ADVERTISEMENT

ತಿಪ್ಪೆಯಾದ ಕಮಲಾ ನೆಹರೂ ಉದ್ಯಾನ

ಎರಡೂವರೆ ವರ್ಷವಾದರೂ ಕಾಮಗಾರಿ ಆರಂಭವಾಗಿಲ್ಲ

ಬಿ.ಜಿ.ಪ್ರವೀಣಕುಮಾರ
Published 18 ಫೆಬ್ರುವರಿ 2020, 9:24 IST
Last Updated 18 ಫೆಬ್ರುವರಿ 2020, 9:24 IST
ಯಾದಗಿರಿಯ ಕಮಲಾ ನೆಹರೂ ಪಾರ್ಕ್‌ ದುಸ್ಥಿತಿ
ಯಾದಗಿರಿಯ ಕಮಲಾ ನೆಹರೂ ಪಾರ್ಕ್‌ ದುಸ್ಥಿತಿ   

ಯಾದಗಿರಿ: 8–10 ವರ್ಷಗಳ ಹಿಂದೆ ಆಕರ್ಷಣೀಯತಾಣವಾಗಿದ್ದ ನಗರದ ಕಮಲಾ ನೆಹರೂ ಪಾರ್ಕ್‌ ಇಂದು ಅಕ್ಷರಶಃ ಹಾಳು ಬಿದ್ದಿದೆ.

ಇದು ಉದ್ಯಾನ ಎನ್ನಲು ಯಾವುದೇ ಕುರುಹುಗಳು ಅಲ್ಲಿಲ್ಲ. ಅಷ್ಟರಮಟ್ಟಿಗೆ ಚಿತ್ರಣ ಬದಲಾಗಿದೆ. ಹಸು, ಎಮ್ಮೆ ಕಟ್ಟುವ ತಾಣವಾಗಿ ಮಾರ್ಪಟ್ಟಿದೆ. ಕಸ ಹಾಕುವ ತಿಪ್ಪೆಯನ್ನಾಗಿ ಅಲ್ಲಿಯ ನಿವಾಸಿಗಳು ಮಾಡಿಕೊಂಡಿದ್ದಾರೆ. ಅಲ್ಲದೆ ಶೌಚ ಮಾಡಲು ಉಪಯೋಗಿಸಿಕೊಳ್ಳುತ್ತಿದ್ದಾರೆ.

₹10 ಲಕ್ಷ ಟೆಂಡರ್: 2016–17ರಲ್ಲಿ ಉದ್ಯಾನದ ಅಭಿವೃದ್ಧಿಗಾಗಿ ಟೆಂಡರ್‌ ಕರೆಯಲಾಗಿತ್ತು. ಆದರೆ, ಇಲ್ಲಿಯವರೆಗೆ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಟೆಂಡರ್ ಆಗಿದೆ ಎನ್ನುವ ನಗರಸಭೆ ಅಧಿಕಾರಿಗಳು ಕಾಮಗಾರಿಗೆ ಇನ್ನೂ ಆದೇಶವನ್ನೇ ನೀಡಿಲ್ಲ. ಇದರಿಂದ ಕಾಮಗಾರಿ ಮತ್ತಷ್ಟು ವಿಳಂಬವಾಗುತ್ತಿದೆ. ಟೆಂಡರ್ ತೆಗೆದುಕೊಂಡವರು ಇತ್ತ ಗಮನ ಹರಿಸಿಲ್ಲ. ಇದರಿಂದ ಉದ್ಯಾನ ಸ್ಥಳ ಮತ್ತಷ್ಟು ಹಾಳು ಬಿದ್ದು, ಯಾರೂ ಬರದಂತಾಗಿದೆ. ಗೇಟು ಕಿತ್ತುಕೊಂಡು ಹೋಗಿದ್ದಾರೆ. ಹುಲ್ಲು ಬೆಳೆದಿದೆ. ಗುಂಡಿ ತೋಡಲಾಗಿದೆ.

ADVERTISEMENT

ಅಕ್ರಮ ಚಟುವಟಿಕೆಗಳ ತಾಣ: ಸಂಜೆಯಾಗುತ್ತಲೇಅಕ್ರಮ ಚಟುವಟಿಕೆಗಳ ತಾಣವಾಗಿ ಇದು ಮಾರ್ಪಡುತ್ತದೆ. ಕುಡಿದು ಬಿಸಾಡಿದ ಬಾಟಲಿಗಳು, ಗುಟಕಾ, ಮತ್ತಿತರ ತ್ಯಾಜ್ಯ ಅಲ್ಲಿ ಗೋಚರಿಸುತ್ತದೆ. ಇಸ್ಪೀಟ್ ಎಲೆಗಳು ಇಲ್ಲಿ ಕಾಣಸಿಗುತ್ತವೆ.

