ADVERTISEMENT

ರೋಗಗಳ ನಿಯಂತ್ರಣಕ್ಕೆ ನೀಡುವ ರೋಗ ನಿರೋಧಕ ಲಸಿಕೆ ಭಯ ಬೇಡ

ಮಿಷನ್ ಇಂದ್ರಧನುಷ್‌ 3.0 ಗೆ ಜಿಲ್ಲಾಧಿಕಾರಿ ರಾಗಪ್ರಿಯಾ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 3:19 IST
Last Updated 2 ಮಾರ್ಚ್ 2021, 3:19 IST
ಯಾದಗಿರಿಯಲ್ಲಿ ತೀವ್ರಗೊಂಡ ಮಿಷನ್ ಇಂದ್ರಧನುಷ್‌ 3.0 ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಜಿಪಂ ಸಿಇಒ ಶಿಲ್ಪಾ ಶರ್ಮಾ ಇದ್ದರು
ಯಾದಗಿರಿಯಲ್ಲಿ ತೀವ್ರಗೊಂಡ ಮಿಷನ್ ಇಂದ್ರಧನುಷ್‌ 3.0 ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಜಿಪಂ ಸಿಇಒ ಶಿಲ್ಪಾ ಶರ್ಮಾ ಇದ್ದರು   

ಯಾದಗಿರಿ: ‘ಪೋಲಿಯೊ ಸೇರಿದಂತೆ ಇತರ ರೋಗಗಳ ನಿಯಂತ್ರಣಕ್ಕೆ ನೀಡುವ ಲಸಿಕೆಗಳ ಬಗ್ಗೆ ಭಯ ಪಡದೇ ಪೋಷಕರು ಧೈರ್ಯದಿಂದ ತಮ್ಮ ಮಕ್ಕಳಿಗೆ ಲಸಿಕೆ ಕೊಡಿಸಿ’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಸಲಹೆ ನೀಡಿದರು.

ನಗರದ ಗಾಂಧಿ ಚೌಕ್‍ನಲ್ಲಿರುವ ಪಂಪ ಮಹಾಕವಿ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ತೀವ್ರಗೊಂಡ ಮಿಷನ್ ಇಂದ್ರಧನುಷ್‌ 3.0 ಉದ್ಘಾಟನಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪೋಲಿಯೊ ಹನಿ ಹಾಕಿ ಅವರು ಮಾತನಾಡಿದರು.

‘ಚಿಕ್ಕ ವಯಸ್ಸಿನಲ್ಲಿ ಪೋಲಿಯೊ ಮತ್ತು ಇನ್ನಿತರ ರೋಗಗಳಿಂದ ಬಳಲುವ ಮಕ್ಕಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಇಂದ್ರಧನುಷ್‌ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಡಿಪಿಟಿ, ಟಿಟಿ, ಪೋಲಿಯೊ ಲಸಿಕೆ ಸೇರಿದಂತೆ ಹತ್ತು ಲಸಿಕೆಗಳನ್ನು ನೀಡುವ ಉದ್ದೇಶ ಹೊಂದಿದೆ’ ಎಂದರು.

ADVERTISEMENT

‘ಜನರು ಲಸಿಕೆಗಳನ್ನು ಪಡೆಯುವ ಮೂಲಕ ರೋಗಮುಕ್ತರಾಗಬೇಕು. ಹಳ್ಳಿಯಿಂದ ನಗರದವರೆಗೆ ಸರ್ವೇ ಮಾಡಿಸಿ ಲಸಿಕೆ ಪಡೆಯದವರನ್ನು ಗುರುತಿಸಿ’ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಶೇಕಡ 82 ರಷ್ಟು ಲಸಿಕೆ ನೀಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳ ಕಾರ್ಯ ಶ್ಲಾಘಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಕಲಬುರ್ಗಿಯ ವಿಭಾಗದ ಎಸ್‌ಎಂಒ ಅನಿಲಕುಮಾರ ತಾಳಿಕೋಟಿ ಮಾತನಾಡಿ, ‘ಕಳೆದ ವರ್ಷ ಕೋವಿಡ್-19ನಿಂದಾಗಿ ವಿವಿಧ ಲಸಿಕೆಗಳಿಂದ ವಂಚಿತರಾಗಿದ್ದ 2 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆ ನೀಡುವುದು ಮಿಷನ್ ಇಂದ್ರಧನುಷ್‌ ಉದ್ದೇಶವಾಗಿದೆ’ ಎಂದರು.

‘ಇಂದ್ರಧನುಷ್‌ ಕಾರ್ಯಕ್ರಮ ಮಾರ್ಚ್‌ 1ರಿಂದ 5ರವರೆಗೆ 5 ದಿನಗಳ ಕಾಲ ನಡೆಯಲಿದೆ. ಜಿಲ್ಲೆಯ 2 ವರ್ಷದೊಳಗಿನ 393 ಮಕ್ಕಳಿಗೆ ಹಾಗೂ 321 ಗರ್ಭಿಣಿಯರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, ಇದರ ಲಾಭ ಪಡೆದುಕೊಳ್ಳುವಂತೆ’ ತಿಳಿಸಿದರು.

ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಶಸ್ತ್ರಚಿಕಿತ್ಸಕ ಬಸಯ್ಯಸ್ವಾಮಿ, ಆರ್‌ಸಿಎಚ್‌ ಅಧಿಕಾರಿ ಡಾ.ಸೂರ್ಯಪ್ರಕಾಶ ಕಂದಕೂರ, ಹಿರಿಯ ವೈದ್ಯಾಧಿಕಾರಿ ಡಾ.ಭಗವಂತ ಅನ್ವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.