ಸುರಪುರ: ಕಳೆದ ಎರಡು ದಿನಗಳಿಂದ ನಗರದ ತಾಪಮಾನ ಸರ್‍ರನೆ ಇಳಿದಿದೆ. ನಸುಕಿನಲ್ಲಿ ಚಳಿಯ ಪ್ರಭಾವ ಹೆಚ್ಚಾಗಿದ್ದು, ಜನರು ಬೆಳಿಗ್ಗೆ 8 ಗಂಟೆಯವರೆಗೆ ಮನೆಯಿಂದ ಹೊರಗೆ ಬರುತ್ತಿಲ್ಲ.
ಮಹಿಳೆಯರು, ವೃದ್ಧರು, ಮಕ್ಕಳ ಪಾಡಂತು ದೇವರೇ ಬಲ್ಲ ಎಂಬಂತಾಗಿದೆ. ಸ್ವೆಟರ್, ಮಂಕಿಕ್ಯಾಪ್ ಹಾಕಿಕೊಂಡರೂ ಚಳಿ ಬಿಡುತ್ತಿಲ್ಲ. ರಗ್ ಹೊದ್ದುಕೊಂಡು ಮಲಗಿದರೂ ನಡಗುವುದು ತಪ್ಪುತ್ತಿಲ್ಲ. ನಸುಕಿನಲ್ಲಿ ಎದ್ದು ಮನೆ ಮುಂದೆ ರಂಗೋಲಿ ಬಿಡಿಸುವ ಮಹಿಳೆಯರು ಬೆಳಿಗ್ಗೆ 8 ಗಂಟೆಯ ನಂತರ ಏಳುವಂತಾಗಿದೆ.
ವಾಯುವಿಹಾರಕ್ಕೆ ಜನರು ಹೋಗುತ್ತಿಲ್ಲ. ಸಾಮಾನ್ಯವಾಗಿ ಬೆಳಿಗ್ಗೆ 5 ಗಂಟೆಗೆ ನಗರ ಲವಲವಿಕೆಯಿಂದ ಕೂಡಿರುತ್ತಿತ್ತು. ದಿನಪತ್ರಿಕೆ ಹಂಚುವವರು, ಹಾಲು ಹಾಕುವವರು, ತರಕಾರಿ ವ್ಯಾಪಾರಿಗಳು, ಹೂವು ಮಾರುವವರು, ಸಗಟು ವ್ಯಾಪಾರಕ್ಕೆ ತರಕಾರಿ ತರುವ ರೈತರು, ಪೌರ ಕಾರ್ಮಿಕರು ರಸ್ತೆಗಳಲ್ಲಿ ಕಾಣುತ್ತಿದ್ದರು. ಈಗ ಚಳಿಯಿಂದ ಬೆಳಿಗ್ಗೆ 7 ಗಂಟೆವರೆಗೂ ನಗರ ಸ್ತಬ್ಧವಾಗಿರುತ್ತದೆ. ಬೆಳಿಗ್ಗೆ ಹೊರಬಂದರೆ ಮೈಮೇಲೆ ನೀರು ಸುರಿದ ಅನುಭವವಾಗುತ್ತದೆ. ಕೈಕಾಲು ನಡುಗಲು ಆರಂಭವಾಗುತ್ತದೆ. ಚಳಿಯಿಂದ ವಿವಿಧ ಕಾಯಿಲೆಗಳು ಒಕ್ಕರಿಸುತ್ತಿವೆ.
ಶುಕ್ರವಾರ ಬೆಳಿಗ್ಗೆ 6 ಗಂಟೆಗೆ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ತೇವಾಂಶ ಶೇ 90ರಷ್ಟು ಇತ್ತು. ಗಾಳಿಯ ವೇಗ ಪ್ರತಿ ಗಂಟೆಗೆ 20 ಕಿ.ಮೀ ದಾಖಲಾಗಿತ್ತು. ಬೆಳಿಗ್ಗೆ 8 ಗಂಟೆ ಹೊತ್ತಿಗೆ ಸೂರ್ಯ ಕಾಣಿಸುತ್ತಿದ್ದಂತೆ ಬಿಸಿಯ ಅನುಭವ ಬಂದು ತಾಪಮಾನ 22 ಡಿ.ಸೆ ಗೆ ಏರಿತು. ಗುರುವಾರ ನಸುಕಿನಲ್ಲಿ 18 ಡಿ.ಸೆ ತಾಪಮಾನವಿತ್ತು. ಮುಂದಿನ ಒಂದು ವಾರದವರೆಗೆ ತಂಪಾದ ಹವೆ ಇರುತ್ತದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಅತಿಯಾದ ಚಳಿ ಆರೋಗ್ಯಕ್ಕೆ ಮಾರಕ. ಚಳಿಯ ಜತೆಗೆ ತಂಪಾದ ಗಾಳಿಯೂ ಬೀಸುತ್ತಿದೆ. ಜನರು ಆರೋಗ್ಯದ ಕಡೆ ಲಕ್ಷ್ಯ ಕೊಡಬೇಕು. ಚಳಿಯಿಂದ ರಕ್ಷಿಸಿಕೊಳ್ಳಬೇಕುಡಾ.ಮುಕುಂದ ಯನಗುಂಟಿ ವೈದ್ಯ
ಅತಿಯಾದ ಚಳಿಯಿಂದ ನಡುಗುವಂತಾಗಿದೆ. ಮನೆಯಿಂದ ಹೊರ ಬರದ ಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿದ್ದರೂ ಬೆಚ್ಚಗೆ ಇರಬೇಕಾಗಿದೆಲಕ್ಷ್ಮಣ ಗುತ್ತೇದಾರ ಹಿರಿಯ ನಾಗರಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.