ಟ್ಯಾಂಕ್‌ ಪಕ್ಕದಲ್ಲೇ ಶೌಚ: 1ರಿಂದ 24 ವಾರ್ಡ್‌ಗಳಿಗೆ ಇಲ್ಲಿರುವ ಎರಡು ಬೃಹತ್ ಟ್ಯಾಂಕ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಅದರ ಪಕ್ಕದಲ್ಲಿಯೇ ಶೌಚ ಮಾಡಿ ಮಲಿನ ಮಾಡಲಾಗಿದೆ. ಟ್ಯಾಂಕ್‌ ಸುತ್ತಲೂ ಗಬ್ಬೆದ್ದು ನಾರುತ್ತಿದೆ. ಸಂಬಂಧಿಸಿದವರು ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ದೂರುತ್ತಾರೆ.

ಭದ್ರತಾ ಸಿಬ್ಬಂದಿ ಇಲ್ಲ: 2 ಟ್ಯಾಂಕ್‌ ಇದ್ದರೂ ಭದ್ರತಾ ಸಿಬ್ಬಂದಿಯೇ ಇಲ್ಲಿಲ್ಲ. ಕಳೆದ ವರ್ಷ ಜಿಲ್ಲೆಯ ಮುದನೂರಿನಲ್ಲಿ ಕುಡಿಯುವ ನೀರಿಗೆ ಕೀಡಿಗೇಡಿಗಳು ವಿಷ ಬೆರೆಸಿದ್ದರು. ಇತ್ತೀಚೆಗೆ ವರ್ಕನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ವ್ಯತ್ಯಾಸವಾಗಿ ವಾಂತಿ, ಭೇದಿಯಿಂದ ಹಲವರು ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಘಟನೆ ಕಣ್ಣಮುಂದೆ ಇದ್ದರೂ ನಗರಸಭೆ ಆಡಳಿತ ಸುರಕ್ಷತೆ ದೃಷ್ಟಿಯಿಂದ ಯಾವುದೇ ಭದ್ರತಾ ಸಿಬ್ಬಂದಿಯನ್ನು ನೇಮಿಸಿಲ್ಲ.

‘ಈಗ ಕಮಲಾ ನೆಹರೂ ಉದ್ಯಾನ ನೋಡಿದರೆ ಯಾರು ಊಹಿಸಲಾರದಷ್ಟು ಹಾಳಾಗಿದೆ. ಒಂದು ಕಾಲದಲ್ಲಿ ಅತ್ಯುತ್ತಮ ಉದ್ಯಾನ ಇದಾಗಿತ್ತು. ಅಲ್ಲದೆ ಸ್ಟೇಷನ್ ಕಡೆ ಇರುವವರು ಇಲ್ಲಿಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದರು. ತಮ್ಮ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬರುತ್ತಿದ್ದರು. ಆದರೆ, ಈಗ ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಅಭಿವೃದ್ಧಿ ಮಾಡಬೇಕು’ ಎಂದು 23ನೇ ವಾರ್ಡ್‌ನ ನಿವಾಸಿ ಯಂಕಪ್ಪ ಕೋಲಿ ಆಗ್ರಹಿಸುತ್ತಾರೆ.

***

ಈಗ ಟೆಂಡರ್ ಆಗಿದೆ. ದಾಖಲಾತಿ ಪರಿಶೀಲಿಸಿ ಕಾಮಗಾರಿಗೆ ಆದೇಶ ನೀಡುವುದು ಬಾಕಿ ಇದೆ. ಮುಂದೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.
-ರಮೇಶ ಎಸ್‌ ಸುಣಗಾರ, ಪೌರಾಯುಕ್ತ ನಗರಸಭೆ

ಕಾಮಗಾರಿ ಇನ್ನೂ ಆರಂಭವಾಗಿಲ್ಲ. ನಗರಸಭೆಯಲ್ಲಿ ಈ ಬಗ್ಗೆ ಕೇಳಿದರೂ ಸಮರ್ಪಕ ಉತ್ತರ ದೊರೆಯುತ್ತಿಲ್ಲ. ಅಭಿವೃದ್ಧಿ ಆಗವುದು ಯಾವಾಗ.
-ಅವಿನಾಶ ಜಗನ್ನಾಥ, ಯುವ ಮುಖಂಡ

ವಾರ್ಡ್‌ ಸಂಖ್ಯೆ 1ರಿಂದ 24ರ ತನಕ ಕಮಲಾ ನೆಹರೂ ಪಾರ್ಕ್‌ ಬಳಿ ಇರುವ ಟ್ಯಾಂಕ್‌ನಿಂದ ನೀರು ಪೂರೈಸಲಾಗುತ್ತದೆ. ವಾಲ್‌ಮ್ಯಾನ್‌ಗಳೇ ಅಲ್ಲಿರುತ್ತಾರೆ.
-ಎಂ.ಗಂಗಾಧರ ಗೌಡ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ನಗರಸಭೆ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.