂದು ವೇದಿಕೆಯ ಬಳಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಸಣ್ಣ ಭಂಗಿ, ಹೊನ್ನಯ್ಯ ಗಟ್ಟಿಮನಿ, ಹಣಮಂತರಾಯ ಬೆಣಕಲ್, ದೇವಿಂದ್ರಪ್ಪ ಗೌಡೂರ ನೇತೃತ್ವದಲ್ಲಿ ತೆರಳಿ ಪ್ರತಿಭಟನೆ ನಡೆಸಿದರು. ನಂತರ ಗ್ರಾಮ ಪಂಚಾಯಿತಿ ಕಚೇರಿಯ ಮುಂದೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

‘ಅಭಿವೃದ್ಧಿ ಕಾಮಗಾರಿಯಲ್ಲಿ ಅಧಿಕಾರಿಗಳು ಬಿಜೆಪಿ ಮುಖಂಡರ ಅಣತೆಯಂತೆ ನಡೆದುಕೊಂಡು ಪಕ್ಷಪಾತ ಮಾಡಿದ್ದಾರೆ. ಕೊನೆ ಪಕ್ಷ ಗ್ರಾಮ ಪಂಚಾಯಿತಿ ಸದಸ್ಯರನ್ನು ಸಭೆಗೆ ಆಹ್ವಾನಿಸದೆ ಉದ್ದಟತನವನ್ನು ಪ್ರದರ್ಶಿಶಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಬೇಕು’ ಎಂದು ಬಸಣ್ಣ ಭಂಗಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.